ಶಾರುಖ್​ ಖಾನ್​ ಜತೆ ಕಾಮಿಡಿ ಸಿನಿಮಾ ಮಾಡುವ ಹಂಬಲದಲ್ಲಿ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ

ಟಾಲಿವುಡ್​ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರು ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಶಾಹಿದ್​ ಕಪೂರ್​, ರಣಬೀರ್​ ಕಪೂರ್​ ಜೊತೆ ಈಗಾಗಲೇ ಕೆಲಸ ಮಾಡಿರುವ ಅವರು ಈಗ ಶಾರುಖ್​ ಖಾನ್​ ಜೊತೆ ಸಿನಿಮಾ ಮಾಡಲು ಹಂಬಲಿಸುತ್ತಿದ್ದಾರೆ. ವಿಶೇಷ ಏನೆಂದರೆ, ಶಾರುಖ್​ ಜೊತೆ ಕಾಮಿಡಿ ಸಿನಿಮಾ ಮಾಡಬೇಕು ಎಂಬುದು ಅವರ ಆಸೆ.

ಶಾರುಖ್​ ಖಾನ್​ ಜತೆ ಕಾಮಿಡಿ ಸಿನಿಮಾ ಮಾಡುವ ಹಂಬಲದಲ್ಲಿ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ
ಶಾರುಖ್​ ಖಾನ್​, ಸಂದೀಪ್​ ರೆಡ್ಡಿ ವಂಗಾ

Updated on: Nov 30, 2023 | 1:16 PM

ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ (Sandeep Reddy Vanga) ಅವರಿಗೆ ಸಖತ್​ ಬೇಡಿಕೆ ಇದೆ. ಅವರು ಮಾಡಿದ ‘ಅರ್ಜುನ್​ ರೆಡ್ಡಿ’ ಸಿನಿಮಾ ಸೆನ್ಸೇಷನ್​ ಸೃಷ್ಟಿ ಮಾಡಿತ್ತು. ತೆಲುಗಿನಲ್ಲಿ ವಿಜಯ್​ ದೇವರಕೊಂಡ ನಟಿಸಿದ್ದ ಆ ಸಿನಿಮಾವನ್ನು ಹಿಂದಿಯಲ್ಲಿ ‘ಕಬೀರ್​ ಸಿಂಗ್​’ ಎಂದು ರಿಮೇಕ್​ ಮಾಡಲಾಯಿತು. ಅದರಲ್ಲಿ ಶಾಹಿದ್​ ಕಪೂರ್​ ನಟಿಸಿ ಯಶಸ್ಸು ಕಂಡರು. ಅದಕ್ಕೂ ಸಂದೀಪ್​ ರೆಡ್ಡಿ ವಂಗಾ ನಿರ್ದೇಶನ ಮಾಡುವ ಮೂಲಕ ಬಾಲಿವುಡ್​ಗೆ (Bollywood) ಕಾಲಿಟ್ಟಿದ್ದರು. ಈಗ ಅವರು ರಣಬೀರ್​ ಕಪೂರ್​ ನಟನೆಯ ಅನಿಮಲ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಾರುಖ್​ ಖಾನ್​ (Shah Rukh Khan) ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲು ಸಂದೀಪ್​ ರೆಡ್ಡಿ ವಂಗಾ ಕಾದಿದ್ದಾರೆ.

ಶಾರುಖ್​ ಖಾನ್​ ಅವರು ದಕ್ಷಿಣ ಭಾರತದ ನಿರ್ದೇಶಕರಿಗೆ ಮಣೆ ಹಾಕುತ್ತಿದ್ದಾರೆ. ತಮಿಳಿನ ನಿರ್ದೇಶಕ ಅಟ್ಲಿ ಜೊತೆ ‘ಜವಾನ್​’ ಸಿನಿಮಾ ಮಾಡಿ ಶಾರುಖ್​ ಖಾನ್​ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದರು. ಈಗ ಅವರು ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಜೊತೆ ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ. ಈ ವಿಚಾರವನ್ನು ಸ್ವತಃ ಸಂದೀಪ್​ ರೆಡ್ಡಿ ವಂಗಾ ಬಹಿರಂಗಪಡಿಸಿದ್ದಾರೆ. ‘ಅನಿಮಲ್​’ ಪ್ರಚಾರದ ಸಲುವಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಅವರು ಈ ವಿಷಯ ಬಾಯಿ ಬಿಟ್ಟಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಸುತ್ತಾ ‘ಅನಿಮಲ್​’ ಸಿನಿಮಾ? ಇಲ್ಲಿದೆ ಲೆಕ್ಕಾಚಾರ..

ಶಾರುಖ್​ ಖಾನ್​ ಅವರನ್ನು ಸಂದೀಪ್​ ಭೇಟಿ ಆಗಿದ್ದಾರೆ. ತಾವು ದೊಡ್ಡ ಅಭಿಮಾನಿ ಎಂದು ಕೂಡ ಹೇಳಿಕೊಂಡಿದ್ದಾರೆ. ಶಾರುಖ್​ ಖಾನ್​ ಜೊತೆ ಒಂದು ಕಾಮಿಡಿ ಸಿನಿಮಾ ಮಾಡಬೇಕು ಎಂದು ಸಂದೀಪ್​ ರೆಡ್ಡಿ ವಂಗಾ ಅವರು ಆಸೆಪಟ್ಟಿದ್ದಾರೆ. ಆದರೆ ಅದಕ್ಕೆ ಶಾರುಖ್​ ಖಾನ್​ ಕಡೆಯಿಂದ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕು. ಈವರೆಗೂ ತುಂಬಾ ರಗಡ್​ ಸಿನಿಮಾ ಮಾಡಿರುವ ಸಂದೀಪ್​ ಅವರು ಈಗ ಕಾಮಿಡಿ ಕಡೆಗೆ ಆಸಕ್ತಿ ತೋರಿಸುತ್ತಿರುವುದು ವಿಶೇಷ ಎನಿಸಿದೆ.

ಇದನ್ನೂ ಓದಿ: ಡಿ.1ರಂದು ‘ಅನಿಮಲ್​’ ಅದ್ದೂರಿ ಬಿಡುಗಡೆ; ಇಲ್ಲಿವೆ ಪೋಸ್ಟರ್​ಗಳು..

ಸದ್ಯ ‘ಅನಿಮಲ್​’ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದರ ಮೇಲೆ ಸಂದೀಪ್​ ರೆಡ್ಡಿ ವಂಗಾ ಅವರ ಭವಿಷ್ಯ ನಿರ್ಧಾರ ಆಗಲಿದೆ. ಈ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆದರೆ ಅವರ ಡಿಮ್ಯಾಂಡ್ ಹೆಚ್ಚಾಗಲಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅನಿಲ್​ ಕಪೂರ್​, ಬಾಬಿ ಡಿಯೋಲ್​ ಮುಂತಾದವರು ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್​ 1ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಅನಿಮಲ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಟಿ-ಸಿರೀಸ್​ ಸಂಸ್ಥೆ ಬಂಡವಾಳ ಹೂಡಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us