ಬಾಲಿವುಡ್ ಬಳಿಕ ತಮಿಳು ಸಿನಿಮಾರಂಗದ ಬಗ್ಗೆ ಅನುರಾಗ್ ಟೀಕೆ
Anurag Kashyap: ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಬಾಲಿವುಡ್ ಬಿಟ್ಟು ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದಿದ್ದಾರೆ. ಇಲ್ಲಿಯೇ ನೆಲೆಗೊಳ್ಳುವುದಾಗಿ ಹೇಳಿದ್ದಾರೆ. ದಕ್ಷಿಣ ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ಅನುರಾಗ್ ಕಶ್ಯಪ್, ತಮಿಳು ಚಿತ್ರರಂಗದ ಹಾಡು ಮತ್ತು ಸಂಗೀತದ ಬಗ್ಗೆ ಟೀಕೆ ಮಾಡಿದ್ದಾರೆ. ತಮಿಳು ಸಿನಿಮಾ ಹಾಡುಗಳಿಗೆ ಅರ್ಥವೇ ಇಲ್ಲದಂತಾಗಿದೆ ಎಂದಿದ್ದಾರೆ.

ಅನುರಾಗ್ ಕಶ್ಯಪ್ (Anurag Kashyap), ಬಾಲಿವುಡ್ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ‘ನೋ ಸ್ಮೋಕಿಂಗ್’, ‘ಗ್ಯಾಂಗ್ಸ್ ಆಫ್ ವಾಸೇಪುರ್’ ಇನ್ನೂ ಕೆಲವು ಅದ್ಭುತ ಸಿನಿಮಾಗಳನ್ನು ಬಾಲಿವುಡ್ಗೆ ನೀಡಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಹೇಳುತ್ತಾ ಬಂದಿರುವ ಅನುರಾಗ್ ಕಶ್ಯಪ್, ಕಳೆದ ಹಲವು ವರ್ಷಗಳಿಂದ ಬಾಲಿವುಡ್ನ ಕೆಟ್ಟ ಸಂಪ್ರದಾಯಗಳ ಬಗ್ಗೆ ಟೀಕೆ ಮಾಡುತ್ತಲೇ ಬರುತ್ತಿದ್ದರು. ಕೊನೆಗೆ ಇತ್ತೀಚೆಗಷ್ಟೆ ಬಾಲಿವುಡ್ ಅನ್ನು ತ್ಯಜಿಸಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ಬರುತ್ತಿದ್ದಂತೆ ತಮಿಳು ಚಿತ್ರರಂಗದ ಸಂಗೀತದ ಬಗ್ಗೆ ಟೀಕೆ ಮಾಡಿದ್ದಾರೆ.
ತಮಿಳು ಚಿತ್ರರಂಗದ ಬಗ್ಗೆ ಸಾಕಷ್ಟು ಗೌರವದಿಂದ ಮಾತನಾಡುತ್ತಿದ್ದ ಅನುರಾಗ್ ಕಶ್ಯಪ್ ಇದೀಗ ತಮಿಳು ಸಿನಿಮಾ ಸಂಗೀತವನ್ನು ಟೀಕೆ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಅನುರಾಗ್ ಕಶ್ಯಪ್, ‘ತಮಿಳು ಸಿನಿಮಾ ಸಂಗೀತ, ತಮಿಳು ಸಂಗೀತದಂತೆ ಇಲ್ಲ ಅದು ಇಂಗ್ಲೀಷ್ ಮಯವಾಗಿದೆ. ಯಾವುದೋ ಇಂಗ್ಲೀಷ್ ಬ್ಯಾಂಡ್ನ ಹಾಡುಗಳನ್ನು ಕೇಳುತ್ತಿರುವಂತೆ ಅನಿಸುತ್ತದೆ. ತಮಿಳು ಸಿನಿಮಾ ಸಂಗೀತ ಕಳೆದುಹೋಗಿದೆ’ ಎಂದಿದ್ದಾರೆ.
‘ತಮಿಳು ಸಿನಿಮಾಗಳು, ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾಗಳೊಟ್ಟಿಗೆ ಸ್ಪರ್ಧೆಗೆ ಬಿದ್ದಿವೆ. ಇದರಿಂದ ತಮಿಳು ಸಿನಿಮಾಗಳ ಸ್ವಂತತೆ ಕಳೆದುಕೊಳ್ಳುತ್ತಿವೆ. ತಮಿಳು ಹಾಡುಗಳು ಈಗ ಇಂಗ್ಲೀಷ್ ಹಾಡುಗಳಾಗಿವೆ. ಅವಕ್ಕೆ ಅರ್ಥವೇ ಇಲ್ಲ. ರಾಕ್ ಬ್ಯಾಂಡ್ ಹಾಡುಗಳಂತೆ ಅನಿಸುತ್ತವೆ. ತಮಿಳು ಹಾಡುಗಳು ಅದ್ಭುತವಾಗಿ ಇರುತ್ತಿದ್ದವು, ಬಾಲಿವುಡ್ ನವರು ಸಹ ಅದರಿಂದ ಸ್ಪೂರ್ತಿ ಪಡೆದು, ಹಾಡುಗಳನ್ನು ತಮ್ಮ ಸಿನಿಮಾಗಳಿಗೆ ಬಳಸಿಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗೆ ಇಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಅನುರಾಗ್ ಕಶ್ಯಪ್ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ
ತಮಿಳು ಸಿನಿಮಾ ಹಾಡುಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ಅನುರಾಗ್ ಕಶ್ಯಪ್ ಮಾತ್ರವೇ ಅಲ್ಲ. ವಿಶೇಷವಾಗಿ ಅನಿರುದ್ಧ್ ರವಿಚಂದ್ರನ್ ಅವರ ಸಂಗೀತದ ಬಗ್ಗೆ ಕೆಲವು ಹಿರಿಯ ಸಿನಿಮಾ ನಿರ್ದೇಶಕರು, ಗಾಯಕರು ಸಹ ಬೇಸರ ಹೊರಹಾಕಿದ್ದಾರೆ. ಅನಿರುದ್ಧ್ ರವಿಚಂದ್ರನ್ ಇಂಗ್ಲೀಷ್ ಹಾಡುಗಳನ್ನು ಮಾಡುತ್ತಿದ್ದಾರೆ. ಯಾವುದೇ ಅರ್ಥವಿಲ್ಲದ ಪದಗಳನ್ನು ಹಾಡುಗಳಲ್ಲಿ ಬಳಸುತ್ತಾರೆ. ಅವರ ಉದ್ದೇಶ ಒಳ್ಳೆಯ ಸಂಗೀತ ನೀಡುವುದಲ್ಲ’ ಎಂದು ಆರೋಪಿಸಿದ್ದಾರೆ. ಸ್ವತಃ ಎಆರ್ ರೆಹಮಾನ್ ಸಹ, ಅನಿರುದ್ಧ್ಗೆ ಸಿನಿಮಾ ಸಂಗೀತದ ಬಗ್ಗೆ ಕೆಲ ಸಲಹೆಗಳನ್ನು ನಿಡಿದ್ದರು. ಆದರೂ ಸಹ ಅನಿರುದ್ಧ್ ತಮ್ಮ ಜನಪ್ರಿಯ ಹಾದಿಯಲ್ಲೇ ನಡೆದಿದ್ದಾರೆ. ಇಂಗ್ಲೀಷ್ ಮಾದರಿಯ ಹಾಡುಗಳನ್ನೇ ಮಾಡುತ್ತಿದ್ದಾರೆ.
ಅನುರಾಗ್ ಕಶ್ಯಪ್ಗೆ ತಮಿಳು ಚಿತ್ರರಂಗದೊಟ್ಟಿಗೆ ಆಪ್ತವಾದ ನಂಟು ಇದೆ. ಈ ಹಿಂದೆ ಅವರು ‘ಲಿಯೋ’, ‘ವಿಡುದಲೈ ಪಾರ್ಟ್ 2’, ‘ಮಹಾರಾಜ’ ಇನ್ನೂ ಕೆಲ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅಡವಿಶೇಷ್ ನಟನೆಯ ತೆಲುಗು ಸಿನಿಮಾ ‘ಡಕೈಟ್’ನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸಿನಿಮಾ ಸಹ ನಿರ್ದೇಶನ ಮಾಡಲಿದ್ದಾರೆ ಅನುರಾಗ್ ಕಶ್ಯಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




