ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. ಅವರನ್ನು ಆದರ್ಶವಾಗಿ ಇಟ್ಟುಕೊಂಡವರು ಕೋಟ್ಯಂತರ ಮಂದಿ ಇದ್ದಾರೆ. ಅವರ ಜೀವನದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಜನರಿಗೆ ಆಸಕ್ತಿ ಇದೆ. ಈಗ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಹೌದು, ವಾಜಪೇಯಿ ಬಯೋಪಿಕ್ (Atal Bihari Vajpayee Biopic) ಘೋಷಣೆ ಆಗಿದೆ. ಈ ಸಿನಿಮಾ ಬಗ್ಗೆ ಈಗ ಸಖತ್ ನಿರೀಕ್ಷೆ ಮೂಡಿದೆ. ಬಾಲಿವುಡ್ನಲ್ಲಿ (Bollywood) ಈ ಬಯೋಪಿಕ್ ನಿರ್ಮಾಣ ಆಗಲಿದ್ದು, ಚಿತ್ರತಂಡದ ಬಗ್ಗೆ ಇನ್ನಷ್ಟೇ ಹೆಚ್ಚಿನ ವಿವರ ಸಿಗಬೇಕಿದೆ. ಸದ್ಯಕ್ಕೆ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಟೀಸರ್ ವೈರಲ್ ಆಗಿದೆ. ಶೂಟಿಂಗ್ ಪ್ಲ್ಯಾನ್ ಬಗ್ಗೆಯೂ ಮಾಹಿತಿ ನೀಡಲಾಗಿದೆ.
‘ಅಟಲ್’ ಎಂದು ಈ ಸಿನಿಮಾಗೆ ಹೆಸರು ಇಡಲಾಗಿದೆ. ‘ಮೇ ರಹೂ ಯಾ ನಾ ರಹೂ ಯೇ ದೇಶ್ ರೆಹ್ನಾ ಚಾಹಿಯೇ: ಅಟಲ್’ ಎಂಬುದು ಈ ಚಿತ್ರದ ಪೂರ್ತಿ ಶೀರ್ಷಿಕೆ. ‘ನಾನು ಇರಲಿ, ಇಲ್ಲದೇ ಇರಲಿ. ಈ ದೇಶ ಇರಬೇಕು’ ಎಂಬುದು ಈ ವಾಕ್ಯದ ಅರ್ಥ. ದೇಶದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದ ದೂರದೃಷ್ಟಿ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಉಲ್ಲೇಖ್ ಎನ್.ಪಿ. ಅವರು ಬರೆದ ‘The Untold Vajpayee: Politician and Paradox’ ಕೃತಿಯನ್ನು ಆಧರಿಸಿ ಈ ಸಿನಿಮಾ ತಯಾರಾಗಲಿದೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ? ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿರುವುದು ಯಾರು? ಇನ್ನುಳಿದ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಅವರು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. 2023ರ ಆರಂಭದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ. ಅದೇ ವರ್ಷ ಕ್ರಿಸ್ಮಸ್ ಹಬ್ಬಕ್ಕೆ (ಡಿ.25) ಬಯೋಪಿಕ್ ರಿಲೀಸ್ ಆಗಲಿದೆ. ಅಂದು ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಜನ್ಮದಿನ ಎಂಬುದು ವಿಶೇಷ. ಈಗಾಗಲೇ ಅನೇಕ ಮಹಾನ್ ವ್ಯಕ್ತಿಗಳ ಬಯೋಪಿಕ್ ಮೂಡಿಬಂದಿದೆ. ಕೆಲವು ಚಿತ್ರಗಳು ಸೂಪರ್ ಹಿಟ್ ಕೂಡ ಆಗಿವೆ. ಈಗ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ಹೇಗೆ ಸಿದ್ಧವಾಗಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.