ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚು ದಿನ ನಡೆಯಲ್ಲ: ಹೀಗೆಂದರೇಕೆ ಅಲ್ಲು ಅರ್ಜುನ್ ತಂದೆ

|

Updated on: Sep 11, 2024 | 12:21 PM

Pan India Movies: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್​ನಲ್ಲಿ ಗೆಲ್ಲುತ್ತಿವೆ ಆದರೆ ಬಾಲಿವುಡ್​ ಸಿನಿಮಾಗಳು ಏಕೆ ಉತ್ತರ ಭಾರತದಲ್ಲಿಯೇ ಸೋಲುತ್ತಿವೆ ಎಂಬುದಕ್ಕೆ ನಿರ್ಮಾಪಕ ಅಲ್ಲು ಅರವಿಂದ್ ಕಾರಣ ನೀಡಿದ್ದಾರೆ. ಅಲ್ಲದೆ ಈ ಪ್ಯಾನ್ ಇಂಡಿಯಾ ಸಿನಿಮಾ ಶೀಘ್ರವೇ ನಶಿಸಿ ಹೋಗಲಿದೆ ಎಂದು ಭವಿಷ್ಯ ಸಹ ನುಡಿದಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚು ದಿನ ನಡೆಯಲ್ಲ: ಹೀಗೆಂದರೇಕೆ ಅಲ್ಲು ಅರ್ಜುನ್ ತಂದೆ
ಅಲ್ಲು ಅರವಿಂದ್
Follow us on

ಕೋವಿಡ್ ಬಳಿಕ ದಕ್ಷಿಣ ಭಾರತದ ಸಿನಿಮಾಗಳಿಗೆ ಉತ್ತರ ಭಾರತದ ಬಾಗಿಲು ತೆಗೆದಿದ್ದು, ಉತ್ತರದ ಮಾರುಕಟ್ಟೆಯ ಶಕ್ತಿಯನ್ನು ಪರಿಚಯಿಸಿದ್ದು ಆ ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗಳ ಸರಣಿ ಪ್ರಾರಂಭವಾಗುವಂತೆ ಮಾಡಿದ್ದು ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ. ಆದರೆ ಇತ್ತೀಚೆಗಿನ ಸಂವಾದ ಒಂದರಲ್ಲಿ ಮಾತನಾಡಿರುವ ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಈ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಒಂದು ಘಟ್ಟವಷ್ಟೆ, ಇದು ಬಹಳ ಬೇಗ ಮುಗಿದು ಹೋಗುತ್ತದೆ ಎಂದಿದ್ದಾರೆ. ಅದಕ್ಕೆ ಸೂಕ್ತ ಕಾರಣವನ್ನು ಸಹ ಅವರು ನೀಡಿದ್ದಾರೆ.

‘ದಕ್ಷಿಣದ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಬಹಳ ಜನ ಮೆಚ್ಚಿಕೊಳ್ಳುತ್ತಿದ್ದಾರೆ ಆಧರಿಸುತ್ತಿದ್ದಾರೆ. ಆದರೆ ಬಾಲಿವುಡ್ ಸಿನಿಮಾಗಳನ್ನು ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲಿಯೇ ಹೆಚ್ಚು ಜನ ನೋಡುತ್ತಿಲ್ಲ ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಾಲಿವುಡ್​ನ ನಿರ್ದೇಶಕರುಗಳು ಜುಹು ಹಾಗೂ ಅಂಧೇರಿ ಮಧ್ಯದಲ್ಲಿ ಹುಟ್ಟಿದ್ದಾರೆ, ಅಲ್ಲಿಯೇ ಬೆಳೆದಿದ್ದಾರೆ, ಅವರ ರೀತಿಯೇ ಯೋಚಿಸುತ್ತಾರೆ, ಅಲ್ಲಿನವರಿಗಾಗಿ ಮಾತ್ರವೇ ಸಿನಿಮಾ ಮಾಡುತ್ತಾರೆ’ ಎಂದಿದ್ದಾರೆ ಅಲ್ಲು ಅರವಿಂದ್. ಅವರ ಮಾತಿನ ಅರ್ಥ, ಬಾಲಿವುಡ್​ನ ಈಗಿನ ನಿರ್ದೇಶಕರು ಒಂದೇ ವರ್ಗಕ್ಕೆ ಸೇರಿದವರು, ಅವರು ಬೆಳೆದಿರುವ ರೀತಿ, ಯೋಚನೆ ಮಾಡುವ ರೀತಿ ಎಲ್ಲವೂ ಶ್ರೀಮಂತ ವರ್ಗದ ರೀತಿಯೇ, ಹಾಗಾಗಿ ಅವರ ಸಿನಿಮಾಗಳಲ್ಲಿಯೂ ಅದೇ ಇರುತ್ತದೆ ಎಂದಿದ್ದಾರೆ.

‘ದಕ್ಷಿಣ ಭಾರತದ ಸಿನಿಮಾಗಳನ್ನು ಉತ್ತರ ಪ್ರದೇಶ, ಬಿಹಾರದ ಜನ ಬಹಳ ನೋಡುತ್ತಾರೆ ಮೆಚ್ಚಿಕೊಳ್ಳುತ್ತಾರೆ ಏಕೆಂದರೆ ದಕ್ಷಿಣ ಭಾರತದ ಸಿನಿಮಾಗಳು ಅವರಿಗೆ ಅವರ ರೀತಿಯ ಸಿನಿಮಾಗಳು ಅನಿಸುತ್ತವೆ. ಅದೇ ಬಹುತೇಕ ಹಿಂದಿ ಸಿನಿಮಾಗಳಲ್ಲಿ ಉತ್ತರ ಪ್ರದೇಶ, ಬಿಹಾರ ಜನರ ಬಿಂಬವೇ ಇರುವುದಿಲ್ಲ. ಅದೆಲ್ಲವೂ ಮುಂಬೈನ ಯಾವುದೋ ಕೆಲವು ಶ್ರೀಮಂತ ಏರಿಯಾಗಳಲ್ಲಿ ನಡೆಯುವ ಕತೆಯಾಗಿರುತ್ತದೆ. ಬಾಲಿವುಡ್​ನ ನಿರ್ದೇಶಕರು ಯಾವಾಗ ಆ ಜುಹು-ಅಂಧೇರಿ ಏರಿಯಾಗಳನ್ನು ಬಿಟ್ಟು ಬರುತ್ತಾರೆಯೋ ಆಗ ಅವರಿಗೆ ದೊಡ್ಡ ಪ್ರಮಾಣದ ಪ್ರೀತಿ ಪ್ರೇಕ್ಷಕರಿಂದ ಲಭ್ಯವಾಗುತ್ತದೆ’ ಎನ್ನುತ್ತಾರೆ ಅಲ್ಲು ಅರವಿಂದ್.

ಇದನ್ನೂ ಓದಿ:ಬಾಲಿವುಡ್ ಬ್ಯಾಚುಲರ್ ಹೀರೋ ಜೊತೆ ಯುರೋಪ್ ಹಾರಲಿದ್ದಾರೆ ರಶ್ಮಿಕಾ

‘ಒಮ್ಮೆ, ಬಾಲಿವುಡ್​ನ ನಿರ್ದೇಶಕರು ನೆಲದ ಕತೆಗಳನ್ನು ಸಿನಿಮಾ ಮಾಡಲು ಮುಂದಾದರೆ ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಮಾರುಕಟ್ಟೆ ಕಳೆದುಕೊಳ್ಳುತ್ತವೆ. ಈಗ ಬಂದಿರುವ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಸಹ ಕ್ಷಣಿಕವಾದುದು, ಇದೊಂದು ಫೇಸ್ ಅಷ್ಟೆ. ಬಾಲಿವುಡ್​ ನಿರ್ದೇಶಕರಿಗೆ ತಮ್ಮ ಕತೆ ಸಾಮಾನ್ಯ ಜನರ ಕತೆ ಆಗಿರಬೇಕು ಎಂದು ಅರಿವಾಗುತ್ತದೆಯೋ ಆಗ ಪ್ಯಾನ್ ಇಂಡಿಯಾ ಸಿನಿಮಾ ನಿಂತು ಹೋಗುತ್ತದೆ. ಉತ್ತರ ಭಾರತದ ಜನ ಹಿಂದಿ ಸಿನಿಮಾಗಳನ್ನೇ ಹೆಚ್ಚು ನೋಡಲು ಆರಂಭಿಸುತ್ತಾರೆ’ ಎಂದಿದ್ದಾರೆ ಅಲ್ಲು ಅರವಿಂದ್.

ಅಲ್ಲು ಅರವಿಂದ್, ಭಾರತದ ಖ್ಯಾತ ಸಿನಿಮಾ ನಿರ್ಮಾಪಕ. ಹಲವು ದಶಕಗಳಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಅಲ್ಲು ಅರವಿಂದ್, ತೆಲುಗು ಮಾತ್ರವೇ ಅಲ್ಲದೆ ಕನ್ನಡ, ಹಿಂದಿ ಭಾಷೆಗಳಲ್ಲಿಯೂ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಈಗಲೂ ಸಹ ತೆಲುಗು ಹಾಗೂ ಕೆಲ ಹಿಂದಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ