ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಆಕ್ಷನ್ ಕಟ್ ಹೇಳಿ ಅಭಿನಯಿಸಿರುವ ಚಿತ್ರ ‘ರನ್ವೇ 34’ (Runway 34) ತೆರೆಗೆ ಬರಲು ಸಿದ್ಧವಾಗಿದೆ. ಇದೇ ಏಪ್ರಿಲ್ 29ರಂದು ಚಿತ್ರ ತೆರೆಕಾಣಲಿದೆ. ಈದ್ ಸಂದರ್ಭದಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದರ ಬಗ್ಗೆ ಪಿಂಕ್ವಿಲ್ಲಾ ಜತೆ ಅಜಯ್ ದೇವಗನ್ ಮಾತನಾಡಿದ್ದು, ಕುತೂಹಲಕರ ವಿಚಾರ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈದ್ ಸಂದರ್ಭದಲ್ಲಿ ಸಾಮಾನ್ಯವಾಗಿ ಸಲ್ಮಾನ್ ಖಾನ್ ಸಿನಿಮಾಗಳು ತೆರೆಕಾಣುತ್ತವೆ. ಅವರ ಇತ್ತೀಚಿನ ಎಲ್ಲಾ ಚಿತ್ರಗಳೂ ರಿಲೀಸ್ ಆಗಿರುವುದು ಈದ್ ದಿನದಂದೇ. ಹೀಗಿರುವಾಗ ‘ರನ್ವೇ 34’ ತೆರೆಕಾಣುವ ಸಮಯದಲ್ಲಿಯೇ ಈದ್ ಕೂಡ ಬರುತ್ತದೆ ಎಂದು ತಿಳಿದ ಅಜಯ್ ದೇವಗನ್ ತಕ್ಷಣ ಸಲ್ಮಾನ್ ಕರೆ ಮಾಡಿದ್ದರಂತೆ. ಸಲ್ಮಾನ್ ಉತ್ತರ ಏನಾಗಿತ್ತು ಎನ್ನುವುದನ್ನು ನಟ ವಿವರಿಸಿದ್ದಾರೆ.
ಸಲ್ಮಾನ್ ಖಾನ್ ನಟನೆಯ ‘ರಾಧೆ’, ‘ಯುವರ್ ಮೋಸ್ಟ್ ವಾಂಟೆಡ್ ಭಾಯಿ’, ‘ಭಾರತ್’, ‘ಸುಲ್ತಾನ್’, ‘ಟ್ಯೂಬ್ಲೈಟ್’ ಮೊದಲಾದ ಚಿತ್ರಗಳು ಈದ್ ಸಮಯದಲ್ಲಿ ತೆರೆಕಂಡಿದ್ದವು. ಪಿಂಕ್ವಿಲ್ಲಾ ಜತೆಗೆ ಮಾತನಾಡುತ್ತಾ, ಅಜಯ್ ಸಲ್ಮಾನ್ಗೆ ಚಿತ್ರದ ರಿಲೀಸ್ ಬಗ್ಗೆ ತಿಳಿಸಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
‘‘ನನ್ನ ಉದ್ದೇಶ ಈದ್ ಸಮಯದಲ್ಲಿ ರಿಲೀಸ್ ಮಾಡುವುದಾಗಿರಲಿಲ್ಲ. ಆದರೆ ನಾವು ಯೋಜಿಸಿದ್ದ ದಿನಾಂಕ ಈದ್ಗೆ ಸಮೀಪವಿತ್ತು. ಈದ್ ಚಿತ್ರದ ರಿಲೀಸ್ ವಾರವೇ ಬರಲಿದೆ ಎಂಬುದು ನಂತರ ತಿಳಿಯಿತು. ವಿಷಯ ತಿಳಿದ ತಕ್ಷಣ ಸಲ್ಮಾನ್ಗೆ ಫೋನ್ ಮಾಡಿದೆ’’ ಎಂದಿದ್ದಾರೆ ಅಜಯ್ ದೇವಗನ್. ಈ ಬಾರಿಯ ಈದ್ ಸೋಮವಾರ ಅಥವಾ ಮಂಗಳವಾರ ಆಚರಿಸಲಾಗುತ್ತದೆ.
ಸಲ್ಮಾನ್ಗೆ ಕರೆ ಮಾಡಿ, ‘‘ನಾನು ಈ ದಿನಾಂಕದಂದು ಸಿನಿಮಾ ರಿಲೀಸ್ ಘೋಷಿಸಿದ್ದೇನೆ. ಅದೇ ಸಮಯದಲ್ಲಿ ಈದ್ ಬರುತ್ತದೆ. ನಿಮಗೆ ಒಪ್ಪಿಗೆಯೇ?’’ ಎಂದು ಅಜಯ್ ಪ್ರಶ್ನಿಸಿದರಂತೆ. ಅದಕ್ಕೆ ಉತ್ತರಿಸಿದ ಸಲ್ಮಾನ್, ‘‘ಏನೂ ತಲೆಬಿಸಿ ಮಾಡಿಕೊಳ್ಳಬೇಡಿ. ನಾನು ಆ ವಾರ ಬರುವುದಿಲ್ಲ. ಮುಂದಿನ ವರ್ಷದ ಈದ್ ಸಮಯದಲ್ಲಿ ಬರುತ್ತೇನೆ’’ ಎಂದರಂತೆ. ಇದರಿಂದ ಸಮಾಧಾನವಾಯಿತು ಎಂದಿದ್ದಾರೆ ಅಜಯ್ ದೇವಗನ್.
ಸಿನಿಮಾ ಹಬ್ಬಕ್ಕೆ ಕನೆಕ್ಟ್ ಆಗಿರುತ್ತದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಜನರು ಆಗಮಿಸುತ್ತಾರೆ ಎಂದಿದ್ದಾರೆ ಅಜಯ್ ದೇವಗನ್. ಸಲ್ಮಾನ್ ಕೇವಲ ಅಜಯ್ಗೆ ಅಭಯವನ್ನಷ್ಟೇ ನೀಡಿಲ್ಲ. ಕಳೆದ ಕೆಲವು ಸಮಯದ ಹಿಂದೆ ‘ರನ್ವೇ 34’ ಟೀಸರ್ ರಿಲೀಸ್ ಮಾಡಿ ಶುಭವನ್ನೂ ಕೋರಿದ್ದರು. ಜತೆಗೆ ಅಭಿಮಾನಿಗಳಲ್ಲೂ ಅಜಯ್ಗೆ ತಿಳಿಸಿದ್ದ ವಿಚಾರವನ್ನೇ ಸಲ್ಮಾನ್ ತಿಳಿಸಿದ್ದಾರೆ. ‘‘ನನ್ನ ಯಾವ ಚಿತ್ರಗಳೂ ಈ ಈದ್ಗೆ ರಿಲೀಸ್ ಆಗುತ್ತಿಲ್ಲ. ಬದಲಾಗಿ ಸಹೋದರ ಅಜಯ್ ದೇವಗನ್ ಚಿತ್ರದೊಂದಿಗೆ ಈದ್ ಆಚರಿಸೋಣ’’ ಎಂದು ಸಲ್ಮಾನ್ ಬರೆದಿದ್ದರು.
ಸಲ್ಮಾನ್ ಹಂಚಿಕೊಂಡಿದ್ದ ಪೋಸ್ಟ್:
ಅಜಯ್ ದೇವಗನ್ ಇತ್ತೀಚೆಗೆ ಡಿಸ್ನೆ+ ಹಾಟ್ಸ್ಟಾರ್ನಲ್ಲಿ ತೆರೆಕಂಡ ‘ರುದ್ರ’ ಸೀರೀಸ್ನಲ್ಲಿ ಕಾಣಿಸಿಕೊಂಡಿದ್ದರು. ‘ಆರ್ಆರ್ಆರ್’ ಚಿತ್ರದಲ್ಲೂ ನಟ ಅಭಿನಯಿಸಿದ್ದರು. ತಮಿಳಿನ ‘ಕೈಥಿ’ ಚಿತ್ರದ ರಿಮೇಕ್ ‘ಭೋಲಾ’ದಲ್ಲಿ ನಟ ಬಣ್ಣಹಚ್ಚುತ್ತಿದ್ದಾರೆ.
ಇದನ್ನೂ ಓದಿ: Keerthy Suresh: ‘ಗ್ಲಾಮರಸ್ ಪಾತ್ರಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ?’; ಕೀರ್ತಿ ಸುರೇಶ್ ಉತ್ತರ ಹೀಗಿತ್ತು
ಆಸ್ಪತ್ರೆಯಲ್ಲೂ ಭುವಿ ಕೊಲ್ಲಲು ನಡೆಯಿತು ಪ್ರಯತ್ನ; ಹರ್ಷನ ಸಂತಸಕ್ಕೆ ಬ್ರೇಕ್?
Published On - 2:21 pm, Tue, 26 April 22