
ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಧುರಂಧರ್’ (Dhurandhar) ಚಿತ್ರ ಪಾತ್ರವಾಗಿದೆ. ಈ ಸಿನಿಮಾದಲ್ಲಿ ನಟಿಸಿದ ಎಲ್ಲ ಕಲಾವಿದರೂ ಹೈಲೈಟ್ ಆಗಿದ್ದಾರೆ. ಹೀರೋ ಆಗಿ ರಣವೀರ್ ಸಿಂಗ್ ಅವರು ಮಿಂಚಿದ್ದಾರೆ. ವಿಲನ್ ಪಾತ್ರದಲ್ಲಿ ಅಕ್ಷಯ್ ಖನ್ನಾ (Akshaye Khanna) ಅವರು ಅಭಿನಯಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಆದ ಬಳಿಕ ರಣವೀರ್ ಸಿಂಗ್ಗಿಂತಲೂ ಅಕ್ಷಯ್ ಖನ್ನಾ ಅವರ ಬಗ್ಗೆಯೇ ಪ್ರೇಕ್ಷಕರು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ‘ಧುರಂಧರ್’ ಚಿತ್ರದಿಂದ ಈ ಪರಿ ಯಶಸ್ಸು ಸಿಕ್ಕಿದ್ದಕ್ಕಾಗಿ ಅಕ್ಷಯ್ ಖನ್ನಾ ಅವರು ಸಂಭಾವನೆ (Akshaye Khanna Remuneration) ಹೆಚ್ಚಿಸಿಕೊಂಡಿದ್ದಾರೆ.
ಪೋಷಕ ಪಾತ್ರಗಳ ಮೂಲಕ ಅಕ್ಷಯ್ ಖನ್ನಾ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಿಲನ್ ಪಾತ್ರಗಳನ್ನು ಮಾಡುವ ಮೂಲಕವೂ ಸೈ ಎನಿಸಿಕೊಂಡಿದ್ದಾರೆ. ‘ಧುರಂಧರ್’ ಸಿನಿಮಾದಲ್ಲಿ ಅವರು ರೆಹಮಾನ್ ಡಕಾಯಿತ್ ಎಂಬ ಪಾಕ್ ಗಾಂಗ್ಸ್ಟರ್ ಪಾತ್ರ ಮಾಡಿದ್ದಾರೆ. ಈ ಸಿನಿಮಾಗಾಗಿ ಅವರು ಪಡೆದ ಸಂಭಾವನೆ 2.5 ಕೋಟಿ ರೂಪಾಯಿ ಎನ್ನಲಾಗಿದೆ. ಈಗ ಏಕಾಏಕಿ ಅವರು 20 ಕೋಟಿ ರೂಪಾಯಿ ಹೆಚ್ಚು ಕೇಳಲು ಆರಂಭಿಸಿದ್ದಾರೆ.
ಮೊದಲಿನ ಪ್ಲ್ಯಾನ್ ಪ್ರಕಾರ, ಅಕ್ಷಯ್ ಖನ್ನಾ ಅವರು ‘ದೃಶ್ಯಂ 3’ ಸಿನಿಮಾದಲ್ಲಿ ನಟಿಸಬೇಕಿತ್ತು. ‘ದೃಶ್ಯಂ 2’ ಚಿತ್ರದಲ್ಲಿ ಅವರ ಪಾತ್ರ ಗಮನ ಸೆಳೆದಿತ್ತು. ಹಾಗಾಗಿ 3ನೇ ಪಾರ್ಟ್ನಲ್ಲಿ ಕೂಡ ಅವರು ಮುಂದುವರಿಯುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅವರು ‘ದೃಶ್ಯಂ 3’ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅದಕ್ಕೆ ಕಾರಣ ಆಗಿರುವುದೇ ದುಬಾರಿ ಸಂಭಾವನೆ.
ಅಕ್ಷಯ್ ಖನ್ನಾ ಅವರು ಈಗ ಬರೋಬ್ಬರಿ 21 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ‘ದೃಶ್ಯಂ 3’ ಸಿನಿಮಾದ ನಿರ್ಮಾಪಕರಿಗೆ ಶಾಕ್ ಆಗಿದೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಟ್ಟರೆ ಸಿನಿಮಾದ ಬಜೆಟ್ ದುಬಾರಿ ಆಗುತ್ತದೆ. ಹಾಗಾಗಿ 21 ಕೋಟಿ ರೂಪಾಯಿ ನೀಡಲು ನಿರ್ಮಾಪಕರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಹಾಗಾಗಿ ಅಕ್ಷಯ್ ಖನ್ನಾ ಅವರು ‘ದೃಶ್ಯಂ 3’ ಚಿತ್ರತಂಡದಿಂದ ಹೊರನಡೆದಿದ್ದಾರೆ.
ಇದನ್ನೂ ಓದಿ: ಮಾರ್ಕ್, 45, ಡೆವಿಲ್ ಬಂದರೂ ತಗ್ಗಿಲ್ಲ ‘ಧುರಂಧರ್’ ಹವಾ; 21ನೇ ದಿನವೂ 26 ಕೋಟಿ ರೂ. ಗಳಿಕೆ
ಸಂಭಾವನೆ ವಿಷಯ ಮಾತ್ರವಲ್ಲದೇ ಇನ್ನೂ ಕೆಲವು ವಿಚಾರಗಳಲ್ಲಿ ಅಕ್ಷಯ್ ಖನ್ನಾ ಅವರಿಗೆ ‘ದೃಶ್ಯಂ 3’ ಚಿತ್ರತಂಡದ ಜೊತೆ ಒಮ್ಮತ ಮೂಡಿಲ್ಲ. ಈ ಸಿನಿಮಾದಲ್ಲಿ ತಾವು ವಿಗ್ ಧರಿಸಬೇಕು ಎಂದು ಅಕ್ಷಯ್ ಖನ್ನಾ ಬೇಡಿಕೆ ಇಟ್ಟಿದ್ದಾರಂತೆ. ಆದರೆ ‘ದೃಶ್ಯಂ 2’ ಚಿತ್ರದಲ್ಲಿ ಅವರ ಪಾತ್ರಕ್ಕೆ ವಿಗ್ ಇರಲಿಲ್ಲ. ಈಗ ಇಂಥ ಬದಲಾವಣೆ ಮಾಡಲು ನಿರ್ದೇಶಕರು ಒಪ್ಪಿಲ್ಲ ಎನ್ನಲಾಗಿದೆ. ಈ ಕಾರಣದಿಂದಲೂ ಅಕ್ಷಯ್ ಖನ್ನಾ ‘ದೃಶ್ಯಂ 3’ ಚಿತ್ರತಂಡಕ್ಕೆ ವಿದಾಯ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.