ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅತುಲ್ ಪರ್ಚುರೆ ಅವರು ಇನ್ನಿಲ್ಲ ಎಂಬ ಶಾಕಿಂಗ್ ಸುದ್ದಿ ಕೇಳಿಬಂದಿದೆ. ಅತುಲ್ ಪರ್ಚುರೆ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕೆಲವು ವರ್ಷಗಳಿಂದ ಅವರು ಲಿವರ್ ಕ್ಯಾನ್ಸರ್ಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ತಾಯಿ, ಪತ್ನಿ ಮತ್ತು ಮಗಳನ್ನು ಅತುಲ್ ಅವರು ಅಗಲಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಅತುಲ್ ಅವರು ಖ್ಯಾತಿ ಗಳಿಸಿದ್ದರು. ಅವರ ಜೊತೆ ಕೆಲಸ ಮಾಡಿದ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಅತುಲ್ ಪರ್ಚುರೆ ಅವರು ತಮ್ಮದೇ ಛಾಪು ಮೂಡಿಸಿದ್ದರು. ಅವರ ಪ್ರತಿಭೆಯಿಂದ ಬಾಲಿವುಡ್ ಸಿನಿಮಾಗಳಲ್ಲೂ ಅವಕಾಶ ಪಡೆದರು. ‘ಕಲ್ಯುಗ್’, ‘ಗೋಲ್ಮಾಲ್’, ‘ಪಾರ್ಟ್ನರ್’, ‘ಬಿಲ್ಲು ಬಾರ್ಬರ್’, ‘ಆಲ್ ದಿ ಬೆಸ್ಟ್’, ‘ಆವಾರಪನ್’, ‘ಬುಡ್ಡ ಹೋಗ ತೇರಾ ಬಾಪ್’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಅತುಲ್ ಪರ್ಚುರೆ ಅವರು ಅಭಿನಯಿಸಿದ್ದರು.
ಲಿವರ್ ಕ್ಯಾನ್ಸರ್ ಇರುವುದು ಗೊತ್ತಾಗ ಬಳಿಕ ಅತುಲ್ ಪರ್ಚುರೆ ಅವರ ವೃತ್ತಿಬದುಕಿಗೆ ಅಲ್ಪವಿರಾಮ ಬಿದ್ದಿತ್ತು. ಆದರೆ ಚಿಕಿತ್ಸೆ ಪಡೆದು ಅವರು ಮತ್ತೆ ನಟನೆಯಲ್ಲಿ ತೊಡಗಿಕೊಂಡಿದ್ದರು. ಸಿನಿಮಾಗಳ ಜೊತೆ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಅವರು ಹೆಸರು ಮಾಡಿದ್ದರು. ಶಾರುಖ್ ಖಾನ್, ಅಜಯ್ ದೇವಗನ್ ಮುಂತಾದ ಹಿಂದಿ ಚಿತ್ರರಂಗ ಸ್ಟಾರ್ ಕಲಾವಿದರ ಜೊತೆ ಅಭಿನಯಿಸಿ ಅತುಲ್ ಅವರು ಸೈ ಎನಿಸಿಕೊಂಡಿದ್ದರು.
ಇದನ್ನೂ ಓದಿ: ಪ್ರತಿ ವರ್ಷ ಮಕ್ಕಳ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಕಿದ್ವಾಯಿ ಆಸ್ಪತ್ರೆಯಿಂದ ಆತಂಕಕಾರಿ ವರದಿ..!
ಕಪಿಲ್ ಶರ್ಮಾ ನಡೆಸಿಕೊಟ್ಟ ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ಕಾರ್ಯಕ್ರಮದಲ್ಲಿ ಹಲವು ಪಾತ್ರಗಳನ್ನು ಮಾಡುವ ಮೂಲಕ ಅತುಲ್ ಪರ್ಚುರೆ ಅವರು ಅಭಿಮಾನಿಗಳನ್ನು ರಂಜಿಸಿದ್ದರು. ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದರಿಂದ ಅವರ ವೃತ್ತಿ ಜೀವನಕ್ಕೆ ಪೆಟ್ಟು ಬಿದ್ದಿತ್ತು. ಆರಂಭದಲ್ಲಿ ಅವರಿಗೆ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಿದ್ದಾಗ ವೈದ್ಯರಿಂದ ಎಡವಟ್ಟು ಆಗಿತ್ತು. ಇರುವ ಸಮಸ್ಯೆ ಇನ್ನಷ್ಟು ಜಾಸ್ತಿ ಆಗಿತ್ತು. ವೈದ್ಯರನ್ನು ಬದಲಿಸಿದ ಬಳಿಕ ಅವರು ಕೊಂಚ ಚೇತರಿಸಿಕೊಂಡಿದ್ದರು. ಆದರೆ ಈಗ ಅವರು ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ಚಿತ್ರರಂಗದ ಹಲವರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.