
ಬಾಲಿವುಡ್ನ (Bollywood) ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ನಟಿಸಿರುವ ಭಾರತೀಯ ಸೈನ್ಯದ ಕುರಿತಾದ ಸಿನಿಮಾ ‘120 ಬಹದ್ಧೂರ್’ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರು ಸಹ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮರ್ಶಕರು ಸಹ ಒಳ್ಳೆಯ ವಿಮರ್ಶೆಗಳನ್ನು ನೀಡಿದ್ದಾರೆ. ಇದೀಗ ಈ ಸಿನಿಮಾಕ್ಕೆ ದೆಹಲಿ ಸರ್ಕಾರವು ತೆರಿಗೆ ವಿನಾಯಿತಿಯನ್ನು ನೀಡಿದೆ. ಆ ಮೂಲಕ ‘120 ಬಹದ್ಧೂರ್’ ಸಿನಿಮಾಕ್ಕೆ ಬೆಂಬಲ ನೀಡಿದೆ.
‘120 ಬಹದ್ಧೂರ್’ ಸಿನಿಮಾ 1962ರ ಭಾರತ-ಚೀನಾ ಯುದ್ಧದ ಕತೆಯನ್ನು ಒಳಗೊಂಡಿದೆ. ಕೇವಲ 120 ಮಂದಿ ಸೈನಿಕರು (ಯಾದವ ಸಮುದಾಯದವರು) 3000 ಚೀನಾ ಸೈನಿಕರನ್ನು ದಿಟ್ಟತನದಿಂದ ಎದುರಿಸಿದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಫರ್ಹಾನ್ ಅಖ್ತರ್ ರೆಜಿಮೆಂಟ್ನ ಮುಖ್ಯಸ್ಥ ಮೇಜರ್ ಶೈತಾನ್ ಸಿಂಗ್ ಭಾಟಿ ಪಾತ್ರದಲ್ಲಿ ನಟಿಸಿದ್ದಾರೆ. 120 ಮಂದಿ ಅಹಿರ್ (ಯಾದವ) ಸಮುದಾಯದ ಸೈನಿಕರನ್ನು ಮುನ್ನಡೆಸುವ ಮೇಜರ್ ಪಾತ್ರವದು.
‘120 ಬಹದ್ಧೂರ್’ ರಾಷ್ಟ್ರಪ್ರೇಮ ಉಕ್ಕಿಸುವ, ದೇಶ ಸೇವೆಗೆ ಸ್ಪೂರ್ತಿ ತುಂಬುವ, ಸೈನಿಕರ ತ್ಯಾಗ, ಬಲಿದಾನವನ್ನು ಗೌರವಿಸುವ, ನೆನಪಿಸುವ, ಭಾರತೀಯ ಸೇನೆಯ ಧೈರ್ಯ, ಸಾಹಸವನ್ನು ಪ್ರಚಾರ ಪಡಿಸುವ ಸಿನಿಮಾ ಆಗಿರುವ ಕಾರಣ, ಹೆಚ್ಚಿನ ಜನ ಸಿನಿಮಾ ನೋಡಲೆಂದು ಈ ಸಿನಿಮಾಕ್ಕೆ ದೆಹಲಿ ಸರ್ಕಾರವು ತೆರಿಗೆ ವಿನಾಯಿತಿ ನೀಡಿದೆ. ಫರ್ಹಾನ್ ಅಖ್ತರ್ ಈ ಸಿನಿಮಾನಲ್ಲಿ ನಟಿಸಿರುವ ಜೊತೆಗೆ ಸಹ ನಿರ್ಮಾಣವನ್ನೂ ಸಹ ಮಾಡಿದ್ದಾರೆ. ನಿರ್ದೇಶನ ಮಾಡಿರುವುದು ರಜನೀಶ್ ಘೈ.
ಇದನ್ನೂ ಓದಿ:51ನೇ ವಯಸ್ಸಿಗೆ ಮೂರನೇ ಬಾರಿ ತಂದೆ ಆಗುತ್ತಿದ್ದಾರೆ ಫರ್ಹಾನ್ ಅಖ್ತರ್?
ಫರ್ಹಾನ್ ಅಖ್ತರ್ ಈ ಹಿಂದೆಯೂ ಸಹ ಇಂಥಹಾ ದೇಶಪ್ರೇಮ ಆಧರಿಸಿದ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶನವನ್ನೂ ಮಾಡಿದ್ದಾರೆ. ಹೃತಿಕ್ ರೋಷನ್ ನಟನೆಯ ಬಹಳ ಜನಪ್ರಿಯ ಭಾರತೀಯ ಸೈನ್ಯ ಆಧರಿಸಿದ ಸಿನಿಮಾ ಆಗಿರುವ ‘ಲಕ್ಷ್ಯ’ ಅನ್ನು ಫರ್ಹಾನ್ ಅಖ್ತರ್ ನಿರ್ದೇಶನ ಮಾಡಿದ್ದರು. ಬಯೋಪಿಕ್ಗಳಲ್ಲಿಯೇ ಅದ್ಭುತ ಬಯೋಪಿಕ್ ಆಗಿರುವ, ದೇಶಪ್ರೇಮ ಸೂಸುವ ಸಿನಿಮಾ ‘ಭಾಗ್ ಮಿಲ್ಕಾ ಭಾಗ್’ನಲ್ಲಿಯೂ ಫರ್ಹಾನ್ ಅಖ್ತರ್ ಅದ್ಭುತವಾಗಿ ನಟಿಸಿದ್ದರು. ಈ ಸಿನಿಮಾ ಮಿಲ್ಕಾ ಸಿಂಗ್ ಕತೆಯ ಜೊತೆಗೆ ಭಾರತ-ಪಾಕಿಸ್ತಾನದ ವಿಭಜನೆಯ ಕತೆಯನ್ನೂ ಒಳಗೊಂಡಿದೆ. ‘ತೂಫಾನ್’ ಅಂಥಹಾ ಸ್ಪೂರ್ತಿ ತುಂವು ಸಿನಿಮಾನಲ್ಲಿಯೂ ಫರ್ಹಾನ್ ಅಖ್ತರ್ ನಟಿಸಿದ್ದಾರೆ. ಫರ್ಹಾನ್ ಅಖ್ತರ್ ಅವರ ‘ರಾಕ್ ಆನ್’, ‘ಜಿಂದಗಿ ನಾ ಮಿಲೇಗಿ ದುಬಾರ’ ಸಿನಿಮಾಗಳು ಭಾರಿ ಯಶಸ್ಸು ಗಳಿಸಿದ್ದು, ಕಲ್ಟ್ ಸಿನಿಮಾಗಳಾಗಿ ಹೆಸರು ಮಾಡಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Fri, 28 November 25