ನಟಿ ಆಲಿಯಾ ಭಟ್ (Alia Bhatt) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಪ್ರಿಯಕರ ರಣಬೀರ್ ಕಪೂರ್ (Ranbir Kapoor) ಜೊತೆ ಮದುವೆಯಾಗಿ ಎರಡೂವರೆ ತಿಂಗಳಿಗೆ ಪ್ರೆಗ್ನೆನ್ಸಿ ಘೋಷಿಸಿದ ಆಲಿಯಾ ಅವರು ಈಗ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರೆಗ್ನೆಂಟ್ ಆಗಿದ್ದರೂ ಕೂಡ ಅವರು ವಿಶ್ರಾಂತಿ ಪಡೆಯಲು ಸಿದ್ಧರಿಲ್ಲ. ಆಲಿಯಾ ಭಟ್ ನಟಿಸಿರುವ ‘ಡಾರ್ಲಿಂಗ್ಸ್’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ‘ನೆಟ್ಫ್ಲಿಕ್ಸ್’ ಮೂಲಕ ಆಗಸ್ಟ್ 5ರಂದು ವೀಕ್ಷಣೆಗೆ ಲಭ್ಯವಾಗಲಿದೆ. ಇದರ ಪ್ರಚಾರಕ್ಕಾಗಿ ಆಲಿಯಾ ಭಟ್ ಅವರು ಊರೂರು ಸುತ್ತುತ್ತಿದ್ದಾರೆ. ಈ ವೇಳೆ ಅವರಿಗೆ ಪ್ರೆಗ್ನೆನ್ಸಿ (Alia Bhatt Pregnancy) ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಸದ್ಯಕ್ಕೆ ತಮಗೆ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಆಲಿಯಾ ಭಟ್ ಹೇಳಿದ್ದಾರೆ.
ಆಲಿಯಾ ಭಟ್ ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ವಿವಾಹದ ಬಳಿಕ ಅವರು ನಟನೆಯಿಂದ ದೂರ ಸರಿಯುವ ಸಾಧ್ಯತೆ ಇದೆ ಎಂದು ಅನೇಕರು ಊಹಿಸಿದ್ದರು. ಅವರು ಪ್ರೆಗ್ನೆಂಟ್ ಎಂದು ಗೊತ್ತಾದ ಬಳಿಕ ಒಂದಷ್ಟು ತಿಂಗಳು ಬ್ರೇಕ್ ಪಡೆಯುವುದು ಅನಿವಾರ್ಯ ಎಂಬ ಮಾತು ಕೇಳಿಬಂತು. ಆದರೆ ಅದನ್ನು ಆಲಿಯಾ ಭಟ್ ಒಪ್ಪಿಕೊಳ್ಳುತ್ತಿಲ್ಲ.
‘ಫಿಟ್ ಮತ್ತು ಆರೋಗ್ಯವಾಗಿದ್ದರೆ ಪ್ರೆಗ್ನೆನ್ಸಿ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ. ಕೆಲಸ ನನಗೆ ಖುಷಿ ನೀಡುತ್ತದೆ. ನಟನೆ ನನ್ನ ಒಲವು. ಇದು ನನ್ನನ್ನು ಜೀವಂತವಾಗಿ ಇರಿಸುತ್ತದೆ. ನನಗೆ 100 ವರ್ಷ ಆಗುವ ತನಕವೂ ನಾನು ಈ ಕೆಲಸ ಮಾಡುತ್ತೇನೆ’ ಎಂದು ಆಲಿಯಾ ಭಟ್ ಹೇಳಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತ ಅವರು ಮುನ್ನುಗ್ಗುತ್ತಿದ್ದಾರೆ. ನಟನೆ ಜೊತೆಯಲ್ಲಿ ಅವರು ನಿರ್ಮಾಣದಲ್ಲೂ ಸಕ್ರಿಯರಾಗಿದ್ದಾರೆ.
‘ಡಾರ್ಲಿಂಗ್ಸ್’ ಚಿತ್ರದ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆ ಆಗಲಿದೆ. ಪತಿ ರಣಬೀರ್ ಕಪೂರ್ ಜೊತೆ ಅಭಿನಯಿಸಿದ ಈ ಚಿತ್ರ ಸೆಪ್ಟೆಂಬರ್ 9ರಂದು ತೆರೆಕಾಣಲಿದೆ. ರಣವೀರ್ ಸಿಂಗ್ ಜೊತೆ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ನ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲೂ ಅವರು ಅಭಿನಯಿಸುತ್ತಿದ್ದು, ಈ ಎಲ್ಲ ಪ್ರಾಜೆಕ್ಟ್ಗಳ ಬಗ್ಗೆ ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಮೂಡಿದೆ.