ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಬಾರದ ರಿಷಬ್ ಶೆಟ್ಟಿ, ಆಕ್ರೋಶ
Rishab Shetty: ರಾಕೇಶ್ ಪೂಜಾರಿ ನಿಧನ ಹೊಂದಿದ್ದಾರೆ. "ಕಾಂತಾರ" ಚಿತ್ರದಲ್ಲಿ ಅವರು ನಟಿಸಿದ್ದರು. ಆದರೆ, ಚಿತ್ರದ ನಟ ರಿಷಬ್ ಶೆಟ್ಟಿ, ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರುವುದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದೆ. ರಿಷಬ್ ಅವರು ಸಮೀಪದಲ್ಲೇ ಇದ್ದರೂ ಅಂತ್ಯಕ್ರಿಯೆಗೆ ಬಾರದಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ನಟ ರಾಕೇಶ್ ಪೂಜಾರಿ (Rakesh Poojari) ಇತ್ತೀಚೆಗಷ್ಟೆ ನಿಧನ ಹೊಂದಿದ್ದಾರೆ. ಹಾಸ್ಯ ಕಲಾವಿದರಾಗಿದ್ದ ರಾಕೇಶ್ ಪೂಜಾರಿ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಿದ್ದರು. ರಾಕೇಶ್ ಪೂಜಾರಿಯ ಅಂತಿಮಕಾರ್ಯ ಅವರ ಹುಟ್ಟೂರಿನಲ್ಲಿ ನಡೆಯಿತು. ರಾಕೇಶ್ ಅವರ ಅಂತಿಮ ದರ್ಶನ ಪಡೆಯಲು ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು, ರಾಕೇಶ್ ಅವರ ಸಹಕಲಾವಿದರು ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದ ಆಗಮಿಸಿದ್ದರು. ಆದರೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದರೂ ಸಹ ರಿಷಬ್ ಶೆಟ್ಟಿ (Rishab Shetty), ರಾಕೇಶ್ ಅವರ ಅಂತಿಮ ದರ್ಶನಕ್ಕೆ ಬರದೇ ಇರುವುದು ನೆಟ್ಟಿಗರಲ್ಲಿ ಅಸಮಾಧಾನ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಟೀಕೆ ವ್ಯಕ್ತವಾಗಿದೆ.
ರಾಕೇಶ್ ಪೂಜಾರಿ ಅವರ ಅಂತಿಮ ದರ್ಶನಕ್ಕೆ ನಿರ್ದೇಶಕ ಯೋಗರಾಜ್ ಭಟ್, ರಕ್ಷಿತಾ, ಅನುಶ್ರೀ, ಮಾಸ್ಟರ್ ಆನಂದ್ ಸೇರಿದಂತೆ ಇನ್ನೂ ಹಲವಾರು ಮಂದಿ ಕಲಾವಿದರು ಬೆಂಗಳೂರಿನಿಂದ ಬಂದಿದ್ದರು. ಆದರೆ ಇಲ್ಲೇ 30 ಕಿ.ಮೀ ದೂರದ ಬೈಂದೂರಿನಲ್ಲಿರುವ ರಿಷಬ್ ಶೆಟ್ಟಿ ರಾಕೇಶ್ ಪೂಜಾರಿಯ ಅಂತಿಮ ದರ್ಶನಕ್ಕೆ ಬಂದಿಲ್ಲ. ಘಟನೆ ನಡೆದು ಮೂರು ದಿನವಾದರೂ ಸೌಜನ್ಯಕ್ಕಾದರೂ ಅವರ ಕುಟುಂಬದವರನ್ನು ಭೇಟಿ ಆಗಿಲ್ಲ. ‘ಕಾಂತಾರ ಚಾಪ್ಟರ್ 1’ ಸಿನಿಮಾನಲ್ಲಿ ರಾಕೇಶ್ ಪೂಜಾರಿ ನಟಿಸಿದ್ದರು, ಸಹ ನಟನ ಸಾವಿಗೂ ರಿಷಬ್ ಶೆಟ್ಟಿ ಬಾರದೇ ಇರುವುದಕ್ಕೆ ಟೀಕೆ ವ್ಯಕ್ತವಾಗಿದೆ.
‘500 ಕಿಮಿ ದೂರದಿಂದ ಬಂದವರ ನಡುವೆ 30 ಕಿಮಿ ದೂರದಲ್ಲಿದ್ದು ಬರಲು ಪುರಸೊತ್ತು ಇಲ್ಲವೇ’, ‘ಕಲಾವಿದನಿಗಿಂತ ಕಮರ್ಶಿಯಲ್ ಹೆಚ್ಚಾಯ್ತಾ’, ‘ಸಹ ಕಲಾವಿದನ ಜೀವಕ್ಕೆ ಇಷ್ಟೇನಾ ಬೆಲೆ’ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ. ರಿಷಬ್ ಶೆಟ್ಟಿಯ ವರ್ತನೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ. ಉಡುಪಿ ಬಳಿಯ ಬೈಂದೂರಿನಲ್ಲಿ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅಲ್ಲಿಂದ ರಾಕೇಶ್ ಪೂಜಾರಿಯ ಮನೆಗೆ ಕೇವಲ 30 ಕಿಮೀ, ಹಾಗಿದ್ದರೂ ಸಹ ರಿಷಬ್ ಶೆಟ್ಟಿ ಬಾರದೇ ಇರುವುದು ಸಹಜವಾಗಿಯೇ ಆಕ್ರೋಶ ಮೂಡಿಸಿದೆ.
ಇದನ್ನೂ ಓದಿ:ತಂಗಿ ಮದುವೆ ನಾವು ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ಅಂತಿಮ ದರ್ಶನಕ್ಕೆ ರಿಷಬ್ ಶೆಟ್ಟಿ ಬಾರದೇ ಹೋದರು ರಾಕೇಶ್ ನಿಧನದ ದಿನವೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಾಪಗಳನ್ನು ವ್ಯಕ್ತಪಡಿಸಿದ್ದರು. ‘ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ .. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ’ ಎಂದು ರಾಕೇಶ್ ಚಿತ್ರ ಸಹಿತ ಸಂದೇಶ ಹಂಚಿಕೊಂಡಿದ್ದರು. ಹೊಂಬಾಳೆ ಫಿಲಮ್ಸ್ ಸಹ ರಾಕೇಶ್ ನಿಧನಕ್ಕೆ ಸಂತಾಪ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ