ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಒಹ್ ಮೈ ಗಾಡ್’ ಸಿನಿಮಾ ಹಿಟ್ ಆಗಿತ್ತು. ದಶಕಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ಅಕ್ಷಯ್ ಕುಮಾರ್ ಅವರೇ ಮುಖ್ಯಭೂಮಿಕೆಯಲ್ಲಿರುವ ‘ಒಎಂಜಿ 2’ ಸಿನಿಮಾ (OMG 2 Movie) ಆಗಸ್ಟ್ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೇಸರದ ಸಂಗತಿ ಎಂದರೆ 20 ಕಟ್ ಬಿದ್ದಿದೆ. ಜೊತೆಗೆ ಸಿನಿಮಾಗೆ ಎ ಸರ್ಟಿಫಿಕೇಟ್ ನೀಡಲಾಗಿದೆ. ಇದರಿಂದಾಗಿ ಸಿನಿಮಾದ ಗಳಿಕೆ ತಗ್ಗುವ ಸಾಧ್ಯತೆ ಇದೆ. ಇದು ಅಕ್ಷಯ್ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.
‘ಆದಿಪುರುಷ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ರಾಮಾಯಣವನ್ನು ತಿರುಚಲಾಗಿದೆ ಎಂಬ ಆರೋಪ ಈ ಸಿನಿಮಾ ಬಗ್ಗೆ ವ್ಯಕ್ತವಾಯಿತು. ಅನೇಕರು ಸೆನ್ಸಾರ್ ಮಂಡಳಿಯ ವಿರುದ್ಧ ಕಿಡಿಕಾರಿದರು. ಇದೇ ಕಾರಣದಿಂದ ಸೆನ್ಸಾರ್ ಮಂಡಳಿಯವರು ಎಚ್ಚೆತ್ತುಕೊಂಡಿದ್ದಾರೆ. ‘ಒಎಂಜಿ 2’ ಚಿತ್ರದಲ್ಲಿ ದೇವರು ಹಾಗೂ ಲೈಂಗಿಕ ವಿಚಾರ ಇದೆ. ಎರಡನ್ನೂ ಒಟ್ಟಿಗೆ ಬೆರೆಸಿರುವುದರಿಂದ ಈ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿತ್ತು. ಈ ಸಮಿತಿ ಚಿತ್ರಕ್ಕೆ ಸೆನ್ಸಾರ್ ಮಾಡಿದೆ.
‘ಬಾಲಿವುಡ್ ಹಂಗಾಮ’ ವರದಿ ಮಾಡಿರುವ ಪ್ರಕಾರ, ದೃಶ್ಯ ಹಾಗೂ ಸಂಭಾಷಣೆ ಮ್ಯೂಟ್ ಸೇರಿ 20 ಕಡೆಗಳಲ್ಲಿ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ. ಆದರೆ, ಇದಕ್ಕೆ ಸಿನಿಮಾ ತಂಡ ಸಿದ್ಧವಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ ಸಿನಿಮಾಗೆ ಎ ಪ್ರಮಾಣಪತ್ರ ಸಿಕ್ಕಿದ್ದು, 18 ವರ್ಷದ ಕೆಳಗಿನವರು ಚಿತ್ರವನ್ನು ನೋಡುವಂತಿಲ್ಲ. ಈ ಕಾರಣಕ್ಕೆ ಸಿನಿಮಾದ ಗಳಿಕೆ ತಗ್ಗಲಿದೆ.
ಜುಲೈ 31ರಂದು ‘ಒಎಂಜಿ 2’ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎನ್ನುವುದರ ಝಲಕ್ ಈ ಟ್ರೇಲರ್ನಲ್ಲಿ ಸಿಗಲಿದೆ. ಅಕ್ಷಯ್ ಕುಮಾರ್ ಅವರು ‘ಒಎಂಜಿ 2’ ಚಿತ್ರದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ದೇವರ ನಂಬುವ ವ್ಯಕ್ತಿಯಾಗಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಯಾಮಿ ಗೌತಮ್ ಕೂಡ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ರಿಲೀಸ್ ಹತ್ತಿರವಾದರೂ ಅಕ್ಷಯ್ ಕುಮಾರ್ ಚಿತ್ರಕ್ಕಿಲ್ಲ ಸೆನ್ಸಾರ್; ಬಿಡುಗಡೆ ಅನುಮಾನ?
ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾದಲ್ಲಿ ಇದೆ. ಇದನ್ನು ಯುವ ಜನತೆ ನೋಡಬೇಕು ಎಂಬುದು ಚಿತ್ರತಂಡದ ಆಶಯ ಆಗಿತ್ತು. ಆದರೆ, ಈಗ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ಸಿಕ್ಕಿರುವುದರಿಂದ ಅವರ ಆಶಯಕ್ಕೆ ಅಡಚಣೆ ಉಂಟಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:37 am, Thu, 27 July 23