ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲಿನ ದಾಳಿಯ ಘಟನೆ ಈಗಲೂ ಬೆಚ್ಚಿ ಬೀಳಿಸುವಂತಿದೆ. ಜನವರಿ 16ರಂದು ಸೈಫ್ ಮನೆಗೆ ಕಳ್ಳರು ನುಗ್ಗಿ ನಟನಿಗೆ ಚಾಕು ಹಾಕಲಾಗಿತ್ತು. ಆ ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ (ಜನವರಿ 22) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ನಡುವೆ ಸೈಫ್ ಅಲಿ ಖಾನ್ ಮತ್ತು ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಚಿತ್ರಗಳಲ್ಲಿ, ವಿರಾಟ್ ಕೊಹ್ಲಿ ಸೈಫ್ ಅಲಿ ಖಾನ್ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಆಸ್ಪತ್ರೆಗೆ ಬಂದಿರುವುದನ್ನು ಕಾಣಬಹುದು. ಬಳಕೆದಾರರು ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ವಿರಾಟ್ ಕೊಹ್ಲಿ ಸೈಫ್ ಅಲಿ ಖಾನ್ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಕುರಿತು ಪೋಸ್ಟ್ ಹಂಚಿಕೊಂಡಡು, “ಸೈಫ್ ಅಲಿ ಖಾನ್ ಅವರನ್ನು ಭೇಟಿ ಮಾಡಲು ವಿರಾಟ್ ಕೊಹ್ಲಿ ಆಸ್ಪತ್ರೆಗೆ ಬಂದಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದೊಂದು ಸುಳ್ಳು ಎಂಬುದು ಕಂಡುಬಂದಿದೆ. ವೈರಲ್ ಕ್ಲೈಮ್ ಅನ್ನು ತನಿಖೆ ಮಾಡಲು ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳ ಮೂಲಕ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಸೈಫ್ ಅಲಿ ಖಾನ್ ವಿರಾಟ್ ಕೊಹ್ಲಿಯನ್ನು ಭೇಟಿಯಾದ ಬಗ್ಗೆ ನಮಗೆ ಯಾವುದೇ ಸುದ್ದಿ ಸಿಕ್ಕಿಲ್ಲ. ಕೊಹ್ಲಿ ಇವರನ್ನು ಭೇಟಿ ಆಗಿದ್ದೇ ಆದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಇದಲ್ಲದೆ, ನಾವು ವಿರಾಟ್ ಕೊಹ್ಲಿ ಅವರ ಇನ್‌ಸ್ಟಾ ಖಾತೆಗೆ ಭೇಟಿ ನೀಡಿದ್ದೇವೆ, ಇಲ್ಲಿಯೂ ನಮಗೆ ಅಂತಹ ಯಾವುದೇ ಮಾಹಿತಿ ಕಂಡುಬಂದಿಲ್ಲ.
Fact Check: ಇದು ನಿಜಕ್ಕೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೈಫ್ ಅಲಿ ಖಾನ್ ಫೋಟೋವೇ?: ನಿಜಾಂಶ ಇಲ್ಲಿದೆ
ವೈರಲ್ ಚಿತ್ರಗಳನ್ನು ಎಚ್ಚರಿಕೆಯಿಂದ ನೋಡಿದ ನಂತರ, ಈ ಚಿತ್ರಗಳಲ್ಲಿ ವಿರಾಟ್ ಕೊಹ್ಲಿ ಅವರ ಕಣ್ಣುಗಳು ವಿರೂಪಗೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರ ನಂತರ ನಾವು AI ಇಮೇಜ್ ಡಿಟೆಕ್ಷನ್ ಟೂಲ್ ಹೈವ್ ಮಾಡರೇಶನ್ ಮೂಲಕ ವೈರಲ್ ಚಿತ್ರಗಳನ್ನು ಪರಿಶೀಲಿಸಿದ್ದೇವೆ. ಹೈವ್ ಮಾಡರೇಶನ್‌ನಲ್ಲಿ ಈ ಚಿತ್ರಗಳ AI ರ ಸಂಭವನೀಯತೆ ಶೇ. 99.7 ರಷ್ಟಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಹೀಗಾಗಿ ವಿರಾಟ್ ಕೊಹ್ಲಿ ಸೈಫ್ ಅಲಿ ಖಾನ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ವೈರಲ್ ಹೇಳಿಕೆಯು ಸುಳ್ಳು ಮತ್ತು ವೈರಲ್ ಫೋಟೋವು AI ರಚಿತವಾಗಿದೆ ಎಂದು ಟಿವಿ9 ಕನ್ನಡ ಖಚಿತವಾಗಿ ಹೇಳುತ್ತದೆ.
ಸೈಫ್ ಅಲಿ ಖಾನ್ ಅವರಿಗೆ ಎರಡು ಮುಖ್ಯವಾದ ಸರ್ಜರಿ ಮಾಡಲಾಗಿದೆ. ಅವರ ಬೆನ್ನಿನಲ್ಲಿ ಇದ್ದ ಚಾಕು ಹೊರಗೆ ತೆಗೆಯಲಾಗಿದೆ. ಕುತ್ತಿಗೆ ಭಾಗದ ಗಾಯಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂಬ ಮಾಹಿತಿ ಕೂಡ ಇದೆ. ಈ ಎಲ್ಲ ಚಿಕಿತ್ಸೆಗಳ ಸಲುವಾಗಿ ಸೈಫ್ ಅಲಿ ಖಾನ್ ಅವರು 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು. ಈಗ ಅವರು ಬಹುತೇಕ ಚೇತರಿಸಿಕೊಂಡಿದ್ದು, ಮನೆಗೆ ಬಂದಿದ್ದಾರೆ.
ಚೂರಿ ಇರಿತದ ವಿವರಗಳನ್ನು ಕೇಳಿದ ಬಳಿಕ ಎಲ್ಲರಿಗೂ ಆತಂಕ ಆಗಿತ್ತು. ಸೈಫ್ ಅಲಿ ಖಾನ್ ಚೇತರಿಸಿಕೊಳ್ಳಲು ಇನ್ನೂ ಎಷ್ಟು ದಿನಗಳು ಬೇಕಾಗಬಹುದೋ ಎಂದು ಅಭಿಮಾನಿಗಳು ಚಿಂತಿಸಿದ್ದರು. ಅಲ್ಲದೇ, ಗಂಭೀರ ಸರ್ಜರಿ ಆಗಿರುವುದರಿಂದ ಅವರು ಮಾನಸಿಕವಾಗಿ ಕುಗ್ಗಿರಬಹುದು ಎಂದು ಕೂಡ ಊಹಿಸಲಾಗಿತ್ತು. ಆದರೆ ಸೈಫ್ ಅಲಿ ಖಾನ್ ಅವರು ನಗುಮುಖದೊಂದಿಗೆ ಆಸ್ಪತ್ರೆಯಿಂದ ಹೊರಗೆ ಬಂದಿರುವುದನ್ನು ಕಂಡು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ