ಹಿಂದಿ ಸಿನಿಮಾ ನಿರ್ಮಾಣ ಮಾಡುವುದು ಅತ್ಯಂತ ಕಷ್ಟದ ಕೆಲಸ: ಅಜಯ್ ದೇವ್‌ಗನ್

ಅಜಯ್ ದೇವಗನ್ ನಟನೆಯ ಹೊಸ ಸಿನಿಮಾ ‘ದೃಶ್ಯಂ 3’ ರಿಲೀಸ್​​ಗೆ ಸಿದ್ಧವಾಗಿದೆ. ಆದರೆ ಈ ನಡುವೆ ಸಿನಿಮಾ ನಿರ್ಮಾಣದ ಬಗ್ಗೆ ವಿಶೇಷವಾಗಿ ಬಾಲಿವುಡ್​​ನಲ್ಲಿ ಸಿನಿಮಾ ನಿರ್ಮಾಣದ ಬಗ್ಗೆ ಆಸಕ್ತಿದಾಯಕ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ. ಪ್ರಾದೇಶಿಕ ಚಲನಚಿತ್ರಗಳಿಗೆ ಹೋಲಿಸಿದರೆ ಹಿಂದಿ ಭಾಷೆಯಲ್ಲಿ ಸಿನಿಮಾ ನಿರ್ಮಿಸುವುದು ಅತ್ಯಂತ ಕಷ್ಟಕರವಾದ ಕೆಲಸ ಎಂದಿದ್ದಾರೆ.

ಹಿಂದಿ ಸಿನಿಮಾ ನಿರ್ಮಾಣ ಮಾಡುವುದು ಅತ್ಯಂತ ಕಷ್ಟದ ಕೆಲಸ: ಅಜಯ್ ದೇವ್‌ಗನ್
Ajay Devgn

Updated on: Oct 01, 2026 | 12:44 PM

ಮುಖ್ಯಾಂಶಗಳು

  • ಬಾಲಿವುಡ್ ಬಗ್ಗೆ ಅಜಯ್ ದೇವಗನ್ ಮಾತು
  • ಹಿಂದಿ ಸಿನಿಮಾ ನಿರ್ಮಾಣ ಕಷ್ಟ ಎಂದಿದ್ದಾರೆ ಅಜಯ್
  • ‘ದೃಶ್ಯಂ 3’ ರಿಲೀಸ್ ಆಗಲಿದೆ ಶೀಘ್ರ

ನಟ ಅಜಯ್ ದೇವ್‌ಗನ್ ದಶಕಗಳಿಂದಲೂ ಹಿಂದಿ ಚಿತ್ರರಂಗದಲ್ಲಿದ್ದಾರೆ. ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ನಟನೆ ಮಾತ್ರವಲ್ಲದೆ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ನಟನೆಯ ಹೊಸ ಸಿನಿಮಾ ‘ದೃಶ್ಯಂ 3’ ರಿಲೀಸ್​​ಗೆ ಸಿದ್ಧವಾಗಿದೆ. ಆದರೆ ಈ ನಡುವೆ ಸಿನಿಮಾ ನಿರ್ಮಾಣದ ಬಗ್ಗೆ ವಿಶೇಷವಾಗಿ ಬಾಲಿವುಡ್​​ನಲ್ಲಿ ಸಿನಿಮಾ ನಿರ್ಮಾಣದ ಬಗ್ಗೆ ಆಸಕ್ತಿದಾಯಕ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ. ಪ್ರಾದೇಶಿಕ ಚಲನಚಿತ್ರಗಳಿಗೆ ಹೋಲಿಸಿದರೆ ಹಿಂದಿ ಭಾಷೆಯಲ್ಲಿ ಸಿನಿಮಾ ನಿರ್ಮಿಸುವುದು ಅತ್ಯಂತ ಕಷ್ಟಕರವಾದ ಕೆಲಸ ಎಂದಿದ್ದಾರೆ.

FICCI ಫ್ರೇಮ್ಸ್ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಂತಹ ವೈವಿಧ್ಯಮಯ ದೇಶದಲ್ಲಿ ನಿರ್ದಿಷ್ಟ ಪ್ರೇಕ್ಷಕರನ್ನು ಗುರಿಯಾಗಿಸುವುದು ನಿರ್ಮಾಪಕರಿಗೆ ಬಹಳ ಕಷ್ಟದ ಕೆಲಸ ಎಂದಿದ್ದಾರೆ. ಭಾರತದಲ್ಲಿ ಪ್ರತಿ 80 ರಿಂದ 90 ಕಿಲೋಮೀಟರ್‌ಗಳಿಗೆ ಭಾಷೆ, ಸಂಸ್ಕೃತಿ ಮತ್ತು ಅಭಿರುಚಿ ಬದಲಾಗುತ್ತದೆ. ಇಲ್ಲಿ ನಗರ ಪ್ರದೇಶಗಳು, ಉಪನಗರಗಳು ಹಾಗೂ ಬೇರೆ ಬೇರೆ ವರ್ಗದ ಪ್ರೇಕ್ಷಕರು ಇದ್ದಾರೆ. ಒಂದು ವರ್ಗದ ಜನರಿಗೆ ಇಷ್ಟವಾದ ಸಿನಿಮಾ ಮತ್ತೊಂದು ವರ್ಗದವರಿಗೆ ಇಷ್ಟವಾಗದಿರಬಹುದು. ಇದರಿಂದಾಗಿ ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ಅಥವಾ ನಂಬರ್ಸ್‌ಗಳನ್ನು ತಲುಪುವುದು ತುಂಬಾ ಕಷ್ಟದ ಕೆಲಸ. ಆದರೆ ಪ್ರಾದೇಶಿಕ ಅಥವಾ ಅಂತರರಾಷ್ಟ್ರೀಯ ಸಿನಿಮಾಗಳ ವಿಷಯದಲ್ಲಿ ಅಲ್ಲಿನ ನಿರ್ಮಾಪಕರಿಗೆ ತಮ್ಮ ಪ್ರೇಕ್ಷಕರ ಮೈಂಡ್‌ಸೆಟ್ ಹಾಗೂ ಅವರ ಇಷ್ಟ-ಕಷ್ಟಗಳ ಬಗ್ಗೆ ಸ್ಪಷ್ಟತೆ ಇರುತ್ತದೆ ಎಂದಿದ್ದಾರೆ.

ಇದೇ ವೇಳೆ ಇಂದಿನ ಪ್ರೇಕ್ಷಕರ ಅಭಿರುಚಿ ಹಾಗೂ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದಿರುವ ಅಜಯ್ ದೇವಗನ್, ಇಂದಿನ ಕಾಲದಲ್ಲಿ ವೀಕ್ಷಕರಿಗೆ ವಿಭಿನ್ನ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ಅಪಾರ ಆಯ್ಕೆಗಳು ಲಭ್ಯವಿವೆ. ಕೇವಲ ದೊಡ್ಡ ಸ್ಟಾರ್ ನಟರ ಹೆಸರಿದೆ ಅಥವಾ ದೊಡ್ಡ ಬ್ಯಾನರ್ ಇದೆ ಎಂಬ ಮಾತ್ರಕ್ಕೆ ಪ್ರೇಕ್ಷಕರು ಕಳಪೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಚಿತ್ರದ ಕಂಟೆಂಟ್ ಅಥವಾ ಕಥೆ ಉತ್ತಮವಾಗಿದ್ದರೆ ಮಾತ್ರ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಒಂದು ವೇಳೆ ಸಿನಿಮಾ ಚೆನ್ನಾಗಿಲ್ಲದಿದ್ದರೆ, ಕೇವಲ ಎರಡನೇ ದಿನವೇ ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುತ್ತದೆ. ಒಟ್ಟಾರೆಯಾಗಿ ಪ್ರೇಕ್ಷಕರ ಕೈಯಲ್ಲಿ ವಿಫುಲ ಆಯ್ಕೆಗಳಿರುವ ಇಂದಿನ ದಿನಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಗಳಿಸುವುದು ಅತ್ಯಂತ ಕಠಿಣ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಕನ್ನಡಕ್ಕೆ ಬಂದ ಬಾಲಿವುಡ್ ನಟಿ ಅದಾ ಶರ್ಮಾ 

ಅಜಯ್ ದೇವಗನ್ ಬಾಲಿವುಡ್​​ನ ಸ್ಟಾರ್ ನಟರುಗಳಲ್ಲಿ ಒಬ್ಬರು. ನಟನೆ ಮಾತ್ರವಲ್ಲದೆ ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಕೆಲವು ಸಿನಿಮಾಗಳ ನಿರ್ದೇಶನ ಸಹ ಮಾಡಿದ್ದಾರೆ. ಜೊತೆಗೆ ವಿಎಫ್​​ಎಕ್ಸ್ ಸಂಸ್ಥೆಯನ್ನು ಸಹ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us