ಆದಿಪುರುಷ್ (Adipurush) ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ ಕಲೆಕ್ಷನ್ನಲ್ಲಿ (Box Office Collection) ಭಾರಿ ಇಳಿಕೆ ಕಂಡಿದೆ. ಸೋಮವಾರದ ಬಳಿಕ ಆದಿಪುರುಷ್ ಸಿನಿಮಾದ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳು ಅರ್ಧದಷ್ಟು ಸಹ ತುಂಬುತ್ತಿಲ್ಲ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆದ ಮೊದಲ ಮೂರು ದಿನ ಅಭಿಮಾನಿಗಳು ಚಿತ್ರಮಂದಿರ (Theater) ತುಂಬಿಸಿದರೆ ಆ ನಂತರದ ದಿನಗಳನ್ನು ಫ್ಯಾಮಿಲಿ ಆಡಿಯೆನ್ಸ್ ತುಂಬಿಸುತ್ತಾರೆ ಎಂಬುದು ಸಾಮಾನ್ಯ ಲೆಕ್ಕಾಚಾರ. ಆದರೆ ಬಿಡುಗಡೆ ಆದಂದಿನಿಂದಲೂ ತೀವ್ರ ಋಣಾತ್ಮಕ ವಿಮರ್ಶೆಗಳು ಹರಿದಾಡುತ್ತಿರುವ ಕಾರಣ ಆದಿಪುರುಷ್ ಸಿನಿಮಾ ನೋಡಲು ಫ್ಯಾಮಿಲಿ ಆಡಿಯೆನ್ಸ್ ಆಸಕ್ತಿ ತೋರುತ್ತಿಲ್ಲ. ಆದರೆ ಅವರನ್ನು ಚಿತ್ರಮಂದಿರದತ್ತ ಎಳೆದು ತರಲು ಚಿತ್ರತಂಡ ಆಫರ್ ಒಂದನ್ನು ನೀಡಿದೆ.
ಆದಿಪುರುಷ್ ಚಿತ್ರತಂಡವು ಸಿನಿಮಾ ಟಿಕೆಟ್ ದರವನ್ನು ತಗ್ಗಿಸಿದೆ. ಪಿವಿಆರ್, ಐನಾಕ್ಸ್, ಸಿನೆಪೊಲೀಸ್ ಇತರೆ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 150 ರುಪಾಯಿಗೆ ಆದಿಪುರುಷ್ ಸಿನಿಮಾ ನೋಡಬಹುದಾಗಿದೆ ಅದೂ 3ಡಿಯಲ್ಲಿ. ಆದರೆ ಈ ಆಫರ್ ಕೇವಲ ಎರಡು ದಿನ ಮಾತ್ರವೇ ಇರಲಿದೆ. ಜೂನ್ 22 ಹಾಗೂ 23 ರಂದು ಮಾತ್ರವೇ 150 ರುಪಾಯಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾವನ್ನು ನೋಡಬಹುದಾಗಿದೆ. ಅದಾದ ಬಳಿಕ ದರ ತುಸು ಹೆಚ್ಚಾಗಲಿದೆ. ಸಿನಿಮಾದ ನಾಯಕಿ ಕೃತಿ ಸೆನನ್ ಸೇರಿದಂತೆ ಹಲವರು ಚಿತ್ರತಂಡ ನೀಡಿರುವ ಈ ಆಫರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಕೆಲವು ದೃಶ್ಯಗಳು ಹಾಗೂ ಸಂಭಾಷಣೆಗಳನ್ನು ಬದಲಿಸಿರುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ.
ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಆದಿಪುರುಷ್ ಸಿನಿಮಾದ 3ಡಿ ಪ್ರದರ್ಶನದ ಟಿಕೆಟ್ 180 ರಿಂದ ಪ್ರಾರಂಭವಾಗಿ 400 ರವರೆಗೂ ಇದೆ. ತೀರ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಮಾತ್ರವೇ 150 ರುಪಾಯಿ ಬೆಲೆಯ ಟಿಕೆಟ್ ಇಂದು ಲಭ್ಯವಾಗುತ್ತಿದೆ. ಈ ಸಿನಿಮಾ ಬಿಡುಗಡೆ ಆದ ದಿನ ಟಿಕೆಟ್ ಬೆಲೆ ಗಗನದಲ್ಲಿತ್ತು, ದುಬಾರಿ ಟಿಕೆಟ್ ಬೆಲೆಯಿಂದ ಸಹ ಕುಟುಂಬಗಳು ಚಿತ್ರಮಂದಿರದಿಂದ ದೂರವೇ ಉಳಿದಿದ್ದವು. ಈ ಎರಡು ದಿನ ಟಿಕೆಟ್ ಬೆಲೆ ಕಡಿಮೆ ಮಾಡಿರುವುದರಿಂದಲಾದರೂ ಫ್ಯಾಮಿಲಿ ಆಡಿಯೆನ್ಸ್ ಚಿತ್ರಮಂದಿರಕ್ಕೆ ಹೋಗುತ್ತಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ:Kriti Sanon: ಟ್ರೋಲ್ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್
ಒಟ್ಟಾರೆಯಾಗಿ ಆದಿಪುರುಷ್ ಸಿನಿಮಾದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈಗಾಗಲೇ ಕೆಲವೆಡೆ ಸಿನಿಮಾದ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಕೆಲವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಒಟ್ಟಾರೆಯಾಗಿ ಸಿನಿಮಾದ ವಿರುದ್ಧ ತೀವ್ರ ಆಕ್ಷೇಪದ ದನಿಗಳು ಕೇಳಿ ಬರುತ್ತಿವೆ. ಹೀಗಿರುವಾಗಲೂ ಸಿನಿಮಾ ಈವರೆಗೆ ಉತ್ತಮ ಮೊತ್ತವನ್ನೇ ಕಲೆಕ್ಷನ್ ಮಾಡಿದೆ. ಚಿತ್ರತಂಡವೇ ಹೇಳಿಕೊಂಡಿರುವಂತೆ ಐದು ದಿನಕ್ಕೆ 395 ಕೋಟಿ ಮೊತ್ತವನ್ನು ಸಿನಿಮಾ ವಿಶ್ವದೆಲ್ಲೆಡೆ ಕಲೆ ಹಾಕಿದೆ.
ಆದಿಪುರುಷ್ ಸಿನಿಮಾವು ರಾಮಾಯಣದ ಕತೆ ಆಧರಿಸಿದ್ದು ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಸೀತೆ ಮಾತ್ರದಲ್ಲಿ ಕೃತಿ ಸೆನನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಾಗರೆ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದು ನಿರ್ಮಾಣ ಮಾಡಿರುವುದು ಟಿ-ಸೀರೀಸ್ನ ಭೂಷಣ್ ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ