
ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಆದ ‘ಧುರಂಧರ್’ (Dhurandhar) ಚಿತ್ರವು ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂನ ಡಿ-ಕಂಪನಿಯನ್ನು (D-Company) ಕೆರಳಿಸಿದೆ. ರಣವೀರ್ ಸಿಂಗ್ ನಟನೆಯ ಈ ಬ್ಲಾಕ್‌ಬಸ್ಟರ್ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ತನ್ನ ಮುಂಬೈ ನೆಟ್‌ವರ್ಕ್ ಅನ್ನು ಮತ್ತೆ ಸಕ್ರಿಯಗೊಳಿಸಿದ್ದಾನೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿರುವ ‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹೇಬ್’ ಎಂಬ ಪಾತ್ರವೊಂದಿದೆ. ಮರಣ ಶಯ್ಯೆಯಲ್ಲಿರುವಂತೆ ತೋರಿಸಲಾದ ಈ ಪಾತ್ರವು ಭೂಗತ ದೊರೆ ದಾವೂದ್ ಇಬ್ರಾಹಿಂನನ್ನೇ ಹೋಲುತ್ತದೆ. ಮೂಲಗಳ ಪ್ರಕಾರ, ಈ ದೃಶ್ಯಗಳಿಂದ ತೀವ್ರ ಆಕ್ರೋಶಗೊಂಡಿರುವ ಡಿ-ಕಂಪನಿಯು, ದಾವೂದ್ ಇನ್ನೂ ಬದುಕಿದ್ದಾನೆ ಮತ್ತು ಸಕ್ರಿಯನಾಗಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಮುಂಬೈನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದೆ. ಭೂಗತ ಜಗತ್ತಿನಲ್ಲಿ ಮತ್ತು ಸುಲಿಗೆ ದಂಧೆಯಲ್ಲಿ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ದಾವೂದ್ ಗ್ಯಾಂಗ್, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಕೊನೆಯ ಹತಾಶ ಪ್ರಯತ್ನ ಇದು ಎನ್ನಲಾಗಿದೆ.
ಭಾರತದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಲು ದಾವೂದ್ ಸಂಚು ರೂಪಿಸಿದ್ದಾನೆ. ಇದಕ್ಕಾಗಿ ಹೊಸ ಹುಡುಗರನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಛೋಟಾ ಶಕೀಲ್ ಗ್ಯಾಂಗ್‌ಗೆ ವಹಿಸಲಾಗಿತ್ತು. ಹೀಗೆ ಮುಂಬೈನ ರಸ್ತೆಗಳಿಂದ ಆಯ್ಕೆಯಾದ ಯುವಕರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮೂಲಕ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿತ್ತು. ಶೂಟರ್ ಮುನ್ನಾ ಜಿಂಗಾಡಾಗೆ ಈ ಉಗ್ರ ಸಂಚನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ನೀಡಲಾಗಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ.
ಈ ಕಾರ್ಯಾಚರಣೆಗೆ ನೇಮಕಗೊಂಡ ಯುವಕರಿಗೆ ಇದರ ಹಿಂದಿನ ಅಸಲಿ ಕಾರಣವನ್ನೇ ತಿಳಿಸಿರಲಿಲ್ಲ. ಇತ್ತೀಚೆಗೆ ಮುಂಬೈನ ಬಾಂದ್ರಾ ಗರೀಬ್ ನಗರದಲ್ಲಿದ್ದ ಅಕ್ರಮ ಮಸೀದಿಯೊಂದರ ವಿರುದ್ಧ ನಡೆದ ಬುಲ್ಡೋಜರ್ ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು, ಯುವಕರನ್ನು ಧಾರ್ಮಿಕವಾಗಿ ಪ್ರಚೋದಿಸಿ ಈ ಉಗ್ರ ಜಾಲಕ್ಕೆ ಸೆಳೆಯಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ‘ಧುರಂಧರ್’ ಚಿತ್ರದಲ್ಲಿ ದೇಶದ ಭದ್ರತೆಯ ರಹಸ್ಯ ಮಾಹಿತಿ ಸೋರಿಕೆ ಆರೋಪ; ಹೈಕೋರ್ಟ್ ಮಹತ್ವದ ಆದೇಶ
ಪಾಕಿಸ್ತಾನದ ಐಎಸ್ಐ ಮತ್ತು ಮುಂಬೈ ಭೂಗತ ಜಗತ್ತಿನ ನಡುವಿನ ಈ ಅಪಾಯಕಾರಿ ಲಿಂಕ್ ಅನ್ನು ದೆಹಲಿ ಪೊಲೀಸರು ಇತ್ತೀಚೆಗೆ ಭೇದಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ಭಾರತೀಯ ತನಿಖಾ ಸಂಸ್ಥೆಗಳು ದೇಶದ ಮೇಲಿದ್ದ ದೊಡ್ಡ ಗಂಡಾಂತರವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.