ಸೋಶಿಯಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್ (Body Shaming) ಒಂದು ಪಿಡುಗಿನಂತೆ ಆಗಿದೆ. ಅದರಲ್ಲೂ ನಟಿಯರಿಗೆ ಇದರಿಂದ ಹೆಚ್ಚು ಕಿರಿಕಿರಿ ಆಗುತ್ತಿದೆ. ನೆಟ್ಟಿಗರು ಒಂದಿಲ್ಲೊಂದು ಕೆಟ್ಟ ಕಮೆಂಟ್ ಮೂಲಕ ಅಪಹಾಸ್ಯ ಮಾಡುತ್ತಲೇ ಇರುತ್ತಾರೆ. ದಪ್ಪಗಿದ್ದರೆ ಹೀಯಾಳಿಸುತ್ತಾರೆ. ತೆಳ್ಳಗಿದ್ದರೂ ಇಲ್ಲಸಲ್ಲದ ಕಮೆಂಟ್ ಮಾಡಿ ಅವಮಾನಿಸುತ್ತಾರೆ. ಕಪ್ಪಗಿದ್ದರೆ ಒಂದು ರೀತಿ, ಬೆಳ್ಳಗಿದ್ದರೆ ಇನ್ನೊಂದು ರೀತಿ. ಒಟ್ಟಿನಲ್ಲಿ ಬಾಡಿ ಶೇಮಿಂಗ್ ತಪ್ಪಿದ್ದಲ್ಲ. ನಟಿ ದಿಶಾ ಪಟಾನಿ (Disha Patani) ಅವರು ಆಗಾಗ ಇದೇ ವಿಚಾರಕ್ಕೆ ಟಾರ್ಗೆಟ್ ಆಗುತ್ತಾರೆ. ಸಾಮಾನ್ಯವಾಗಿ ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಅವರನ್ನು ಜನರು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಾರೆ. ಈಗ ಅವರು ‘ಏಕ್ ವಿಲನ್ ರಿಟರ್ನ್ಸ್’ (Ek Villain Returns) ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರಿಗೆ ಬಾಡಿ ಶೇಮಿಂಗ್ ಮಾಡಲಾಗಿದೆ.
ಫಿಟ್ನೆಸ್ ಬಗ್ಗೆ ದಿಶಾ ಪಟಾನಿ ಅವರಿಗೆ ಹೆಚ್ಚು ಕಾಳಜಿ. ಹಾಗಾಗಿ ಅವರು ಪ್ರತಿದಿನ ವರ್ಕೌಟ್ ಮಾಡುತ್ತಾರೆ. ದೇಹವನ್ನು ಬಳುಕುವ ಬಳ್ಳಿಯಂತೆ ಇಟ್ಟುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ದಿಶಾ ಪಟಾನಿ ಸಖತ್ ಸ್ಲಿಮ್ ಆಗಿದ್ದಾರೆ. ಅದಕ್ಕೆ ನೆಟ್ಟಿಗರು ಬಾಡಿ ಶೇಮಿಂಗ್ ಮಾಡುತ್ತಿದ್ದಾರೆ. ಅವರ ಅನೇಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವುಗಳಿಗೆ ಜನರು ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ನಮ್ಮ ಬಾಡಿ ಬಗ್ಗೆಯೂ ಕಮೆಂಟ್ ಮಾಡ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು’: ಪ್ರಿಯಾಂಕಾ ಉಪೇಂದ್ರ
ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ದಿಶಾ ಪಟಾನಿ ಅವರು ಯಾವುದೇ ಮಡಿವಂತಿಕೆ ಇಟ್ಟುಕೊಂಡಿಲ್ಲ. ತಮಗೆ ಇಷ್ಟಬಂದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೂ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ‘ಈ ರೀತಿ ಅರೆ ಬೆತ್ತಲೆ ಫೋಟೋ ಹಂಚಿಕೊಳ್ಳೋಕೆ ನಾಚಿಕೆ ಆಗಲ್ವಾ’ ಎಂದು ಕಟುವಾಗಿ ಕಮೆಂಟ್ ಮಾಡಲಾಗಿದೆ. ‘ಅಸ್ಥಿಪಂಜರ ಆಗಿದ್ದಾರೆ..’, ‘ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ರಾಕ್ಷಸಿ..’ ಎಂದೆಲ್ಲ ಜನರು ಜರಿದಿದ್ದಾರೆ.
ಸದ್ಯ ಈ ಯಾವ ಕಮೆಂಟ್ಗಳಿಗೂ ದಿಶಾ ಪಟಾನಿ ಉತ್ತರ ನೀಡುವ ಗೋಜಿಗೆ ಕೈ ಹಾಕಿಲ್ಲ. ಅವರು ‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾದ ಪ್ರಮೋಷನ್ನಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾ ಜುಲೈ 29ರಂದು ಬಿಡುಗಡೆ ಆಗಲಿದೆ.
Published On - 10:50 am, Sun, 10 July 22