AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರದ ಜನರಿಗೆ ಆಗಿನ ಕಾಲದಲ್ಲೇ 100 ರೂಪಾಯಿ, ಊಟ ಕೊಟ್ಟಿದ್ದ ಧರ್ಮೇಂದ್ರ

1975ರಲ್ಲಿ ಬಿಡುಗಡೆ ಆದ ‘ಶೋಲೆ’ ಸಿನಿಮಾದ ಚಿತ್ರೀಕರಣ ಕರ್ನಾಟಕದ ರಾಮನಗರದಲ್ಲಿ ನಡೆದಿತ್ತು. ಈ ಸಿನಿಮಾದ ಹೀರೋ ಧರ್ಮೇಂದ್ರ ಅವರು ಇಂದು (ನವೆಂಬರ್ 24) ಕೊನೆಯುಸಿರು ಎಳೆದಿದ್ದಾರೆ. ರಾಮದೇವರ ಬೆಟ್ಟದ ನಿವಾಸಿ ಬೆಟ್ಟಯ್ಯ ಅವರು ‘ಟಿವಿ9’ ಜೊತೆ ಮಾತನಾಡಿ ‘ಶೋಲೆ’ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ರಾಮನಗರದ ಜನರಿಗೆ ಆಗಿನ ಕಾಲದಲ್ಲೇ 100 ರೂಪಾಯಿ, ಊಟ ಕೊಟ್ಟಿದ್ದ ಧರ್ಮೇಂದ್ರ
Bettayya, Sholay Poster
ಪ್ರಶಾಂತ್​ ಬಿ.
| Edited By: |

Updated on: Nov 24, 2025 | 7:09 PM

Share

ಭಾರತೀಯ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ (Dharmendra) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಧರ್ಮೇಂದ್ರ ನಟಿಸಿದ್ದ ಸೂಪರ್ ಹಿಟ್ ‘ಶೋಲೆ’ ಸಿನಿಮಾ (Sholay Movie) ಚಿತ್ರೀಕರಣ ಕರ್ನಾಟಕದ ರಾಮನಗರದಲ್ಲಿ ನಡೆದಿತ್ತು. ಆ ವೇಳೆ ಶೂಟಿಂಗ್ ನೋಡಲು ಹೋಗುತ್ತಿದ್ದ ರಾಮನಗರ (Ramanagara) ನಿವಾಸ ಬೆಟ್ಟಯ್ಯ ಅವರು ಈಗ ಟಿವಿ9 ಜೊತೆ ಮಾತನಾಡಿದ್ದಾರೆ. ಅಂದು ತಾವು ಧರ್ಮೇಂದ್ರ ಅವನ್ನು ಕಣ್ಣಾರೆ ನೋಡಿದ್ದ ಅನುಭವವನ್ನು ಅವರು ಈಗ ಹಂಚಿಕೊಂಡಿದ್ದಾರೆ. ಅಂದಿನ ದಿನಗಳಲ್ಲಿ ಶೂಟಿಂಗ್ ಹೇಗೆ ನಡೆಯುತ್ತಿತ್ತು? ಧರ್ಮೇಂದ್ರ ಅವರು ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಬೆಟ್ಟಯ್ಯ ವಿವರಿಸಿದ್ದಾರೆ.

‘ಧರ್ಮೇಂದ್ರ ಅವರು ತುಂಬ ಒಳ್ಳೆಯ ಮನುಷ್ಯ. ಆಗಿನ ಕಾಲದಲ್ಲೇ ಅವರು ಮುದುಕರಿಗೆ 100 ರೂಪಾಯಿ ಕೊಡುತ್ತಿದ್ದರು. ಇಲ್ಲಿಯೇ ಅಡುಗೆ ಮಾಡುತ್ತಿದ್ದರು. ಯಾರಾದರೂ ಹೋದರೆ ಇವರಿಗೆಲ್ಲ ಊಟ ಹಾಕಿ ಅಂತ ಹೇಳುತ್ತಿದ್ದರು. ಧರ್ಮೇಂದ್ರ ಅವರು ಶೂಟಿಂಗ್​​ಗೆ ಬಾರದ ದಿನ ನಮಗೆ ಯಾರೂ ಊಟ ಕೊಡುತ್ತಿರಲಿಲ್ಲ. ನಮ್ಮನ್ನು ಓಡಿಸುತ್ತಿದ್ದರು. ಆದರೆ ಧರ್ಮೇಂದ್ರ ಅವರು ಮಾತ್ರ ಯಾರನ್ನೂ ಓಡಿಸಬೇಡಿ ಅಂತ ಹೇಳುತ್ತಿದ್ದರು’ ಎಂದಿದ್ದಾರೆ ಬೆಟ್ಟಯ್ಯ.

‘ಆಗ ಇಲ್ಲಿ ಬರಗಾಲ ಇತ್ತು. ಕೂಲಿ ಕೂಡ ಕಡಿಮೆ ಇತ್ತು. ನಮ್ಮ ಊರಿನ ನೂರಾರು ಜನರಿಗೆ ಕೆಲಸ ಕೊಟ್ಟರು. ನಮ್ಮಲ್ಲಿ ಕೆಲವರು ಆ ಸಿನಿಮಾದಲ್ಲಿ ಪಾತ್ರ ಕೂಡ ಮಾಡಿದ್ದಾರೆ. ಆಗ ನನಗೆ 15 ವರ್ಷ ವಯಸ್ಸು. ಶೂಟಿಂಗ್ ನೋಡಲು ಹೋಗುತ್ತಿದ್ದೆ. ಧರ್ಮೇಂದ್ರ ಅವರು ಕಾರು ನಿಲ್ಲಿಸಿ ಎಲ್ಲರ ಜೊತೆ ಮಾತನಾಡುತ್ತಿದ್ದರು. ಆಗಿನ ಕಾಲದಲ್ಲಿ ನೂರು ರೂಪಾಯಿ ಎಂದರೆ ಬಹಳ ದೊಡ್ಡದು. ಆಗ ಮುದುಕರಿಗೆ ಧರ್ಮೇಂದ್ರ ಅವರು ನೂರು ರೂಪಾಯಿ ಹಂಚುತ್ತಿದ್ದರು. ಬಡವರು ಬಂದಿದ್ದಾರೆ, ಅವರಿಗೆ ಊಟ ಹಾಕಿಸಿ ಅಂತ ಹೇಳುತ್ತಿದ್ದರು’ ಎಂದು ಆ ದಿನಗಳನ್ನು ಬೆಟ್ಟಯ್ಯ ನೆನಪು ಮಾಡಿಕೊಂಡಿದ್ದಾರೆ.

ಹಂಚಿನ ಮನೆ, ಪೆಟ್ಟಿ ಅಂಗಡಿ, ಧರ್ಮೇಂದ್ರ ಅವರನ್ನು ಕಟ್ಟಿಹಾಕಲು ಎರಡು ಕಮಾನು, ಇಡೀ ಊರು ಇತ್ಯಾದಿ ಸೆಟ್ ಹಾಕಿದ್ದರು. ಟಾಂಗಾ ಗಾಡಿ ಓಡಾಡಲು ಸೇತುವೆ ಕಟ್ಟಿದ್ದರು. ಧರ್ಮೇಂದ್ರ ಬಹಳ ಉತ್ತಮ ನಟ. ಆಗಿನ ಕಾಲದಲ್ಲಿ ನಮಗೆ 600 ರೂಪಾಯಿ ಕೂಲಿ ಕೊಡಿಸಿದ್ದರು. ಅವರ ಮಗನ ಸಿನಿಮಾದ ಶೂಟಿಂಗ್ ಕೂಡ ಇಲ್ಲೇ ಆಯಿತು. ಆಗಲೂ ಧರ್ಮೇಂದ್ರ ಅವರು ಬಂದಿದ್ದರು’ ಎಂದು ಬೆಟ್ಟಯ್ಯ ಹೇಳಿದ್ದಾರೆ.

ಇದನ್ನೂ ಓದಿ: Dharmendra Passes Away: ನಟ ಧರ್ಮೇಂದ್ರ ನಿಧನ; ಜನ್ಮದಿನಕ್ಕೂ ಮೊದಲು ಕೊನೆಯುಸಿರು

‘ಧರ್ಮೇಂದ್ರ ಅವರು ನಿಧನರಾಗಿರುವುದು ಅನ್ಯಾಯ. ಆ ಭಗವಂತ ಇಷ್ಟು ಬೇಗ ಒಳ್ಳೆಯ ಮನುಷ್ಯರನ್ನು ಕರೆದುಕೊಳ್ಳಬಾರದಿತ್ತು. ಸಾಕಷ್ಟು ದಾನ ಮಾಡಿದ್ದಾರೆ. ಆ ದಾನವೇ ಅವರನ್ನು ಕಾಪಾಡಲಿಲ್ಲ ಎಂದರೆ ನಾವು ಬೇರೆ ಏನು ಹೇಳಲು ಕೂಡ ಅಸಾಧ್ಯ’ ಎಂದು ಬೆಟ್ಟಯ್ಯ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮುಂಬೈನಲ್ಲಿ ಧರ್ಮೇಂದ್ರ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅನೇಕ ಸೆಲೆಬ್ರಿಟಿಗಳು ಬಂದು ಅಂತಿಮ ನಮನ ಸಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.