ಮೊಬೈಲ್ ಕಸಿದುಕೊಂಡು ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿ ಸಲ್ಮಾನ್ ಖಾನ್ (Salman Khan) ವಿರುದ್ಧ ದಾಖಲಾದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದು ಮಾಡಿದೆ. ಸಲ್ಮಾನ್ ಖಾನ್ ಮಾತ್ರವಲ್ಲದೆ ಅವರ ಬಾಡಿಗಾರ್ಡ್ ನವಾಜ್ ಶೇಖ್ ವಿರುದ್ಧವೂ ಕೇಸ್ ದಾಖಲಾಗಿತ್ತು. ಪತ್ರಕರ್ತ ಅಶೋಕ್ ಪಾಂಡೆ (Ashok Pandey) ಅವರು ಕೇಸ್ ದಾಖಲು ಮಾಡಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ ಕೋರ್ಟ್ ಈ ಪ್ರಕರವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಇದರಿಂದ ಸಲ್ಮಾನ್ ಖಾನ್ ಹಾಗೂ ಅವರ ಅಂಗರಕ್ಷಕನಿಗೆ ರಿಲೀಫ್ ಸಿಕ್ಕಿದೆ.
ಸಲ್ಮಾನ್ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ರಸ್ತೆಗೆ ಇಳಿದರೆ ಅನೇಕರು ಅವರನ್ನು ಮುತ್ತಿಕೊಳ್ಳುತ್ತಾರೆ. ಪಾಪರಾಜಿಗಳು ಹಾಗೂ ಮಾಧ್ಯಮದವರು ಸಲ್ಲು ಎದುರು ಕ್ಯಾಮೆರಾ ಹಿಡಿದು ನಿಲ್ಲುತ್ತಾರೆ. 2019ರ ಏಪ್ರಿಲ್ನಲ್ಲಿ ಸಲ್ಮಾನ್ ಖಾನ್ ಅವರು ಸೈಕಲ್ ರೈಡ್ ಮಾಡುವಾಗ ಅಶೋಕ್ ಪಾಂಡೆ ಅವರು ಫೋಟೋ ತೆಗೆಯಲು ಮುಂದಾಗಿದ್ದರು. ಈ ವೇಳೆ ಸಲ್ಲು ಮೊಬೈಲ್ ಕಸಿದುಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಸಲ್ಲು ವಿರುದ್ಧ ಕೇಸ್ ದಾಖಲು ಮಾಡಿದ್ದರು. ಆದರೆ, ಇವರ ಹೇಳಿಕೆಯಲ್ಲಿ ವ್ಯತ್ಯಾಸ ಇತ್ತು.
ದೂರುದಾರ ಅಶೋಕ್ ಪಾಂಡೆ ಹೇಳಿಕೆಯಲ್ಲಿ ವ್ಯತ್ಯಾಸ ಕಂಡಿದೆ. ಮೊಬೈಲ್ ಮಾತ್ರ ಕಿತ್ತುಕೊಳ್ಳಾಯಿತು ಎಂದು ಅಶೋಕ್ ಆರಂಭದಲ್ಲಿ ದೂರಿದ್ದರು. ಎಲ್ಲಿಯೂ ಕಿರುಕುಳದ ಬಗ್ಗೆ ಉಲ್ಲೇಖ ಇರಲಿಲ್ಲ. ಆದರೆ, ಮ್ಯಾಜಿಸ್ಟ್ರೇಟ್ ಎದುರು ಕಿರುಕುಳದ ವಿಚಾರದ ಬಗ್ಗೆ ಅಶೋಕ್ ಹೇಳಿಕೆ ನೀಡಿದ್ದರು. ‘ಘಟನೆ ನಡೆದು ಎರಡು ತಿಂಗಳ ಬಳಿಕ ನಿಮಗೆ ಕಿರುಕುಳ ಆಗಿರುವ ವಿಚಾರ ಗೊತ್ತಾಯಿತೇ? ಪೊಲೀಸರ ಬಳಿ ಒಂದು ರೀತಿ ಹೇಳಿಕೆ ನೀಡಿದ್ದೀರಿ, ಕೋರ್ಟ್ನಲ್ಲಿ ಮತ್ತೊಂದು ರೀತಿ ಹೇಳಿದ್ದೀರಿ’ ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಭಾರತಿ ಹರೀಶ್ ಡಾಂಗ್ರೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Salman Khan: ‘ಪಠಾಣ್’ ಸಿನಿಮಾ ಜತೆ ಬರಲಿದ್ದಾರೆ ಸಲ್ಮಾನ್ ಖಾನ್; ಏನಿದು ಸಮಾಚಾರ?
ಈ ಪ್ರಕರಣಕ್ಕೆ ಸಂಬಂಧಿಸಿ 2022ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಸಲ್ಮಾನ್ ಖಾನ್ಗೆ ಸಮನ್ಸ್ ನೀಡಿತ್ತು. ಇದನ್ನು ಬಾಂಬೆ ಹೈಕೋರ್ಟ್ನಲ್ಲಿ ಸಲ್ಲು ಪ್ರಶ್ನೆ ಮಾಡಿದ್ದರು. ಹೈಕೋರ್ಟ್ ಈ ಸಮನ್ಸ್ಗೆ ತಡೆ ನೀಡಿತ್ತು. ಈಗ ಅರ್ಜಿ ವಿಚಾರಣೆ ನಡೆಸಿ, ಪ್ರಕರಣವನ್ನು ರದ್ದು ಮಾಡಲಾಗಿದೆ. ಇದರಿಂದ ಸಲ್ಲುಗೆ ಜಯ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ