
ನಟ ಧರ್ಮೇಂದ್ರ ಅವರು ಇಂದು (ನವೆಂಬರ್ 24) ನಿಧನ ಹೊಂದಿದ್ದಾರೆ. ಡಿಸೆಂಬರ್ 8ರಂದು ಅವರು 90ನೇ ವಯಸ್ಸಿನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಅದಕ್ಕೂ ಮೊದಲೇ ಅವರು ನಿಧನ ಹೊಂದಿದ್ದಾರೆ. ಅವರು ಕನ್ನಡದ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ, ಧರ್ಮೇಂದ್ರ ಅವರು ರಾಮನಗರಕ್ಕೆ ಕಾಲಿಟ್ಟಿದ್ದರು. ‘ಶೋಲೆ’ ಸಿನಿಮಾದ ಐಕಾನಿಕ್ ದೃಶ್ಯದ ಶೂಟ್ನ ಇಲ್ಲಿಯೇ ಮಾಡಲಾಯಿತು.
ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರು ‘ಶೋಲೆ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. 1975ರಲ್ಲಿ ಬಂದ ಈ ಚಿತ್ರಕ್ಕೆ ಈಗ 50 ವರ್ಷ. ಈ ಸಿನಿಮಾನ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಧರ್ಮೇಂದ್ರ ಅವರು ವೀರು ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿಯಾಭ್ ಜೈ ಹೆಸರಿನ ಪಾತ್ರ ಮಾಡಿದ್ದರು. ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಆಗಿದ್ದು, ರಾಮನಗರದ ರಾಮದೇವರ ಬೆಟ್ಟದಲ್ಲಿ. ‘ಶೋಲೆ’ ಸಿನಿಮಾ ಶೂಟ್ ಬಳಿಕ ಈ ಬೆಟ್ಟಕ್ಕೆ ಶೋಲೆ ಬೆಟ್ಟ ಎಂಬ ಹೆಸರು ಬಂತು.
ವೀರುನ ಡಕಾಯತರ ನಾಯಕ ಗಬ್ಬರ್ ಸಿಂಗ್ (ಅಮ್ಜದ್ ಖಾನ್) ಕಿಡ್ನ್ಯಾಪ್ ಮಾಡಿ ಇದೇ ಬೆಟ್ಟದ ಮೇಲೆ ಕಟ್ಟಿ ಹಾಕಿರುತ್ತಾನೆ. ಆಗ ಜೈ ಬಂದು ಆತನನ್ನು ಕಾಪಾಡುತ್ತಾನೆ. ಈ ವೇಳೆ ಜೈ ನಿಧನ ಹೊಂದುತ್ತಾನೆ. ಕ್ಲೈಮ್ಯಾಕ್ಸ್ ಫೈಟ್ ಇದೇ ಬೆಟ್ಟದಲ್ಲಿ ನಡೆಯುತ್ತದೆ. ನಂತರ ಗಬ್ಬರ್ನ ವೀರು ಬೆನ್ನು ಹತ್ತುತ್ತಾನೆ. ಕಲ್ಲು ಬಂಡೆಗಳಿಂದ ಈ ಬೆಟ್ಟ ಆವೃತವಾಗಿದೆ. ಚಾರಣಿಗರಿಗೆ ಇದು ಫೇವರಿಟ್ ಜಾಗ ಕೂಡ ಹೌದು. ಹೀಗಾಗಿ, ‘ಶೋಲೆ’ ಕ್ಲೈಮ್ಯಾಕ್ಸ್ಗೆ ಜಾಗ ಹೇಳಿ ಮಾಡಿಸಿದಂತೆ ಇತ್ತು. ಇದೇ ಬೆಟ್ಟದಮೇಲೆ ಧರ್ಮೇಂದ್ರ ಕುದುರೆ ಸವಾರಿ ಕೂಡ ಮಾಡುತ್ತಾರೆ. ಹಲವು ದಿನಗಳ ಕಾಲ ಇಲ್ಲಿ ಶೂಟಿಂಗ್ ನಡೆದಿತ್ತು.
ಇದನ್ನೂ ಓದಿ: ಧರ್ಮೇಂದ್ರ ನಿಧನ; ಚಿತ್ರರಂಗದಲ್ಲಿ ಆರು ದಶಕದ ಸೇವೆ; 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
ಧರ್ಮೇಂದ್ರ ಅವರು ನವೆಂಬರ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಆ ಬಳಿಕ ಅವರು ಚೇತರಿಸಿಕೊಂಡಿದ್ದರಿಂದ ಅವರನ್ನು ಮನೆಗೆ ಕರೆತರಲಾಯಿತು. ಆದರೆ, ಈಗ ಅವರು ಇಂದು (ನವೆಂಬರ್ 24) ನಿಧನ ಹೊಂದಿದ್ದಾರೆ. ಅವರ ಸಾವಿಗೆ ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಇಂದೇ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.