ಮಣಿಪುರ (Manipur Vilene) ಹೊತ್ತಿ ಉರಿಯುತ್ತಿದೆ. ಅನೇಕ ಹಿಂಸಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಮಹಿಳೆಯರನ್ನು ಬೆತ್ತಲು ಮೆರವಣಿಗೆ ಮಾಡಿ, ಅವರ ಮೇಲೆ ಅತ್ಯಾಚಾರ ಮಾಡಲಾಗಿತ್ತು. ಈ ವಿಡಿಯೋ ಈಗ ವೈರಲ್ ಆಗಿದೆ. ಈ ವಿಚಾರವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar), ರಿತೇಶ್ ದೇಶ್ಮುಖ್. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿ ಅನೇಕರು ಟ್ವೀಟ್ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದು ಅವರು ಆಗ್ರಹಿಸಿದ್ದಾರೆ. ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡಿದ್ದಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ಮಾಡಲಾಗಿದೆ ಎನ್ನಲಾಗಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಬಗ್ಗೆ ಅನೇಕರು ಧ್ವನಿ ಎತ್ತಿದ್ದಾರೆ.
ಮಣಿಪುರ ಹಿಂಸಾಚಾರ ವಿಚಾರದಲ್ಲಿ ಅಕ್ಷಯ್ ಕುಮಾರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವೀಡಿಯೋ ನೋಡಿ ಬೆಚ್ಚಿಬಿದ್ದೆ, ಜಿಗುಪ್ಸೆ ಉಂಟಾಯಿತು. ತಪ್ಪಿತಸ್ಥರಿಗೆ ಘೋರ ಶಿಕ್ಷೆ ಸಿಗಲಿ. ಆ ಶಿಕ್ಷೆ ಹೇಗಿರಬೇಕು ಎಂದರೆ ಅದನ್ನು ನೋಡಿ ಮುಂದೆ ಯಾರೂ ಇಂಥ ತಪ್ಪು ಮಾಡುವ ಬಗ್ಗೆ ಆಲೋಚನೆಯನ್ನೂ ಮಾಡಬಾರದು’ ಎಂದು ಅವರು ಬರೆದುಕೊಂಡಿದ್ದಾರೆ.
ಬಾಲಿವುಡ್ ಹೀರೋ ರಿತೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋದಿಂದ ಆಳವಾಗಿ ವಿಚಲಿತನಾಗಿದ್ದೇನೆ. ಕೋಪ ಬರುತ್ತಿದೆ. ಇಂತಹ ಅಪರಾಧಕ್ಕೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮಹಿಳೆಯ ಘನತೆಯ ಮೇಲಿನ ದಾಳಿಯು ಮಾನವೀಯತೆಯ ಮೇಲಿನ ದಾಳಿಯೇ ಆಗಿದೆ’ ಎಂದು ರಿತೇಶ್ ಹೇಳಿದ್ದಾರೆ.
‘ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ಭಯಾನಕವಾಗಿದೆ. ಇದು ನನ್ನನ್ನು ಬೆಚ್ಚಿಬೀಳಿಸಿದೆ. ಮಹಿಳೆಯರಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗಲಿ’ ಎಂದು ಕಿಯಾರಾ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೊದಲಾದವರು ಕೂಡ ಟ್ವೀಟ್ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ.
The video of violence against women in Manipur is horrifying and has shaken me to the core. I pray the women get justice at the earliest. Those responsible must face the most SEVERE punishment they deserve.
— Kiara Advani (@advani_kiara) July 20, 2023
ಇದನ್ನೂ ಓದಿ: ರಾಮ್ ಚರಣ್-ಕಿಯಾರಾ ಹೊಸ ಸಿನಿಮಾದ ನಿರ್ದೇಶಕ ಬದಲು? ಮತ್ತೆ ಕೈಕೊಟ್ಟರಾ ಶಂಕರ್
ಮೈತಿ ಸಮುದಾಯದವರು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ಇದನ್ನು ಕುಕಿ ಸಮುದಾಯದವರು ವಿರೋಧಿಸಿದ್ದರು. ಮೇ 3ರಂದು ಇಬ್ಬರ ಮಧ್ಯೆ ಇದಕ್ಕಾಗಿ ಸಂಘರ್ಷ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಹಿಂಸಾಚಾರಗಳು ಮಣಿಪುರದಲ್ಲಿ ನಡೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Thu, 20 July 23