ಬಾಲಿವುಡ್ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಚಿತ್ರದಲ್ಲಿ ತೋರಿಸಲಾದ ವಿಷಯಗಳ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರಂತೂ ‘ದಿ ಕಾಶ್ಮಿರ್ ಫೈಲ್ಸ್’ ಸಿನಿಮಾ ನೋಡಿದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Director Vivek Agnihotri) ಅವರನ್ನು ಪರಿಪರಿಯಾಗಿ ಹೊಗಳುತ್ತಿದ್ದಾರೆ. ಅಕ್ಷಯ್ ಕುಮಾರ್, ಕಂಗನಾ ರಣಾವತ್, ರಾಮ್ ಗೋಪಾಲ್ ವರ್ಮಾ, ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಮುಂತಾದವರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜನಸಾಮಾನ್ಯರು ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಸಿನಿಮಾದ ಬಗ್ಗೆ ತಮಗೆ ಇರುವ ಅಭಿಮಾನವನ್ನು ಹಲವು ಬಗೆಯಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಪ್ರೇಕ್ಷಕರ ಭಾವನೆಯ ಮೇಲೆ ಈ ಸಿನಿಮಾ ಪ್ರಭಾವ ಬೀರಿದೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ. ಅದಕ್ಕೆ ಲೇಟೆಸ್ಟ್ ಸಾಕ್ಷಿ ಎಂದರೆ ಮಹಿಳೆಯೊಬ್ಬರು ತಮ್ಮ ರಕ್ತದಿಂದ ಈ ಸಿನಿಮಾ ಪೋಸ್ಟರ್ (The Kashmir Files Poster) ರಚಿಸಿರುವುದು! ಸದ್ಯ ಈ ಫೋಟೋಗಳು ವೈರಲ್ ಆಗುತ್ತಿವೆ.
ಈ ರೀತಿ ಪೋಸ್ಟರ್ ರಚಿಸಿದ ಮಹಿಳೆ ಹೆಸರು ಮಂಜೂ ಸೋನಿ. ತಮ್ಮ ದೇಹದಿಂದ 10 ಎಂಎಲ್ ರಕ್ತವನ್ನು ತೆಗೆದುಕೊಂಡು ಅವರು ಈ ಕೆಲಸ ಮಾಡಿದ್ದಾರೆ. ಆ ಕುರಿತು ಪತ್ರಿಕೆಗಳಲ್ಲಿ ಸುದ್ದಿ ಕೂಡ ಪ್ರಕಟ ಆಗಿದೆ. ಫೋಟೋಗಳು ವೈರಲ್ ಆದ ಬಳಿಕ ಅದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಕಣ್ಣಿಗೂ ಬಿದ್ದಿದೆ. ಮೊದಲಿಗೆ ಈ ಪರಿ ಪ್ರೀತಿ ಕಂಡು ಅವರು ಹೊಗಳಿದ್ದಾರೆ. ‘ಓಹ್ ಮೈ ಗಾಡ್.. ಇದನ್ನು ನಂಬಲು ಸಾಧ್ಯವಿಲ್ಲ. ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಮಂಜೂ ಅವರಿಗೆ ನಾನು ಹೇಗೆ ಧನ್ಯವಾದ ತಿಳಿಸಬೇಕು ಅಂತ ಗೊತ್ತಿಲ್ಲ. ಅವರಿಗೆ ನನ್ನ ಶತ ಶತ ಪ್ರಣಾಮಗಳು, ಕೃತಜ್ಞತೆಗಳು. ಅವರ ಪರಿಚಯ ನಿಮಗೆ ಯಾರಿಗಾದರೂ ಇದ್ದರೆ ನನಗೆ ಅವರ ನಂಬರ್ ಮೆಸೇಜ್ ಮಾಡಿ’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
OMG. Unbelievable. I don’t know what to say… how to thank Manju Soni ji. @manjusoni Shat shat pranam. Gratitude.
If anyone knows her, pl share her contacts with me in DM. #RightToJustice pic.twitter.com/1jxsLDhCXq
— Vivek Ranjan Agnihotri (@vivekagnihotri) March 24, 2022
ಮಹಿಳೆ ಮಾಡಿರುವುದು ಸರಿಯಲ್ಲ ಎಂದು ನಂತರ ವಿವೇಕ್ ಅಗ್ನಿಹೋತ್ರಿ ಅವರಿಗೆ ಅನಿಸಿದೆ. ಆ ಕುರಿತಾಗಿಯೂ ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ‘ನಿಮ್ಮ ಭಾವನೆಗಳನ್ನು ನಾನು ಮೆಚ್ಚುತ್ತೇನೆ. ಆದರೂ ಕೂಡ ಈ ರೀತಿಯ ಯಾವುದನ್ನೂ ಪ್ರಯತ್ನಿಸಬೇಡಿ ಎಂದು ಗಂಭೀರವಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದು ಒಳ್ಳೆಯದು ಅಲ್ಲವೇ ಅಲ್ಲ. ಮನೆಯಲ್ಲಿ ಇಂಥದ್ದನೆಲ್ಲ ಮಾಡಲೇಬೇಡಿ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪುನೀತ್ ಇಸ್ಸಾರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹಲವು ಶಾಸಕರು ಮತ್ತು ಸಚಿವರು ಸಿನಿಮಾ ನೋಡಿದ ಬಳಿಕ ಚಿತ್ರಕ್ಕೆ ಪ್ರಚಾರ ಸಿಕ್ಕಿತು.
Though I appreciate feelings but I very seriously request people not to try anything like this. This is not good at all. https://t.co/nCt3aFAqio
— Vivek Ranjan Agnihotri (@vivekagnihotri) March 24, 2022
ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಕಮಾಲ್ ಮಾಡಿದೆ. ಸ್ಟಾರ್ ನಟರ ಕಮರ್ಷಿಯಲ್ ಸಿನಿಮಾಗಳನ್ನೂ ಹಿಂದಿಕ್ಕೆ ಅತ್ಯುತ್ತಮ ಕಲೆಕ್ಷನ್ ಮಾಡಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಎರಡು ವಾರಕ್ಕೆ ಬರೋಬ್ಬರಿ 207 ಕೋಟಿ ರೂಪಾಯಿ ಗಳಿಸಿದೆ. ವಿದೇಶಿ ಗಳಿಕೆಯನ್ನೂ ಸೇರಿಸಿದರೆ ಈ ಮೊತ್ತ ಇನ್ನಷ್ಟು ಹೆಚ್ಚುತ್ತದೆ. ರಿಲೀಸ್ ಆಗಿ ಎರಡು ವಾರ ಕಳೆದ ಬಳಿಕವೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
‘ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹೇಟ್ ಮಾಡ್ತೀನಿ’: ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ ಆರ್ಜಿವಿ