ಹಿರಿಯ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ; ಕಂಬನಿ ಮಿಡಿದ ಚಿತ್ರರಂಗ

|

Updated on: Dec 23, 2024 | 8:44 PM

ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ನಿಧನರಾಗಿದ್ದಾರೆ. ಬಾಲಿವುಡ್​ನಲ್ಲಿ ಗಮನಾರ್ಹ ಸಿನಿಮಾಗಳನ್ನು ನಿರ್ದೇಶಿಸಿದ ಅವರು ಅನಾರೋಗ್ಯದಿಂದ ಕೊನೆಯುಸಿರು ಎಳೆದಿದ್ದಾರೆ. ಇಂದು (ಡಿಸೆಂಬರ್ 23) ಶ್ಯಾಮ್ ಬೆನಗಲ್ ಇಹಲೋಕ ತ್ಯಜಿಸಿದ ಸುದ್ದಿಯನ್ನು ಕುಟುಂಬದವರು ಖಚಿತಪಡಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಹಿರಿಯ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ; ಕಂಬನಿ ಮಿಡಿದ ಚಿತ್ರರಂಗ
Shyam Benegal
Follow us on

ಸದಭಿರುಚಿಯ ಸಿನಿಮಾಗಳನ್ನು ನೀಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಇಂದು (ಡಿ.23) ನಿಧನರಾಗಿದ್ದಾರೆ. ಸಂಜೆ 6.30ರ ಸುಮಾರಿಗೆ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು ಎಂದು ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 90 ವರ್ಷ ವಯಸ್ಸಾಗಿದ್ದ ಶ್ಯಾಮ್ ಬೆನಗಲ್ ಅವರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ನಿಧನಕ್ಕೆ ಭಾರತೀಯ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ.

ಅನಂತ್ ನಾಗ್ ನಟನೆಯ ‘ಅಂಕುರ್​’, ಗಿರೀಶ್ ಕಾರ್ನಾಡ್ ಅಭಿನಯದ ‘ನಿಶಾಂತ್’, ಸ್ಮಿತಾ ಪಾಟೀಲ್ ನಟನೆಯ ‘ಮಂಥನ್’, ‘ಭೂಮಿಕಾ’ ಸೇರಿದಂತೆ ಹಲವು ಸಿನಿಮಾಗಳನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದರು. ಪ್ಯಾರಲಲ್ ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಹಿಂದಿಯಲ್ಲಿ ಅನಂತ್ ನಾಗ್, ಅಮೋಲ್ ಪಾಲೇಕರ್​, ಅಮರೀಶ್​ ಪುರಿ, ಗಿರೀಶ್ ಕಾರ್ನಾಡ್ ಅವರಂತಹ ಪ್ರತಿಭಾವಂತ ನಟರ ಜೊತೆ ಅವರು ಹಲವು ಸಿನಿಮಾಗಳನ್ನು ಮಾಡಿದ್ದರು.

18 ಬಾರಿ ಶ್ಯಾಮ್​ ಬೆನಗಲ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ’ ನೀಡಿ ಅವರಿಗೆ ಗೌರವಿಸಲಾಗಿತ್ತು. ಫಿಲ್ಮ್ ಫೇರ್​, ನಂದಿ ಅವಾರ್ಡ್​ ಮುಂತಾದ ಗೌರವಗಳು ಕೂಡ ಅವರಿಗೆ ಸಿಕ್ಕಿದ್ದವು. ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿಗಳು ಸಹ ಶ್ಯಾಮ್ ಬೆನಗಲ್ ಅವರ ಮುಡಿಗೇರಿದ್ದವು. ಅವರ ನಿಧನದ ಸುದ್ದಿಯನ್ನು ಪುತ್ರಿ ಪಿಯಾ ಬೆನಗಲ್ ಖಚಿತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ‘ಎಸ್​ಎಂ ಕೃಷ್ಣ ಅವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು’: ಯಶ್

ರಿಯಲಿಸ್ಟಿಕ್ ಸಿನಿಮಾಗಳ ಮೂಲಕ ಶ್ಯಾಮ್ ಬೆಗನಲ್ ಅವರು ಹೆಸರುವಾಸಿ ಆಗಿದ್ದರು. ಡಿಸೆಂಬರ್​ 14ರಂದು ಸ್ನೇಹಿತರು ಮತ್ತು ಕುಟುಂಬದವರ ಜೊತೆ ಅವರು 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ನಸೀರುದ್ದೀನ್ ಶಾ, ಕುಲಭೂಷಣ್ ಕರಬಂಧ, ಶಬ್ನಾ ಆಜ್ಮಿ, ದಿವ್ಯಾ ದತ್ತ, ಅತುಲ್ ತಿವಾರಿ, ಕುನಾಲ್ ಕಪೂರ್​ ಮುಂತಾದವರು ಆ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಈಗ ಶ್ಯಾಮ್ ಬೆನಗಲ್ ನಿಧನದ ಸುದ್ದಿ ತಿಳಿದು ಎಲ್ಲರಿಗೂ ನೋವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.