ನಟಿ ಕಂಗನಾ ರಣಾವತ್ (Kangana Ranaut) ಅವರು ಸಿನಿಮಾ ಮಾಡಿದ್ದಕ್ಕಿಂತ ವಿವಾದ ಮಾಡಿದಕೊಂಡಿದ್ದೇ ಹೆಚ್ಚು. ತಮ್ಮನ್ನು ತಾವು ಲೇಡಿ ಸೂಪರ್ ಸ್ಟಾರ್ ಎಂಬಂತೆ ಬಿಂಬಿಸಿಕೊಂಡು, ಬಾಲಿವುಡ್ನ ಇತರೆ ಸ್ಟಾರ್ ಹೀರೋಗಳ ಬಗ್ಗೆ ಟೀಕೆ ಮಾಡುತ್ತಿದ್ದ ಅವರು ಈಗ ಹೀನಾಯವಾಗಿ ಸೋತಿದ್ದಾರೆ. ಕಂಗನಾ ರಣಾವತ್ ನಟಿಸಿರುವ ‘ಧಾಕಡ್’ ಸಿನಿಮಾ (Dhaakad Movie) ಮೇ 20ರಂದು ತೆರೆಕಂಡಿತು. ಈ ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಉತ್ತಮ ಗುಣಮಟ್ಟದ ಮೇಕಿಂಗ್, ಭಾರಿ ಪ್ರಚಾರ ಹಾಗೂ ಕಂಗನಾ ಅವರ ಇಮೇಜ್ನಿಂದಾಗಿ ಈ ಚಿತ್ರ ಸೂಪರ್ ಹಿಟ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಸಿನಿಮಾ ಹೀನಾಯವಾಗಿ ಸೋತಿದೆ. ‘ಧಾಕಡ್’ ಸಿನಿಮಾ ಮೇಲೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿದ ನಿರ್ಮಾಪಕರು ಕೈ ಸುಟ್ಟುಕೊಂಡಿದಾರೆ. ಗಲ್ಲಾಪೆಟ್ಟಿಗೆಯಲ್ಲಿ ಆಗುತ್ತಿರುವ ಚಿಲ್ಲರೆ ಕಲೆಕ್ಷನ್ (Box Office Collection) ಕಂಡು ಅವರು ಕಂಗಾಲಾಗಿದ್ದಾರೆ. ಮೊದಲ ದಿನ ಕಂಗನಾ ರಣಾವತ್ ಸಿನಿಮಾ ನಿರೀಕ್ಷಿತ ಮಟ್ಟದ ಓಪನಿಂಗ್ ಪಡೆದುಕೊಳ್ಳಲಿಲ್ಲ. ಕನಿಷ್ಠ ಪಕ್ಷ ವೀಕೆಂಡ್ನಲ್ಲಾದರೂ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬಹುದು ಎಂದುಕೊಂಡರೆ ಆ ಭರವಸೆ ಕೂಡ ಸುಳ್ಳಾಗಿದೆ.
ಬಿಗ್ ಬಜೆಟ್ ಸಿನಿಮಾ ಹೀನಾಯವಾಗಿ ಸೋತರೆ ಅದನ್ನು ಡಿಸಾಸ್ಟರ್ ಅಂತ ಹೇಳಲಾಗುತ್ತದೆ. ಅದು ‘ಧಾಕಡ್’ ಚಿತ್ರದ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ವಿಶ್ವಾದ್ಯಂತ ರಿಲೀಸ್ ಆದ ಈ ಸಿನಿಮಾ ಮೊದಲ ದಿನ (ಮೇ 20) ಗಳಿಸಿದ್ದು ಕೇವಲ 50 ಲಕ್ಷ ರೂಪಾಯಿ. ಎರಡನೇ ದಿನವಾದ ಶನಿವಾರವಾದರೂ ಕಲೆಕ್ಷನ್ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಅಂದು ಕೂಡ ಬರೀ 50 ಲಕ್ಷ ರೂಪಾಯಿ ಗಳಿಸುವಲ್ಲಿಗೆ ಈ ಚಿತ್ರ ಸುಸ್ತು ಹೊಡೆದಿದೆ. ಅಲ್ಲಿಗೆ ಎಲ್ಲ ಭರವಸೆಗಳು ಕಮರಿಹೋಗಿವೆ.
ಇದನ್ನೂ ಓದಿ: ‘ಧಾಕಡ್’ ರಿಲೀಸ್ಗೂ ಮುನ್ನ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ಕಂಗನಾ ರಣಾವತ್
ಕಂಗನಾ ರಣಾವತ್ ಸೇರಿದಂತೆ ಎಲ್ಲ ಕಲಾವಿದರ ಸಂಭಾವನೆಗೆ ನಿರ್ಮಾಪಕರು ಬಹುಕೋಟಿ ರೂಪಾಯಿ ಸುರಿದಿದ್ದಾರೆ. ಅನೇಕ ವಿದೇಶಿ ತಂತ್ರಜ್ಞರನ್ನು ಕರೆಸಿ ಕೆಲಸ ಮಾಡಿಸಲಾಗಿದ್ದು, ಅವರಿಗೂ ದೊಡ್ಡ ಮೊತ್ತದ ಸಂಬಳ ನೀಡಲಾಗಿದೆ. ಅದರ ಜೊತೆಗೆ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಿಕ್ಕಾಪಟ್ಟೆ ಖರ್ಚಾಗಿದೆ. ಒಬ್ಬ ಸ್ಟಾರ್ ನಟನ ಆ್ಯಕ್ಷನ್ ಸಿನಿಮಾಗೆ ಹಾಕುವಷ್ಟೇ ಹಣವನ್ನು ‘ಧಾಕಡ್’ ಚಿತ್ರಕ್ಕೂ ಸುರಿಯಲಾಗಿದೆ. ಪ್ರಚಾರದ ಖರ್ಚು ಕೂಡ ಸೇರಿದರೆ ಇದರ ಬಜೆಟ್ 100 ಕೋಟಿ ರೂಪಾಯಿ ಮುಟ್ಟಬಹುದು. ಆದರೆ ಈ ಸಿನಿಮಾ 2 ದಿನಕ್ಕೆ ಗಳಿಸಿರುವುದು ಕೇವಲ 1 ಕೋಟಿ ರೂಪಾಯಿ ಮಾತ್ರ. ಡಿಸಾಸ್ಟರ್ ಎಂಬ ಪದಕ್ಕೆ ಸೂಕ್ತ ಉದಾಹರಣೆಯಾಗಿ ಈ ಚಿತ್ರ ಜನರ ಕಣ್ಣೆದುರಿಗಿದೆ.
ಇದನ್ನೂ ಓದಿ: ಕಂಗನಾ ರಣಾವತ್ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್; ಏನದು?
ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದ ಎದುರು ಹಿಂದಿ ಚಿತ್ರರಂಗ ಮಂಕಾಗಿದೆ. ‘ಧಾಕಡ್’ ಚಿತ್ರದಿಂದ ಬಾಲಿವುಡ್ ಬಿಸ್ನೆಸ್ ಚೇತರಿಸಿಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ಅದು ನಿಜವಾಗಿಲ್ಲ. ‘ಧಾಕಡ್’ ಬದಲಿಗೆ ಜನರು ‘ಭೂಲ್ ಭುಲಯ್ಯ 2’ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಕಾರ್ತಿಕ್ ಆರ್ಯನ್ ನಟನೆಯ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಲ್ಲಿ ಹಾರರ್ ಕಾಮಿಡಿ ಅಂಶವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಮೊದಲ ದಿನ ‘ಭೂಲ್ ಭುಲಯ್ಯ 2’ ಸಿನಿಮಾ 14.11 ಕೋಟಿ ರೂಪಾಯಿ ಗಳಿಸಿತು. 2ನೇ ದಿನ 18.34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:00 pm, Sun, 22 May 22