ಲೈಂಗಿಕ ದೌರ್ಜನ್ಯ ಪ್ರಕರಣ: ಬಾಲಿವುಡ್ ನಟ ವಿಜಯ್ ರಾಜ್ ಖುಲಾಸೆ

Vijay Raaz: ಬಾಲಿವುಡ್​ನ ಜನಪ್ರಿಯ ಪೋಷಕ ಹಾಗೂ ಹಾಸ್ಯ ನಟ ವಿಜಯ್ ರಾಜ್ ವಿರುದ್ಧ 2020 ರಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಅವರಿಗೆ ಮುಕ್ತಿ ದೊರೆತಿದೆ. 2020 ರಲ್ಲಿ ‘ಶೇರ್ನಿ’ ಸಿನಿಮಾದ ಚಿತ್ರೀಕರಣದ ವೇಳೆ ವಿಜಯ್ ರಾಜ್ ವಿರುದ್ಧ ಸಹನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು.

ಲೈಂಗಿಕ ದೌರ್ಜನ್ಯ ಪ್ರಕರಣ: ಬಾಲಿವುಡ್ ನಟ ವಿಜಯ್ ರಾಜ್ ಖುಲಾಸೆ
Vijay Raaz

Updated on: May 16, 2025 | 11:24 AM

‘ರನ್’, ‘ಗಲ್ಲಿ ಬಾಯ್’, ‘ಗಂಗೂಬಾಯಿ ಕಾಠಿಯಾವಾಡಿ’, ‘ವೆಲ್​ಕಮ್’ ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಹಿಂದಿ ಸಿನಿಮಾಗಳಲ್ಲಿ ನೆನಪುಳಿಯುವ ನಟನೆ ನೀಡಿರುವ ಖ್ಯಾತ ಬಾಲಿವುಡ್ ನಟ ವಿಜಯ್ ರಾಜ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ. ಅವರ ಮೇಲೆ 2020 ರಲ್ಲಿ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರ ನ್ಯಾಯಾಲಯವು ವಿಜಯ್ ರಾಜ್ ಅವರನ್ನು ಆರೋಪದಿಂದ ಮುಕ್ತಗೊಳಿಸಿದೆ.

2020ರಲ್ಲಿ ವಿದ್ಯಾ ಬಾಲನ್ ನಟನೆಯ ‘ಶೇರ್ನಿ’ ಸಿನಿಮಾದ ಚಿತ್ರೀಕರಣದ ವೇಳೆ ವಿಜಯ್ ರಾಜ್ ವಿರುದ್ಧ ಸಹನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದರು. ವಿಚಾರಣೆ ನಡೆಸಿದ ಕೆಳಹಂತದ ನ್ಯಾಯಾಲಯವು ಸಾಕ್ಷ್ಯಗಳ ಕೊರತೆಯಿಂದಾಗಿ ವಿಜಯ್ ಅವರನ್ನು ಪ್ರಕರಣದಿಂದ ಖುಲಾಸೆ ಮಾಡುತ್ತಿರುವುದಾಗಿ ಹೇಳಿದೆ.

ಇದನ್ನೂ ಓದಿ:ಬಾಲಿವುಡ್​ ಬಳಿಕ ತಮಿಳು ಸಿನಿಮಾರಂಗದ ಬಗ್ಗೆ ಅನುರಾಗ್ ಟೀಕೆ

ವಿಜಯ್ ರಾಜ್ ವಿರುದ್ಧ ಸೆಕ್ಷನ್ 354-ಎ (ಲೈಂಗಿಕ ದೌರ್ಜನ್ಯ), ಸೆಕ್ಷನ್ 354-ಡಿ (ಕೆಟ್ಟ ಉದ್ದೇಶದಿಂದ ಹಿಂದೆ ಬೀಳುವುದು) ಹೇರಲಾಗಿತ್ತು. ಆದರೆ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗೆ ಹೆಚ್ಚಿನ ಸಾಕ್ಷ್ಯಗಳು ಸಿಗಲಿಲ್ಲ. ದೋಷಾರೋಪ ಪಟ್ಟಿಯಲ್ಲಿಯೂ ಸಹ ವಿಜಯ್ ರಾಜ್ ವಿರುದ್ಧ ಆರೋಪ ಗಟ್ಟಿಯಾಗಿ ಇರಲಿಲ್ಲ. ಆರೋಪಿ ಪರ ವಕೀಲರು, ತನಿಖಾಧಿಕಾರಿ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪವನ್ನು ಸಹ ಮಾಡಿದ್ದರು. ಎಲ್ಲ ಸಾಕ್ಷ್ಯಗಳನ್ನು ಪರಿಗಣಿಸಿದ ಬಳಿಕ ವಿಜಯ್ ರಾಜ್ ಅವರನ್ನು ಆರೋಪದಿಂದ ಖುಲಾಸೆ ಮಾಡಲಾಗಿದೆ.

ಈ ಹಿಂದೆಯೂ ವಿಜಯ್ ರಾಜ್ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿದ್ದವು. ಸೆಟ್​ನಲ್ಲಿ ಹಿರಿಯ ನಟರಿಗೆ ಗೌರವ ನೀಡುವುದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ‘ಸನ್ ಆಫ್ ಸರ್ದಾರ್’ ಸಿನಿಮಾದಿಂದ ಅವರನ್ನು ತೆಗೆಯಲಾಗಿತ್ತು. ಈ ಹಿಂದೆ ವಿದೆಶದಲ್ಲಿ ಒಮ್ಮೆ ಬಂಧನಕ್ಕೆ ಸಹ ಒಳಗಾಗಿದ್ದರು ವಿಜಯ್ ರಾಜ್. 2020 ರಲ್ಲಿ ವಿಜಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಾಗ ಅವರನ್ನು ಕೆಲ ಸಿನಿಮಾಗಳಿಂದ ಕೈಬಿಡಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ