ಧರ್ಮೇಂದ್ರ ನಿಧನ; ಚಿತ್ರರಂಗದಲ್ಲಿ ಆರು ದಶಕದ ಸೇವೆ; 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
Dharmendra Obituary: ಬಾಲಿವುಡ್‌ನ 'ಹಿ ಮ್ಯಾನ್' ಧರ್ಮೇಂದ್ರ 89ನೇ ವಯಸ್ಸಿಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನವೆಂಬರ್ 24ರಂದು ಕೊನೆಯುಸಿರೆಳೆದರು. 1960ರ ದಶಕದಿಂದ ಚಿತ್ರರಂಗದಲ್ಲಿ ಮಿಂಚಿದ ಧರ್ಮೇಂದ್ರ, 'ಶೋಲೆ' ಸೇರಿದಂತೆ ಹಲವು ಐಕಾನಿಕ್ ಚಿತ್ರಗಳಲ್ಲಿ ನಟಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಇಂದು (ನವೆಂಬರ್ 24) ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದೇವರು ಕರೆದುಕೊಂಡಿದ್ದಾರೆ. ಡಿಸೆಂಬರ್ 8ರಂದು ಅವರು 90ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು.
ಬಾಲಿವುಡ್ನಲ್ಲಿ ಧರ್ಮೇಂದ್ರ ಅವರು ‘ಹಿ ಮ್ಯಾನ್’ ಎಂದೇ ಫೇಮಸ್ ಆದವರು. ಅವರ ನಗು ಅದೆಷ್ಟೋ ಮಹಿಳಾ ಅಭಿಮಾನಿಗಳ ಮನಸ್ಸನ್ನು ಹೊಕ್ಕು ಛಿದ್ರ ಮಾಡಿತ್ತು. ಅವರು ತೆರೆಮೇಲೆ ಕಾಣಿಸಿಕೊಂಡರೆ ಮಹಿಳಾಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದರು. ‘ನನ್ನ ಪತಿಯೂ ಇಷ್ಟೇ ಚಾರ್ಮ್ಫುಲ್ ಆಗಿ ಇರಬಾರದಿತ್ತಾ’ ಎಂದು ಕೇಳಿಕೊಂಡವರು ಅದೆಷ್ಟು ಮಂದಿಯೋ.
ಧರ್ಮೇಂದ್ರ ಅವರ ಧರಮ್ ಸಿಂಗ್ ಡಿಯೋಲ್ ಆಗಿ 1935ರಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಪಂಜಾಬ್ನ ಸಣ್ಣ ನಗರದಿಂದ ಬಂದ ಅವರು, ಚಿತ್ರರಂಗದ ಅತ್ಯಂತ ಪ್ರೀತಿಯ ಹೀರೋ ಆದರು. 1950ರ ಸಂದರ್ಭದಲ್ಲಿ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ತಲ್ಲಣಗಳು ಎದ್ದಿದ್ದವು. 1960ರ ವೇಳೆಗೆ ಚಿತ್ರರಂಗಕ್ಕೆ ಬಂದ ಅವರು, ಹೊಸ ಬದಲಾವಣೆಗೆ ಸಾಕ್ಷಿ ಆದರು.
1960ರ ‘ದಿಲ್ ಬಿ ತೇರಾ ಹಂಬಿ ತೇರಾ’ ಸಿನಿಮಾದಲ್ಲಿ ಧರ್ಮೇಂದ್ರ ನಟಿಸಿದರು. 1966ರ ‘ಫೂಲ್ ಔರ್ ಪತ್ತರ್’ ಸಿನಿಮಾ ದೊಡ್ಡ ಯಶಸ್ಸು ನೀಡಿತು. ಈ ಚಿತ್ರದಲ್ಲಿ ಸಖತ್ ರಾ ಆಗಿ ಕಾಣಿಸಿಕೊಂಡಿದರು. ಶರ್ಟ್ ಬಟನ್ ತೆಗೆದು ಎದೆ ತೋರಿಸೋ ಸ್ಟೈಲ್ನ ಪ್ರಚಲಿತಕ್ಕೆ ತಂದವರು ಧರ್ಮೇಂದ್ರ. ಎಲ್ಲಿಯೋ ಲಿಮಿಟ್ ದಾಟದೆ ಅವರು ಸಿನಿಮಾ ಮಾಡಿದರು.
1970ರ ವೇಳೆ ರೊಮ್ಯಾನ್ಸ್, ಆ್ಯಕ್ಷನ್, ಕಾಮಿಡಿ ರೀತಿಯ ಸಿನಿಮಾಗಳನ್ನು ಅವರು ಮಾಡಲು ಆರಂಭಿಸಿದರು. ‘ಶೋಲೆ’, ‘ಡ್ರೀಮ್ ಗರ್ಲ್’, ‘ಸೀತಾ ಔರ್ ಗೀತಾ’, ‘ಜುಗ್ಣು’, ‘ರಾಜಾ ರಾಣಿ’ ಸಿನಿಮಾಗಳಲ್ಲಿ ಧರ್ಮೇಂದ್ರ ಗಮನ ಸೆಳೆದರು.
ಇದನ್ನೂ ಓದಿ: ನಟ ಧರ್ಮೇಂದ್ರ ನಿಧನ; ಹಿಂದಿ ಚಿತ್ರರಂಗದ ಹಿ ಮ್ಯಾನ್ ಇನ್ನಿಲ್ಲ
ಹಲವು ವರ್ಷಗಳ ಕಾಲ ಹೀರೋ ಆಗಿ ನಟಿಸಿದ ಧರ್ಮೇಂದ್ರ ನಂತರ ಹಿಂದಕ್ಕೆ ಸರಿದರು. ಹಾಗಂತ ಅವರು ಚಿತ್ರರಂಗದ ಜೊತೆಗಿನ ನಂಟು ಕಳೆದುಕೊಳ್ಳಲಿಲ್ಲ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸಿದರು. ಧರ್ಮೇಂದ್ರ ಎರಡನೇ ಪತ್ನಿ ಹೇಮಾ ಮಾಲಿನಿ. ಅವರು ಸನ್ನಿ ಡಿಯೋಲ್, ಬಾಬಿ ಡಿಯೋಲ್, ಇಶಾ ಡಿಯೋಲ್ ಸೇರಿದಂತೆ ಆರು ಜನ ಮಕ್ಕಳನ್ನು ಅಗಲಿದ್ದಾರೆ. 2012ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಭೂಷಣ’ ನೀಡಿ ಗೌರವಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:14 pm, Mon, 24 November 25




