‘ಲಗಾನ್‘ (Lagaan) ಸಿನಿಮಾ ನಿರ್ದೇಶನ ಮಾಡಿದ್ದ ಅಶುತೋಷ್ ಗೋವರಿಕರ್ (Ashutosh Gowariker) ಇದೀಗ ಹೊಸ ಸಿನಿಮಾ ಒಂದನ್ನು ಘೋಷಿಸಿದ್ದಾರೆ. ಈ ಹಿಂದೆ ಕೆಲವು ಐತಿಹಾಸಿಕ, ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಶುತೋಷ್ ಇದೇ ಮೊದಲ ಬಾರಿಗೆ ಆಧ್ಯಾತ್ಮಿಕ ವಿಷಯ ಆಧರಿಸಿದ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಆಶುತೋಷ್ ‘ಶಂಕರ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾವು ಆದಿ ಶಂಕರಾಚಾರ್ಯರ ಕುರಿತಾದದ್ದಾಗಿದೆ.
ತಮ್ಮ ಮುಂದಿನ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದಿಗೆ ಪೋಸ್ಟರ್ ಅನ್ನು ಸಹ ಅಶುತೋಷ್ ಗೋವರೀಕರ್ ಹಂಚಿಕೊಂಡಿದ್ದು, ”ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್ ಹಾಗೂ ಏಕಾತ್ಮ ದಮ್ ಸಹಯೋಗದೊಂದಿಗೆ ಆದಿ ಶಂಕರಾಚಾರ್ಯರ ಜೀವನ ಮತ್ತು ಜ್ಞಾನದ ಮೇಲೆ ಸಿನಿಮಾ ಮೂಲಕ ಬೆಳಕು ಚೆಲ್ಲುವ ಅವಕಾಶವನ್ನು ನೀಡಲಾಗಿರುವುದನ್ನು ನಾನು ಆಳವಾಗಿ ಗೌರವಿಸುತ್ತೇನೆ” ಎಂದಿದ್ದಾರೆ. ಜೊತೆಗೆ ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಶಂಕರಾಚಾರ್ಯರ ಚಿತ್ರದ ಜೊತೆಗೆ ದೊಡ್ಡ ರಾಕ್ಷಸನ ಚಿತ್ರವೂ ಪೋಸ್ಟರ್ನಲ್ಲಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿಗೆ ಖುಲಾಯಿಸಿದ ಅದೃಷ್ಟ, ಲಗಾನ್ ನಿರ್ದೇಶಕನ ಸಿನಿಮಾದಲ್ಲಿ ನಾಯಕ?
ಆಶುತೋಷ್ ಗೋವರೀಕರ್, ಆದಿ ಶಂಕರಾಚಾರ್ಯರ ಕುರಿತ ಸಿನಿಮಾ ಘೋಷಣೆ ಮಾಡಿರುವ ಟ್ವೀಟ್ಗೆ ಹಲವರು ಪ್ರತಿಕ್ರಿಯಿಸಿದ್ದು, ಹಲವು ಸಲಹೆಗಳನ್ನು ನಿರ್ದೇಶಕರಿಗೆ ನೀಡಿದ್ದಾರೆ. ಸಿನಿಮಾಕ್ಕೆ ಇಳಯರಾಜ ಅವರಿಂದ ಸಂಗೀತ ಮಾಡಿಸಿ ಎಂದಿದ್ದಾರೆ. ಸಿನಿಮಾವನ್ನು ಎರಡು ಗಂಟೆಗಳಿಗೆ ಮೀಸಲಿಡಿ ಎಂದಿದ್ದಾರೆ. ಕೇವಲ ಸತ್ಯಗಳನ್ನಷ್ಟೆ ಸಿನಿಮಾದಲ್ಲಿ ತೋರಿಸಿ ಎಂದು ಸಲಹೆ ನೀಡಿದ್ದಾರೆ. ಸಿನಿಮಾದಲ್ಲಿ ಧರ್ಮದ ಬಗ್ಗೆ ಜಾತ್ಯಾತೀತತೆ ಬಗ್ಗೆ ಒಲ್ಲದ ಭಾಷಣಗಳನ್ನು ಇಡಬೇಡಿ ಹೀಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಿದ್ದಾರೆ.
ಆದಿ ಶಂಕರಾಚಾರ್ಯರ ಬಗ್ಗೆ ಈ ಹಿಂದೆ ಹಲವು ಸಿನಿಮಾಗಳು ಬಂದಿವೆ. 1927ರಲ್ಲಿಯೇ ಮೂಕಿ ಸಿನಿಮಾ ಒಂದನ್ನು ಶಂಕರಾಚಾರ್ಯರ ಬಗ್ಗೆ ನಿರ್ಮಿಸಲಾಗಿತ್ತು. 1928ರಲ್ಲಿ ‘ಜಗದ್ಗುರು ಶ್ರೀಮತ್ ಆದಿಶಂಕರಾಚಾರ್ಯ’ ಎಂಬ ಮತ್ತೊಂದು ಮೂಕಿ ಸಿನಿಮಾ ಬಂದಿತ್ತು. 1955ರಲ್ಲಿ ಶೇಕ್ ಫತೇಲಾಲ್ ಎಂಬುವರು ‘ಜಗದ್ಗುರು ಶಂಕರಾಚಾರ್ಯ’ ಹೆಸರಿನ ಸಿನಿಮಾವನ್ನು ಹಿಂದಿಯಲ್ಲಿ ನಿರ್ಮಾಣ ಮಾಡಿದ್ದರು. 1977ರಲ್ಲಿ ‘ಜಗದ್ಗುರು ಆದಿಶಂಕರನ್’ ಹೆಸರಿನ ಮಲಯಾಳಂ ಸಿನಿಮಾವನ್ನು ಪಿ ಭಾಸ್ಕರನ್ ನಿರ್ದೇಶನ ಮಾಡಿದ್ದರು. 1983ರಲ್ಲಿ ಜಿವಿ ಅಯ್ಯರ್ ಅವರು ‘ಆದಿ ಶಂಕರಾಚಾರ್ಯ’ ಹೆಸರಿನ ಸಿನಿಮಾ ನಿರ್ದೇಶಿಸಿದರು. ಈ ಸಿನಿಮಾ ಸಂಪೂರ್ಣವಾಗಿ ಸಂಸ್ಕೃತ ಭಾಷೆಯಲ್ಲಿತ್ತು. ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. 2013ರಲ್ಲಿ ‘ಜಗದ್ಗುರು ಆದಿ ಶಂಕರ’ ಹೆಸರಿನ ಸಿನಿಮಾ ತೆಲುಗು ಭಾಷೆಯಲ್ಲಿ ನಿರ್ಮಾಣವಾಯ್ತು, ಇದೇ ಸಿನಿಮಾಕ್ಕೆ ಕನ್ನಡಕ್ಕೂ ಡಬ್ ಆಯಿತು. ಕನ್ನಡದಲ್ಲಿ ಸಿನಿಮಾದ ನರೇಷನ್ ನೀಡಿರುವುದು ನಟ ಉಪೇಂದ್ರ ಎಂಬುದು ವಿಶೇಷ. ಈಗ ಆಶುತೋಷ್ ಗೋವರಿಕರ್ ನಿರ್ದೇಶಿಸುತ್ತಿರುವ ‘ಶಂಕರ’ ಸಿನಿಮಾದಲ್ಲಿ ಕನ್ನಡದ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಆ ಕುರಿತಾಗಿ ಇನ್ನಷ್ಟೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ