ದೀಪಿಕಾ ಪಡುಕೋಣೆ ಹಳೇ ಸಂಬಂಧದ ಬಗ್ಗೆ ಕಾಲೇಜು ಫೆಸ್ಟ್​ನಲ್ಲಿ ಹಾಸ್ಯ; ಇದು ನಾಚಿಕೆಗೇಡು ಎಂದ ನೆಟ್ಟಿಗರು

|

Updated on: Nov 10, 2023 | 12:26 PM

ದೀಪಿಕಾ ಪಡುಕೋಣೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಅವರನ್ನು ಜನರು ಟ್ರೋಲ್​ ಮಾಡುತ್ತಿದ್ದಾರೆ. ಕಾಲೇಜು ವೇದಿಕೆಯಲ್ಲೂ ಅಪಹಾಸ್ಯ ಮಾಡಲಾಗಿದೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ವೈರಲ್​ ಆಗಿರುವ ವಿಡಿಯೋಗೆ ಜನರಿಂದ ಟೀಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ವರ್ತನೆಯನ್ನು ಅನೇಕರು ಖಂಡಿಸಿದ್ದಾರೆ.

ದೀಪಿಕಾ ಪಡುಕೋಣೆ ಹಳೇ ಸಂಬಂಧದ ಬಗ್ಗೆ ಕಾಲೇಜು ಫೆಸ್ಟ್​ನಲ್ಲಿ ಹಾಸ್ಯ; ಇದು ನಾಚಿಕೆಗೇಡು ಎಂದ ನೆಟ್ಟಿಗರು
ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ
Follow us on

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತಿದೆ. ಅದಕ್ಕೆ ಕಾರಣ ಆಗಿದ್ದು ‘ಕಾಫಿ ವಿತ್​ ಕರಣ್​’ ಶೋನಲ್ಲಿ ಅವರು ಆಡಿದ ಮಾತು. ರಣವೀರ್​ ಸಿಂಗ್​ 
(Ranveer Singh) ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದಾಗಲೇ ಬೇರೆಯವರ ಜೊತೆಗೂ ಡೇಟಿಂಗ್​ ಮಾಡಿದ್ದೆ ಎಂಬ ಸತ್ಯವನ್ನು ಅವರು ಆ ಎಪಿಸೋಡ್​ನಲ್ಲಿ ಒಪ್ಪಿಕೊಂಡರು. ಅದನ್ನೇ ಇಟ್ಟುಕೊಂಡು ಎಲ್ಲರೂ ಟ್ರೋಲ್​ (Troll) ಮಾಡಿದ್ದಾರೆ. ಸೋಶಿಯಲ್​ ಮೀಡಿಯಾ ಮಾತ್ರವಲ್ಲದೇ ಕಾಲೇಜು ಫೆಸ್ಟ್​ನಲ್ಲೂ ಈ ಬಗ್ಗೆ ಹಾಸ್ಯ ಮಾಡಲಾಗಿದೆ. ಇದು ದೀಪಿಕಾ ಪಡುಕೋಣೆ ಅವರ ಅಭಿಮಾನಿಗಳಿಗೆ ಸರಿ ಎನಿಸಿಲ್ಲ. ವಿದ್ಯಾರ್ಥಿಗಳ ಈ ವರ್ತನೆಯನ್ನು ನಾಚಿಕೆಗೇಡು ಎಂದು ಫ್ಯಾನ್ಸ್​ ಟೀಕಿಸಿದ್ದಾರೆ.

ನಟಿಯರ ಹೆಸರುಗಳು ಬೇರೆ ಬೇರೆ ವ್ಯಕ್ತಿಗಳ ಜೊತೆ ತಳುಕು ಹಾಕಿಕೊಳ್ಳುವುದು ಸಹಜ. ದೀಪಿಕಾ ಪಡುಕೋಣೆ ಕೂಡ ಹಲವರ ಜೊತೆ ಡೇಟಿಂಗ್​ ಮಾಡಿದ್ದರು. ಆ ವಿಚಾರವನ್ನು ಅವರು ಮುಚ್ಚಿಟ್ಟಿಲ್ಲ. ಆದರೆ ಈಗ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಅವರನ್ನು ಜನರು ಟ್ರೋಲ್​ ಮಾಡುತ್ತಿದ್ದಾರೆ. ಕಾಲೇಜು ವೇದಿಕೆಯಲ್ಲೂ ಅಪಹಾಸ್ಯ ಮಾಡಲಾಗಿದೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ‘ಸಿಂಗಂ ಅಗೇನ್​’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಗೆ ಶಕ್ತಿ ಶೆಟ್ಟಿ ಪಾತ್ರ

‘ಬಾಜಿರಾವ್​ ಮಸ್ತಾನಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಿಭಾಯಿಸಿದ್ದ ಪಾತ್ರದ ರೀತಿಯಲ್ಲಿ ವೇಷ ಹಾಕೊಂಡ ವಿದ್ಯಾರ್ಥಿಯೊಬ್ಬರು ವೇದಿಕೆಗೆ ಬಂದು ನಿಂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಎಲ್​​ಇಡಿ ಪರದೆಯ ಮೇಲೆ ಸಿದ್ದಾರ್ಥ್​ ಮಲ್ಯ, ಉಪೆನ್​ ಪಟೇಲ್​, ರಣಬೀರ್​ ಕಪೂರ್​, ಯುವರಾಜ್​ ಸಿಂಗ್​, ರಣವೀರ್​ ಸಿಂಗ್​ ಮುಂತಾದವರ ಫೋಟೋಗಳನ್ನು ಬಿತ್ತರ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ವೈರಲ್​ ಆಗಿರುವ ವಿಡಿಯೋಗೆ ಜನರಿಂದ ಟೀಕೆ ವ್ಯಕ್ತವಾಗಿದೆ.

ಇಷ್ಟೆಲ್ಲ ಟ್ರೋಲ್​ ಆಗಿದ್ದರೂ ಕೂಡ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರು ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ದೀಪಿಕಾ ಅವರು ತಮ್ಮ ಹಳೇ ಸಂಬಂಧಗಳ ಬಗ್ಗೆ ಓಪನ್​ ಆಗಿ ಮಾತನಾಡಿದಾಗ ರಣವೀರ್​ ಸಿಂಗ್​ ಅವರಿಗೆ ಕೊಂಚ ಕೋಪ ಬಂದಿದ್ದು ನಿಜ. ಆದರೆ ನಂತರದ ದಿನಗಳಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತುಂಬ ಅನ್ಯೋನ್ಯವಾಗಿ ಇದ್ದರು. ಸೋಶಿಯಲ್​ ಮೀಡಿಯಾದಲ್ಲಿಯೂ ದೀಪಿಕಾ ಅವರು ರೀಲ್ಸ್​ ಮಾಡುತ್ತಾ ಖುಷಿಯಾಗಿ ಕಾಲ ಕಳೆದಿದ್ದಾರೆ. ಆದರೆ ಅವರ ವೈಯಕ್ತಿಕ ವಿಚಾರವನ್ನು ಇಟ್ಟುಕೊಂಡು ನೆಟ್ಟಿಗರು ಟೈಂ ಪಾಸ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.