‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಕ್ಕೆ: ಕಾರಣ?

Deepika Padukone: ದೀಪಿಕಾ ಪಡುಕೋಣೆ ತಾಯಿಯಾದ ಬಳಿಕ ಸಾಕಷ್ಟು ಬದಲಾಗಿದ್ದಾರೆ. ಸಿನಿಮಾಗಳಿಗೆ ತೋರುವ ಬದ್ಧತೆಯಿಂದಲೇ ನಿರ್ದೇಶಕರ ಮೆಚ್ಚಿನ ನಟಿಯಾಗಿದ್ದ ದೀಪಿಕಾ ಈಗ ಬದ್ಧತೆ ಕೊರತೆಯ ಕಾರಣಕ್ಕೆ ಸಿನಿಮಾಗಳಿಂದ ಹೊರದೂಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಸ್ಪಿರಿಟ್’ ಸಿನಿಮಾ ಅವಕಾಶ ಕಳೆದುಕೊಂಡಿರುವ ದೀಪಿಕಾರನ್ನು ಈಗ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನಿಂದ ಹೊರ ಹಾಕಲಾಗಿದೆ.

‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಕ್ಕೆ: ಕಾರಣ?
Deepika Padukone

Updated on: Sep 18, 2025 | 1:19 PM

ದೀಪಿಕಾ ಪಡುಕೋಣೆ (Deepika Padukone) ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದು ಸ್ಟಾರ್ ಆಗಿ ಮೆರೆದವರು. ಮೊದಲೆಲ್ಲ ದೀಪಿಕಾ ಜೊತೆ ಕೆಲಸ ಮಾಡಿದ ನಿರ್ದೇಶಕರು ನಟಿಯ ಕಮಿಟ್​​ಮೆಂಟ್, ಪಾತ್ರದಲ್ಲಿ ತೊಡಗಿಕೊಳ್ಳುವ ರೀತಿ, ಶೂಟಿಂಗ್ ಸಮಯದಲ್ಲಿ ಹಾಕುವ ಶ್ರಮ, ಸಿನಿಮಾದ ಬಗ್ಗೆ ಇರುವ ಬದ್ಧತೆಯನ್ನು ಕೊಂಡಾಡುತ್ತಿದ್ದರು. ಆದರೆ ತಾಯಿ ಆದ ಬಳಿಕ ದೀಪಿಕಾ ಪಡುಕೋಣೆ ಬದಲಾಗಿದ್ದಾರೆ. ಕತೆ ಕೇಳುವ ಮುಂಚೆಯೇ ತಮ್ಮ ಡಿಮ್ಯಾಂಡ್​​ಗಳ ಪಟ್ಟಿಯನ್ನು ನಿರ್ದೇಶಕರು, ನಿರ್ಮಾಪಕರ ಮುಂದೆ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ದೀಪಿಕಾ ಪಡುಕೋಣೆ ಈಗಾಗಲೇ ಒಂದು ಸಿನಿಮಾ ಕಳೆದುಕೊಂಡಿದ್ದು, ಈಗ ಮತ್ತೊಂದು ದೊಡ್ಡ ಸಿನಿಮಾ ಕಳೆದುಕೊಂಡಿದ್ದಾರೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆಗಬೇಕಿತ್ತು. ಆದರೆ ಅವರ ಡಿಮ್ಯಾಂಡುಗಳ ಪಟ್ಟಿ ಕೇಳಿ ಹೆದರಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ದೀಪಿಕಾ ಪಡುಕೋಣೆಯ ಬದಲಿಗೆ ತೃಪ್ತಿ ದಿಮ್ರಿಯನ್ನು ಆಯ್ಕೆ ಮಾಡಿಕೊಂಡರು. ಅದರಲ್ಲೂ ದೀಪಿಕಾ, ದಿನಕ್ಕೆ ಕರಾರುವಕ್ಕಾಗಿ ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದೆಂಬ ಷರತ್ತು ಹಾಕಿದ್ದರಂತೆ ಇದು ಪ್ರಾಕ್ಟಿಕಲಿ ಅಸಾಧ್ಯವೆಂದು ಸಂದೀಪ್ ರೆಡ್ಡಿ ವಂಗಾ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದೀಗ ಇದೇ ಕಾರಣಕ್ಕೆ ಪ್ರಭಾಸ್ ನಟನೆಯ ಮತ್ತೊಂದು ಸಿನಿಮಾ ‘ಕಲ್ಕಿ 2898 ಎಡಿ’ ಸಿನಿಮಾದಿಂದಲೂ ದೀಪಿಕಾರನ್ನು ಕೈ ಬಿಡಲಾಗಿದೆ. ಈ ಬಗ್ಗೆ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ವೈಜಯಂತಿ ಮೂವೀಸ್ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ದೀಪಿಕಾ ಪಡುಕೋಣೆಯನ್ನು ತಮ್ಮ ಸಿನಿಮಾದಿಂದ ಕೈಬಿಡಲಾಗಿದೆ ಎಂದು ಹೇಳಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಸೀಕ್ವೆಲ್​​​ನಲ್ಲಿ ದೀಪಿಕಾ ಪಡುಕೋಣೆ ಇರುವುದಿಲ್ಲ. ಎಚ್ಚರಿಕೆಯಿಂದ ಎಲ್ಲ ವಿಷಯಗಳನ್ನು ಪರಿಗಣಿಸಿದ ನಂತರ, ನಾವು ಬೇರೆಯಾಗಲು ನಿರ್ಧರಿಸಿದ್ದೇವೆ. ಮೊದಲ ಸಿನಿಮಾ ನಿರ್ಮಿಸುವಾಗ ಸುದೀರ್ಘ ಪಯಣ ಮಾಡಿದ ಹೊರತಾಗಿಯೂ ಸಿನಿಮಾದ ಸೀಕ್ವೆಲ್​​​ನಲ್ಲಿ ನಾವು ಜೊತೆಗೆ ಇರಲು ಆಗುತ್ತಿಲ್ಲ. ‘ಕಲ್ಕಿ 2898 ಎಡಿ’ ಸಿನಿಮಾವು ಹೆಚ್ಚಿನ ಶ್ರಮ, ಶ್ರದ್ಧೆಯನ್ನು ಬೇಡುತ್ತದೆ. ದೀಪಿಕಾ ಅವರ ಭವಿಷ್ಯದ ಸಿನಿಮಾಗಳಿಗೆ ಒಳಿತು ಬಯಸುತ್ತೇವೆ’ ಎಂದು ವೈಜಯಂತಿ ಮೂವೀಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ:ದೀಪಿಕಾ ಪಡುಕೋಣೆ ನಟಿಸಿದ್ದ ಸಿನಿಮಾದ ಸೀಕ್ವೆಲ್​​​ನಲ್ಲಿ ರಶ್ಮಿಕಾ, ಶೂಟಿಂಗ್ ಶುರು

ಆ ಮೂಲಕ ನಟಿ ದೀಪಿಕಾಗೆ ಬದ್ಧತೆಯ ಕೊರತೆ ಇದೆ. ಅದರಿಂದಲೇ ತಾವು ದೀಪಿಕಾರನ್ನು ಸಿನಿಮಾದಿಂದ ಕೈಬಿಟ್ಟಿದ್ದೇವೆ ಎಂದು ಪರೋಕ್ಷವಾಗಿ ಹೇಳಿದೆ ನಿರ್ಮಾಣ ಸಂಸ್ಥೆ. ದೀಪಿಕಾ ಪಡುಕೋಣೆಯ ಎಂಟು ಗಂಟೆ ಕೆಲಸದ ಷರತ್ತನ್ನು ಒಪ್ಪಲು ಸಾಧ್ಯವಾಗದೆ ದೀಪಿಕಾರನ್ನು ಸಿನಿಮಾದಿಂದಲೇ ಕೈಬಿಡುವ ದಿಟ್ಟ ನಿರ್ಧಾರವನ್ನು ವೈಜಯಂತಿ ಮೂವೀಸ್ ಮಾಡಿದೆ.

ಆದರೆ ಈಗ ದೀಪಿಕಾ ಪಡುಕೋಣೆ ಸಿನಿಮಾದಿಂದ ಹೊರ ಹೋದ ಬಳಿಕ ಸಿನಿಮಾದ ಸೀಕ್ವೆಲ್ ಹೇಗೆ ಸಾಧ್ಯವಾಗಲಿದೆ ಎಂಬ ಪ್ರಶ್ನೆ ಎದ್ದಿದೆ. ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ಬಹಳ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಎರಡನೇ ಭಾಗದಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಮಹತ್ವ ಇತ್ತು. ಹೀಗಿರುವಾಗ ದೀಪಿಕಾ ಅವರನ್ನು ಸಿನಿಮಾದಿಂದ ಕೈಬಿಟ್ಟು ಬಹಳ ದಿಟ್ಟ ನಿರ್ಧಾರವನ್ನು ವೈಜಯಂತಿ ಮೂವೀಸ್ ತಳೆದಿದೆ. ದೀಪಿಕಾ ಹೊರಹೋದ ಬಳಿಕ ಸಿನಿಮಾದ ಕತೆಯನ್ನು ನಿರ್ದೇಶಕ ನಾಗ್ ಅಶ್ವಿನ್ ಬದಲಿಸಿದ್ದಾರೆಯೇ ಅಥವಾ ಸೀಕ್ವಲ್ ಸಿನಿಮಾ ಅನ್ನೇ ಕೈಬಿಡಲಿದ್ದಾರೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Thu, 18 September 25