ಸಿನಿಮಾ (Cinema) ನಟರ ಚಿತ್ರಗಳನ್ನು, ವಿಡಿಯೋಗಳನ್ನು ಅನುಮತಿ ಇಲ್ಲದೆ ಬಳಸುವಂತಿರಲಿಲ್ಲ. ಆದರೆ ಇದೀಗ ಕೆಲವು ಬಾಲಿವುಡ್ ನಟರು ತಮ್ಮ ಸ್ಟೈಲ್, ಡೈಲಾಗ್, ಹಾವಭಾವದ ಮೇಲೂ ಹಕ್ಕುಸ್ವಾಮ್ಯ ಸಾಧಿಸಿದ್ದು, ಅವರ ಸ್ಟೈಲ್ ಅನ್ನು ಯಾರೂ ನಕಲು ಸಹ ಮಾಡುವಂತಿಲ್ಲ. ಅಮಿತಾಬ್ ಬಚ್ಚನ್ ಈಗಾಗಲೇ ಆ ರೀತಿಯ ಹಕ್ಕುಸ್ವಾಮ್ಯವನ್ನು ಪಡೆದಿದ್ದಾರೆ. ಅವರ ಶೈಲಿಯನ್ನು, ಅವರ ಹಿಂದಿನ ಯಾವುದೇ ಸಿನಿಮಾದ ಪಾತ್ರವನ್ನು ಸಹ ಯಾವುದೇ ಮಿಮಿಕ್ರಿ ಕಲಾವಿದರು ಸಹ ನಕಲು ಮಾಡುವಂತಿರಲಿಲ್ಲ. ಈಗ ಜಾಕಿ ಶ್ರಾಫ್ ಸಹ ಇದೇ ರೀತಿಯ ಹಕ್ಕುಸ್ವಾಮ್ಯ ಆದೇಶ ತಂದಿದ್ದಾರೆ.
ಅಮಿತಾಬ್ ಬಚ್ಚನ್ ರೀತಿಯಲ್ಲಿ ಜಾಕಿ ಶ್ರಾಫ್ ಅವರನ್ನು ಸಹ ಹಲವಾರು ಮಿಮಿಕ್ರಿ ಕಲಾವಿದರು, ಹಾಸ್ಯ ಕಲಾವಿದರು ನಕಲು ಮಾಡುತ್ತಿದ್ದರು. ಆದರೆ ಈಗ ಜಾಕಿ ಶ್ರಾಫ್ ತಮ್ಮ ವ್ಯಕ್ತಿತ್ವ, ಶೈಲಿ, ಸಂಭಾಷಣೆ, ಹಾವಭಾವದ ಮೇಲೆ ಹಕ್ಕುಸ್ವಾಮ್ಯ ಆದೇಶ ತಂದಿದ್ದು, ಇನ್ನು ಮುಂದೆ ಯಾರೂ ಸಹ ಯಾವುದೇ ಟಿವಿ, ಸಿನಿಮಾಗಳಲ್ಲಿ ಜಾಕಿ ಶ್ರಾಫ್ ಅವರನ್ನು ನಕಲು ಮಾಡುವಂತಿಲ್ಲ ಮಾತ್ರವಲ್ಲ ಅವರ ಜನಪ್ರಿಯ ಸಂಭಾಷಣೆಗಳನ್ನು ಸಹ ಹೇಳುವಂತಿಲ್ಲ.
ಇದನ್ನೂ ಓದಿ:‘ಬಾಪ್ ಆಫ್ ಆಲ್ ಫಿಲ್ಮ್ಸ್ ನಲ್ಲಿ ಸಂಜಯ್ ದತ್, ಮಿಥುನ್ ಚಕ್ರವರ್ತಿ, ಜಾಕಿ ಶ್ರಾಫ್ ಮತ್ತು ಸನ್ನಿ ಡಿಯೋಲ್
ಜಾಕಿ ಶ್ರಾಫ್ ಅವರ ವ್ಯಕ್ತಿತ್ವ, ಹೆಸರು, ಧ್ವನಿ, ಚಿತ್ರ, ಹೋಲಿಕೆ, ನಡವಳಿಕೆ, ಸನ್ನೆಗಳು, ಸಂಭಾಷಣೆಗಳು ಮತ್ತು ಇತರೆ ಗುರುತಿಸಬಹುದಾದ ಗುಣಲಕ್ಷಣಗಳಂತಹ ವಿಶಿಷ್ಟ ಲಕ್ಷಣಗಳನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ, ಮಾರುಕಟ್ಟೆ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತಿಲ್ಲ ಎಂದು ಉಚ್ಚ ನ್ಯಾಯಾಲಯ ಆದೇಶಿಸಿದೆ. ಹೆಸರು, ಧ್ವನಿ, ಚಿತ್ರ, ಹೋಲಿಕೆ, ನಡವಳಿಕೆ, ಸನ್ನೆಗಳು, ಸಂಭಾಷಣೆಗಳು ಇನ್ನಿತರೆ ಗುಣಲಕ್ಷಣಗಳು ಆ ವ್ಯಕ್ತಿಯ ‘ವ್ಯಕ್ತಿತ್ವ ಹಕ್ಕುಗಳು’ ಮತ್ತು ‘ಪ್ರಚಾರ ಹಕ್ಕುಗಳನ್ನು’ ಒಳಗೊಳ್ಳುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಈ ಗುಣಲಕ್ಷಣಗಳನ್ನು ಅನಧಿಕೃತವಾಗಿ ವಾಣಿಜ್ಯ ಬಳಕೆ ಮಾಡುವುದರಿಂದ ‘ವ್ಯಕ್ತಿತ್ವ ಹಕ್ಕುಗಳು’ ಮತ್ತು ‘ಪ್ರಚಾರ ಹಕ್ಕುಗಳನ್ನು’ ಉಲ್ಲಂಘಿಸಿದಂತಾಗುತ್ತದೆ ಮತ್ತು ಕಾಲಾನಂತರದಲ್ಲಿ ಮೂಲ ವ್ಯಕ್ತಿ ಸ್ಥಾಪಿಸಿದ ಬ್ರ್ಯಾಂಡ್ ಮೌಲ್ಯವನ್ನು ಕಡಿಮೆಗೊಳಿಸುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಇತ್ತೀಚೆಗೆ ಬಂದ ‘ಮೇಕ್ ಮೈ ಟ್ರಿಪ್’ನ ಜಾಹೀರಾತಿನಲ್ಲಿ ಜಾಕಿ ಶ್ರಾಫ್ರ ನಕಲಿ ಧ್ವನಿ, ಅವರ ಹಾವಭಾವ ಬಳಸಲಾಗಿದೆ. ಅಲ್ಲದೆ, ಕಪಿಲ್ ಶರ್ಮಾ ಶೋ ಸೇರಿದಂತೆ ಹಲವು ಕಾಮಿಡಿ ಕಾರ್ಯಕ್ರಮಗಳಲ್ಲಿ ಜಾಕಿ ಶ್ರಾಫ್ ಅವರ ನಕಲನ್ನು ಹಲವು ಹಾಸ್ಯ ಕಲಾವಿದರು ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಕಪಿಲ್ ಶರ್ಮಾ ಶೋನಲ್ಲಿ ಕಮಿಡಿಯನ್ ಕೃಷ್ಣ, ಜಾಕಿ ಶ್ರಾಫ್ ಅವರ ಶೈಲಿಯನ್ನು ಅದ್ಭುತವಾಗಿ ನಕಲು ಮಾಡಿ ಹಾಸ್ಯ ಉಕ್ಕಿಸುತ್ತಾರೆ. ಆದರೆ ಇನ್ನು ಮುಂದೆ ಯಾರೂ ಸಹ ಜಾಕಿ ಶ್ರಾಫ್ ಶೈಲಿಯನ್ನು ನಕಲು ಮಾಡುವಂತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ