ನಟಿ ವಿದ್ಯಾ ಬಾಲನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅನೇಕ ಗಮನಾರ್ಹ ಸಿನಿಮಾಗಳನ್ನೂ ಅವರು ನೀಡಿದ್ದಾರೆ. ಸಖತ್ ಬೇಡಿಕೆ ಹೊಂದಿರುವ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತದೆ. ಕೆಲವು ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿರುವ ಅವರು ಆ ಮೂಲಕವೂ ಹಣ ಗಳಿಸುತ್ತಾರೆ. ವಿದ್ಯಾ ಬಾಲನ್ ಅವರ ಪತಿ ಸಿದ್ದಾರ್ಥ್ ರಾಯ್ ಕಪೂರ್ ಅವರು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಈ ದಂಪತಿ ಈಗಲೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬುದು ಅಚ್ಚರಿಯ ಸಂಗತಿ. ಅದಕ್ಕೆ ಒಂದು ಪ್ರಮುಖ ಕಾರಣ ಕೂಡ ಇದೆ.
ವಿದ್ಯಾ ಬಾಲನ್ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದರೆ ಅವರಿಗೆ ಹಣದ ಕೊರತೆ ಇದೆ ಎಂದೇನೂ ಅಲ್ಲ. ಸ್ವಂತ ಮನೆ ಖರೀದಿಸಲು ಸಾಧ್ಯವಾಗದಷ್ಟು ಬಡತನ ಅವರಿಗೆ ಇಲ್ಲ. ಹಾಗಿದ್ದರೂ ಕೂಡ ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ವಿದ್ಯಾ ಬಾಲನ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.
ಮದುವೆ ಆದ ಬಳಿಕ ಹೊಸ ಮನೆ ಖರೀದಿಸಲು ವಿದ್ಯಾ ಬಾಲನ್ ಮುಂದಾದರು. ಹಲವು ಮನೆಗಳನ್ನು ನೋಡಿದರೂ ಕೂಡ ಅವರಿಗೆ ಇಷ್ಟ ಆಗುವಂತಹ ಮನೆ ಸಿಗಲಿಲ್ಲ. ಅಂತಿಮವಾಗಿ ಒಂದು ಮನೆ ಅವರಿಗೆ ಇಷ್ಟ ಆಯಿತು. ಆದರೆ ಆ ಮನೆಯನ್ನು ಮಾರಲು ಅದರ ಮಾಲಿಕರು ರೆಡಿ ಇರಲಿಲ್ಲ. ಹಾಗಾಗಿ ಆ ಮನೆಯನ್ನು ಬಾಡಿಗೆಗೆ ಪಡೆಯುವುದು ವಿದ್ಯಾ ಬಾಲನ್ ಅವರಿಗೆ ಅನಿವಾರ್ಯ ಆಯಿತು. ಸಮುದ್ರ ಕಡೆಗೆ ಮುಖ ಮಾಡಿರುವ ಈ ಮನೆಯಲ್ಲಿ ಸುಂದರವಾದ ಗಾರ್ಡನ್ ಇದೆ. ಅದು ವಿದ್ಯಾ ಬಾಲನ್ ಅವರಿಗೆ ತುಂಬ ಇಷ್ಟವಾಯಿತು. ಆ ಕಾರಣದಿಂದಲೇ ಅವರು ಆ ಮನೆಯನ್ನು ಬಾಡಿಗೆಗೆ ಪಡೆದರು.
ಇದನ್ನೂ ಓದಿ: ವಿದ್ಯಾ ಬಾಲನ್ ಜೊತೆ ನಟಿಸೋಕೆ ಹೀರೋಗಳಿಗೆ ಇಷ್ಟವೇ ಇಲ್ಲ; ಸತ್ಯ ಹೇಳಿದ ನಟಿ
ಬೆಂಗಾಲಿ, ಹಿಂದಿ, ಮಲಯಾಳಂ, ತಮಿಳು, ತೆಲುಗಿನ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ಅವರು ನಟಿಸಿದ್ದಾರೆ. ‘ಪರಿಣೀತ’, ‘ಲಗೇ ರಹೋ ಮುನ್ನ ಭಾಯ್’, ‘ಭೂಲ್ ಭುಲಯ್ಯ’ ಮುಂತಾದ ಸಿನಿಮಾಗಳಿಂದ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತು. ಬಿಡುಗಡೆಗೆ ಸಿದ್ಧವಾಗಿರುವ ‘ಭೂಲ್ ಭುಲಯ್ಯ 3’ ಸಿನಿಮಾದಲ್ಲೂ ವಿದ್ಯಾ ಬಾಲನ್ ಅಭಿನಯಿಸಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಆ ಬಳಿಕ ವಿದ್ಯಾ ಬಾಲನ್ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.