AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರನಾಗಿ ಮತ್ತೆ ಬಾಲಿವುಡ್​ಗೆ ಕಾಲಿಟ್ಟ ಧನುಶ್, ಟೀಸರ್ ನೋಡಿ ಅತ್ಯದ್ಭುತ ಎಂದ ಅಭಿಮಾನಿಗಳು

Dhanush: ಧನುಶ್ ಮತ್ತೆ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಇಂದಿಗೆ (ಜೂನ್ 21) ಹತ್ತು ವರ್ಷದ ಹಿಂದೆ ಬಿಡುಗಡೆ ಆಗಿ ಮೋಡಿ ಮಾಡಿದ್ದ ಅದೇ ಸಿನಿಮಾದ ತಂಡದೊಟ್ಟಿಗೆ ಧನುಶ್ ಮತ್ತೆ ಕೈಜೋಡಿಸಿದ್ದಾರೆ.

ಶಂಕರನಾಗಿ ಮತ್ತೆ ಬಾಲಿವುಡ್​ಗೆ ಕಾಲಿಟ್ಟ ಧನುಶ್, ಟೀಸರ್ ನೋಡಿ ಅತ್ಯದ್ಭುತ ಎಂದ ಅಭಿಮಾನಿಗಳು
ಧನುಶ್
Follow us
ಮಂಜುನಾಥ ಸಿ.
|

Updated on: Jun 21, 2023 | 8:41 PM

ನಟ ಧನುಶ್​ಗೆ (Dhanush) ತಮಿಳು (Kollywood) ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ. ಅಂತೆಯೇ ಬಾಲಿವುಡ್ (Bollywood) ಸಿನಿಮಾ ವೀಕ್ಷಕರಲ್ಲಿಯೂ ದೊಡ್ಡ ಅಭಿಮಾನಿ ವರ್ಗವಿದೆ. ಅದಕ್ಕೆ ಕಾರಣ ಅವರ ರಾಂಝಣಾ (Raanjhanaa) ಸಿನಿಮಾ. ಹತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ರಾಂಝಣಾ ಸಿನಿಮಾ ಬಾಲಿವುಡ್​ನಲ್ಲಿ ಈವರೆಗೆ ಬಿಡುಗಡೆ ಆದ ಅತ್ಯುತ್ತಮ ಪ್ರೇಮಕತೆಗಳಲ್ಲಿ ಒಂದು. ಕಲ್ಟ್ ಕ್ಲಾಸಿಕ್ ಆಗಿ ಸಿನಿಮಾ ಪ್ರೇಮಿಗಳ ಹೃದಯದಲ್ಲಿ ಈ ಸಿನಿಮಾ ನೆಲೆ ನಿಂತಿದೆ. ರಾಂಝಣಾ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷವಾದ ಬೆನ್ನಲ್ಲೆ ಅದೇ ಚಿತ್ರತಂಡ ಇದೀಗ ಹೊಸ ಸಿನಿಮಾ ಘೋಷಿಸಿದ್ದು, ರಾಂಝಣಾ ಸಿನಿಮಾದ ಮುಂದಿನ ಭಾಗದಂತೆಯೇ ಈ ಸಿನಿಮಾ ಇರುವ ಕುರುಹನ್ನು ಟೀಸರ್ ನೀಡಿದೆ.

ಧನುಷ್, ತುಟಿಯ ಮಧ್ಯೆ ಉರಿವ ಸಿಗರೇಟು ಅದುಮಿಟ್ಟುಕೊಂಡು, ಕೈಯಲ್ಲಿ ಬೆಂಕಿ ಸೋಗಿಸಿದ ಬಾಟಲಿ ಹಿಡಿದುಕೊಂಡು ಕತ್ತಲಲ್ಲಿ, ಆಕ್ರೋಶ ತುಂಬಿದ ಕಣ್ಣುಗಳನ್ನು ಮಿಟುಕಿಸದೆ ಗಮ್ಯವೊಂದರ ಕಡೆಗೆ ಓಡಿ ಬರುತ್ತಿದ್ದಾರೆ. ಅವರು ಓಡುತ್ತಿರುವ ರಸ್ತೆಯಲ್ಲಿ ನಿಂತಿರುವ ಬಸ್ಸಿನ ಕಿಟಕಿ ಗಾಜು ಒಡೆದು ಚೂರುಗಳು ಧನುಶ್ ಮೇಲೆ ಬೀಳುತ್ತಿದ್ದರೂ ಅದರ ಪರಿವೆ ಇಲ್ಲದೆ ಓಡಿ ಬಂದು ಗೋಡೆಯೊಂದಕ್ಕೆ ಆ ಬೆಂಕಿ ಸೋಗಿದ ಬಾಟಲಿ ಒಗೆಯುತ್ತಾರೆ ಧನುಶ್. ಆ ಗೋಡೆಯ ಮೇಲೆ ರಾಂಝಣಾ ಎಂದು ಬರೆದಿದೆ, ಬೆಂಕಿಯುಳ್ಳ ಬಾಟಲಿ ಗೋಡೆಗೆ ಸೋಗುತ್ತಿದ್ದಂತೆ ಗೋಡೆಯೆಲ್ಲಾ ಬೆಂಕಿ ಆವರಿಸಿ ಅದರ ಪಕ್ಕ ನಿಂತ ಬಂಡಿಗೂ ಬೆಂಕಿ ತಗುಲುತ್ತದೆ, ಗೋಡೆಯ ಮೇಲೆ ಬರೆದಿರುವ ರಾಂಝಣಾ ಹೆಸರು ಅಳಿಸಿ ಹೋಗಿ ‘ತೇರೆ ಇಷ್ಕ್​ ಮೇ’ ಎಂದು ಅಕ್ಷರ ಮೂಡುತ್ತದೆ. ಇದು ಈಗ ಬಿಡುಗಡೆ ಆಗಿರುವ ಧನುಶ್​ರ ಹೊಸ ಹಿಂದಿ ಸಿನಿಮಾದ ಟೀಸರ್.

ಟೀಸರ್​ನಲ್ಲಿ ಕೇಳಿ ಬರುವ ಧನುಶ್​ರದ್ದೇ ದನಿಯಲ್ಲಿರುವ ಹಿನ್ನೆಲೆ ದನಿ, ಈ ಸಿನಿಮಾ ರಾಂಝಣಾ ಸಿನಿಮಾದ ಮುಂದಿನ ಭಾಗವಾ ಎಂಬ ಅನುಮಾನವನ್ನೂ ಮೂಡಿಸುವಂತಿದೆ. ಅಥವಾ ರಾಂಝಣಾ ಸಿನಿಮಾಕ್ಕಿಂತಲೂ ಭಿನ್ನವಾದ ಅಥವಾ ಒರಟಾದ ಧನುಶ್​ರನ್ನು ‘ತೇರೆ ಇಷ್ಕ್ ಮೇ’ ಸಿನಿಮಾದಲ್ಲಿ ಪ್ರೇಕ್ಷಕರು ನೋಡಲಿದ್ದಾರೆ ಎಂಬ ಅನುಮಾನ ಮೂಡಿಸುತ್ತಿದೆ. ”ಹಿಂದೆ ಕುಂದನ್ ಆಗಿದ್ದೆ ಒಪ್ಪಿಬಿಟ್ಟೆ, ಈಗ ಶಂಕರನನ್ನು ಹೇಗೆ ತಡೆಯುತ್ತೀಯ” ಎಂಬ ಸಂಭಾಷಣೆ ಟೀಸರ್​ನ ಕೊನೆಯಲ್ಲಿದೆ. ಕುಂದನ್ ರಾಂಝಣಾ ಸಿನಿಮಾದ ನಾಯಕನ ಹೆಸರು.

ಇದನ್ನೂ ಓದಿ:Dhanush: ಟ್ರೋಲ್ ಆಯ್ತು ಧನುಶ್​ ಹೊಸ ಗೆಟಪ್​; ಬಾಬಾ ರಾಮ್​ದೇವ್​ ಬಯೋಪಿಕ್​ಗೆ ತಯಾರಿ ನಡೀತಾ ಇದೆಯಾ?

ರಾಂಝಣಾ ಸಿನಿಮಾ ನಿರ್ದೇಶಿಸಿದ್ದ ಆನಂದ್ ಎಲ್ ರೈ ಅವರೇ ತೇರೆ ಇಷ್ಕ್ ಮೇ ಸಿನಿಮಾವನ್ನೂ ನಿರ್ದೇಶನ ಮಾಡಲಿದ್ದಾರೆ. ರಾಂಝಣಾ ಸಿನಿಮಾ ಬಿಡುಗಡೆ ಆಗಿ ಬರೋಬ್ಬರಿ ಹತ್ತು ವರ್ಷವಾದ ಸಂದರ್ಭದಲ್ಲಿಯೇ ಈಗ ತೇರೆ ಇಷ್ಕ್ ಮೇ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿ ರಾಂಝಣಾ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟು ಹಾಕಲಾಗಿದೆ. ಈ ಹಿಂದೆ ಅತರಂಗಿ ರೇ ಸಿನಿಮಾದಲ್ಲಿ ಧನುಶ್ ಹಾಗೂ ಆನಂದ್ ಎಲ್ ರೈ ಒಟ್ಟಾಗಿದ್ದರು. ಆ ಸಿನಿಮಾವನ್ನು ಬಹಳಷ್ಟು ಜನ ಮೆಚ್ಚಿದ್ದರಾದರೂ ಸಿನಿಮಾ ಅಂದುಕೊಂಡಷ್ಟು ಯಶಸ್ಸು ಗಳಿಸಲಿಲ್ಲ. ಸಿನಿಮಾದಲ್ಲಿ ಧನುಶ್, ಸಾರಾ ಅಲಿ ಖಾನ್ ನಟಿಸಿದ್ದರು, ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರಿಗೂ ಮುಖ್ಯ ಪಾತ್ರವಿತ್ತು.

ಈಗ ಮತ್ತೆ ಧನುಶ್ ಹಾಗೂ ಆನಂದ್ ಎಲ್ ರೈ ಒಂದಾಗುತ್ತಿದ್ದು ಈ ಬಾರಿ ಯಾವ ಮ್ಯಾಜಿಕ್ ಮಾಡುತ್ತಾರೆ ಕಾದು ನೋಡಬೇಕಿದೆ. ಧನುಶ್ ಪ್ರಸ್ತುತ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಬಳಿಕ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಬಹುಷಃ ತೇರೆ ಇಷ್ಕ್ ಮೇ ಸಿನಿಮಾದ ಚಿತ್ರೀಕರಣ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ