ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

|

Updated on: Mar 17, 2024 | 8:08 AM

Deepika Padukone: ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು, ಅವರು ತಮ್ಮ ತವರು ಮನೆಯಾದ ಬೆಂಗಳೂರಿನಲ್ಲಿಯೇ ಇದ್ದು ಇಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ.

ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Follow us on

ಬಾಲಿವುಡ್​ನ (Bollywood) ಖ್ಯಾತ ನಟಿ ಆಲಿಯಾ ಭಟ್ (Alia Bhat) ಇತ್ತೀಚೆಗಷ್ಟೆ ತಾಯಿಯಾದರು. ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು ಆದಷ್ಟು ಬೇಗ ಮಗುವನ್ನು ಸ್ವಾಗತಿಸಲಿದ್ದಾರೆ. ಬೆಂಗಳೂರಿನವರಾದ ಚೆಲುವೆ ದೀಪಿಕಾ ಪಡುಕೋಣೆ, ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ. ದೀಪಿಕಾ ಇದೀಗ ಗರ್ಭಿಣಿಯಾಗಿದ್ದು ಮಗು ಆಗುವವರೆಗೂ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿಯೇ ಕಳೆಯಲಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ 14 ನವೆಂಬರ್ 2018ರಲ್ಲಿ ವಿವಾಹವಾಗಿದ್ದರು. ಅದಕ್ಕೆ ಮುನ್ನ ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಪ್ರೀತಿಸುತ್ತಿದ್ದರು. ಮದುವೆಯಾದ ಆರು ವರ್ಷಗಳ ಬಳಿಕ ಈ ಜೋಡಿ ಪೋಷಕರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರುವ ವಿಷಯವನ್ನು ಈ ತಾರಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಈ ತಾರಾ ಜೋಡಿಗೆ ಶುಭಾಶಯಗಳನ್ನು ಸಹ ಕೋರಿದ್ದರು.

ಆಲಿಯಾ ಭಟ್, ಕರೀನಾ ಕಪೂರ್ ಇನ್ನೂ ಹಲವು ತಾರೆಯರು ಮುಂಬೈನಲ್ಲಿಯೇ ತಾಯಿಯಾದರು. ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಕೋಕಿಲಾ ಬೆನ್​ನ ವೈದ್ಯರ ನೆರವನ್ನು ಪಡೆದುಕೊಂಡರು. ಆದರೆ ದೀಪಿಕಾ ಪಡುಕೋಣೆ ಇದೀಗ ಬೆಂಗಳೂರಿನಲ್ಲಿಯೇ ತಾಯಿಯಾಗಲು ನಿರ್ಧರಿಸಿದ್ದಾರೆ. ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ. ಯಾವ ಆಸ್ಪತ್ರೆ, ಯಾವ ವೈದ್ಯರು ದೀಪಿಕಾ ಪಡುಕೋಣೆಯ ಹೆರಿಗೆ ಮಾಡಿಸಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

ಇದನ್ನೂ ಓದಿ:ಭರ್ಜರಿ ಗಳಿಕೆ ಮಾಡಿದ ಆಲಿಯಾ ಭಟ್ ನಟನೆಯ ಟಾಪ್ ಐದು ಸಿನಿಮಾಗಳಿವು..

ಬೆಂಗಳೂರು ದೀಪಿಕಾ ಪಡುಕೋಣೆಗೆ ತವರೂರಾಗಿದ್ದು, ಇಲ್ಲಿಯೇ ಮಗುವಿಗೆ ಜನ್ಮ ನೀಡಲು ದೀಪಿಕಾ ನಿಶ್ಚಯಿಸಿದ್ದಾರೆ. ಇಂದಿರಾ ನಗರದಲ್ಲಿ ದೀಪಿಕಾ ಪಡುಕೋಣೆ ಮನೆಯಿದ್ದು, ಇಲ್ಲಿಯೇ ಅವರು ಹಲವು ತಿಂಗಳುಗಳ ಕಾಲ ಸಮಯ ಕಳೆಯಲಿದ್ದಾರೆ. ಬೆಂಗಳೂರಿನ ತಮ್ಮ ಇಷ್ಟದ ಜಾಗಗಳಲ್ಲಿ ಓಡಾಡಲಿದ್ದಾರೆ. ಬೆಂಗಳೂರಿನ ಇಷ್ಟದ ಹೋಟೆಲ್​ಗಳಾದ ಗೀತಾ ಸ್ಟೋರ್ಸ್, ಮೇಘನಾ, ವಿದ್ಯಾರ್ಥಿ ಭವನ್, ಸಿಟಿಆರ್ ಇನ್ನಿತರೆ ಹೋಟೆಲ್​ಗಳಿಗೆ ಭೇಟಿ ನೀಡಲಿದ್ದಾರೆ. ಅಂದಹಾಗೆ ಈ ಹಿಂದೆ ದೀಪಿಕಾ ಹೇಳಿದ್ದರು, ತಮಗೆ ಅನ್ನ ಹಾಗೂ ರಸಂ ಬಹಳ ಇಷ್ಟವೆಂದಿದ್ದರು. ಬೆಂಗಳೂರಿಗೆ ಬಂದ ಮೇಲೆ ಈ ಎಲ್ಲ ಬಯಕೆಗಳನ್ನು ಈಡೇರಿಸಿಕೊಳ್ಳಲಿದ್ದಾರೆ.

ದೀಪಿಕಾ ಪಡುಕೋಣೆ ಪ್ರಸ್ತತ ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಅನ್ನು ಬಹುತೇಕ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ‘ಸಿಂಘಂ ಅಗೇನ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದ್ದು, ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಇದೀಗ ದೀಪಿಕಾ ಗರ್ಭಿಣಿ ಆಗಿರುವ ಕಾರಣ ಈ ಸಿನಿಮಾದ ಚಿತ್ರೀಕರಣದ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ