ಗುಲ್ಜಾರ್ ಸಾಬ್​ಗೆ ಜ್ಞಾನಪೀಠ: ಅವರ ಕೆಲವು ಅತ್ಯುತ್ತಮ ಹಾಡುಗಳು ಇಲ್ಲಿವೆ

|

Updated on: Feb 17, 2024 | 8:56 PM

Gulzar: ಬಾಲಿವುಡ್​ನ ಜನಪ್ರಿಯ ಗೀತ ಸಾಹಿತಿ ಗುಲ್ಜಾರ್ ಅವರು ಉರ್ದು ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. ಹಿಂದಿ ಸಿನಿಮಾಗಳಿಗಾಗಿ ಸಾವಿರಾರು ಹಾಡುಗಳನ್ನು ಗುಲ್ಜಾರ್ ಬರೆದಿದ್ದು ಇಲ್ಲಿವೆ ಅವರ ರಚನೆಯ ಕೆಲವು ಅತ್ಯುತ್ತಮ ಹಾಡುಗಳು.

ಗುಲ್ಜಾರ್ ಸಾಬ್​ಗೆ ಜ್ಞಾನಪೀಠ: ಅವರ ಕೆಲವು ಅತ್ಯುತ್ತಮ ಹಾಡುಗಳು ಇಲ್ಲಿವೆ
Follow us on

ಖ್ಯಾತ ಉರ್ದು ಸಾಹಿತಿ, ಹಿಂದಿ ಚಿತ್ರ ಸಾಹಿತಿ ಗುಲ್ಜಾರ್ (Gulzar) ಸಾಬ್​ಗೆ ಕೇಂದ್ರ ಸರ್ಕಾರ ಜ್ಞಾನಪೀಠ ಪ್ರಶಸ್ತಿ ಘೋಷಣೆ ಮಾಡಿದೆ. ಗುಲ್ಜಾರ್ ಅವರು ಕಳೆದ 60 ವರ್ಷದಿಂದಲೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ನೂರಾರು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಸಾವಿರಾರು ಅತ್ಯುತ್ತಮ ಹಾಡುಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗ ಬೆಳೆದ ಬಗೆಯನ್ನು ಹತ್ತಿರದಿಂದ ನೋಡಿದ ಜೊತೆಗೆ ಅದರೊಟ್ಟಿಗೆ ಬೆಳೆಯುತ್ತಲೇ ಬಂದಿರುವ ಗುಲ್ಜಾರ್ ಅವರಿಗೆ ಜ್ಞಾನಪೀಠದಂಥಹಾ ಮಹತ್ತರ ಪ್ರಶಸ್ತಿ ಸಂದಿರುವುದನ್ನು ಬಾಲಿವುಡ್ ಸಂಭ್ರಮಿಸಿದೆ. ಬಾಲಿವುಡ್​ಗಿಂತಲೂ ಹೆಚ್ಚಿಗೆ ಹಿಂದಿ ಸಿನಿಮಾ ಹಾಡಿನ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಗುಲ್ಜಾರ್ ಅವರ 60 ವರ್ಷದ ಚಿತ್ರಸಾಹಿತ್ಯ ಕೃಷಿಯಲ್ಲಿ ಕೆಲವು ಹಾಡುಗಳನ್ನು ಎತ್ತಿ ಇವು ‘ಅತ್ಯುತ್ತಮ’ ಎಂದು ಹೇಳುವುದು ಬಹಳ ಕಷ್ಟ. ಆದರೂ ಪ್ರಯತ್ನ ಇಲ್ಲಿದೆ…

ಮೊರಾ ಗೋರಾ ರಂಗ್ ಲಾಯಿ ಹೈ

ಗುಲ್ಜಾರ್ ಅವರ ಮೊದಲ ಹಿಟ್ ಹಾಡು ‘ಮೋರಾ ಗೋರಾ ರಂಗ್ ಲಾಯಿ ಹೈ’. 1963ರಲ್ಲಿ ಬಿಡುಗಡೆ ಆದ ‘ಬಂದಿನಿ’ ಸಿನಿಮಾದ್ದು ಹಾಡನ್ನು ಲತಾ ಮಂಗೇಶ್ಕರ್ ಹಾಡಿದ್ದರು. ಈ ಹಾಡು ದೊಡ್ಡ ಹಿಟ್ ಆಗಿತ್ತು. ಎವರ್​ಗ್ರೀನ್ ಹಾಡುಗಳಲ್ಲಿ ಈ ಹಾಡು ಸಹ ಒಂದಾಗಿದೆ.

ತುಝಸೆ ನಾರಾಜ್ ನಹಿ ಜಿಂದಗಿ

‘ತುಝಸೆ ನಾರಾಜ್ ನಹಿ ಜಿಂದಗಿ ಹೇರಾನ್ ಹೂ ಮೇ’ ಹಾಡು 1983 ರಲ್ಲಿ ಬಿಡುಗಡೆ ಆಗಿದ್ದ ‘ಮಾಸೂಮ್’ ಸಿನಿಮಾದ್ದು. ನಾಸಿರುದ್ಧೀನ್ ಶಾ ನಟಿಸಿದ್ದ ಈ ಸಿನಿಮಾಕ್ಕೆ ಚಿತ್ರಕತೆಯನ್ನು ಸಹ ಗುಲ್ಜಾರ್ ಅವರೇ ಬರೆದಿದ್ದರು. ಸಿನಿಮಾದ ಈ ಹಾಡಂತೂ ಅತ್ಯದ್ಭುತ.

ಆನಂದ್ ಸಿನಿಮಾದ ಆ ಮೂರು ಹಾಡು

‘ಆನಂದ್’ ಸಿನಿಮಾ ಹಿಂದಿ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ. ಅಮಿತಾಬ್ ಬಚ್ಚನ್, ರಾಜೇಶ್ ಖನ್ನ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಬಾಲಿವುಡ್​ನ ಟಾಪ್ ಸಿನಿಮಾಗಳ ಪಟ್ಟಿಯಲ್ಲಿ ಬರುತ್ತಿದೆ. ಈ ಸಿನಿಮಾದ ಆರು ಹಾಡುಗಳಲ್ಲಿ ಮೂರು ಹಾಡುಗಳನ್ನು ಗುಲ್ಜಾರ್ ಬರೆದಿದ್ದರು. ಸಾವಿನ ಬಗ್ಗೆ ಬರೆದಿದ್ದ ಹಾಡಂತೂ ಅತ್ಯುತ್ತಮ.

ತೆರೆ ಬಿನಾ ಜಿಂದಗಿ ಸೆ ಕೋಯಿ

1975 ರಲ್ಲಿ ಬಿಡುಗಡೆ ಆಗಿದ್ದ ‘ಆಂಧಿ’ ಸಿನಿಮಾದ ‘ತೆರೆ ಬಿನಾ ಜಿಂದಗಿ ಸೆ ಕೋಯಿ ಶಿಕವಾ ತೊ ನಹಿ’ ಹಾಡು ಈಗಲೂ ಹಲವರ ಫೇವರೇಟ್. ಜೀವನದ ಬಗ್ಗೆ ಗುಲ್ಜಾರ್ ಅವರಷ್ಟು ಅದ್ಭುತವಾಗಿ ಇನ್ಯಾರೂ ಹಾಡು ಬರೆಯಲಾರರು.

ಓಹ್ ಮಾಂಜಿ ರೇ

1975ರಲ್ಲಿ ಬಿಡುಗಡೆ ಆಗಿದ್ದ ಕೂಬಸೂರತ್ ಸಿನಿಮಾದ ‘ಓ ಮಾಂಜಿ ರೇ’ ಹಾಡು ಸಹ ಗುಲ್ಜಾರ್​ ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಆ ಕಾಲಕ್ಕೆ ಈ ಹಾಡು ಬಹು ದೊಡ್ಡ ಹಿಟ್ ಆಗಿತ್ತು. ಗುಲ್ಜಾರ್​ರ ಅತ್ಯುತ್ತಮ ಹಾಡುಗಳಲ್ಲಿ ಇದು ಒಂದು.

ಮೇರೆ ಕುಚ್ ಸಾಮಾನ್

ಗುಲ್ಜಾರ್ ಅವರೇ ನಿರ್ದೇಶನ ಮಾಡಿದ್ದ ‘ಇಜ್ಜತ್’ ಸಿನಿಮಾ ದೊಡ್ಡ ಹಿಟ್ ಆಗಲಿಲ್ಲವಾದರೂ ವಿಮರ್ಶಕರ ಮೆಚ್ಚುಗೆ ಗಳಿಸಿ, ಪ್ರಶಸ್ತಿಗಳಿಗೆ ಭಾಜನವಾಯ್ತು. ಈ ಸಿನಿಮಾದ ‘ಮೇರಾ ಕುಚ್ ಸಾಮಾನ್ ತೇರಾ ಪಾಸ್ ಪಡಾಹೆ’ ಹಾಡು ಭಾರಿ ಜನಪ್ರಿಯವಾಯ್ತು.

ದಿಲ್ ಸೇ ಸಿನಿಮಾದ ಹಾಡುಗಳು

ಮಣಿರತ್ನಂ ನಿರ್ದೇಶಿಸಿ ಶಾರುಖ್ ಖಾನ್ ನಟಿಸಿರುವ ‘ದಿಲ್ ಸೇ’ ಸಿನಿಮಾ ಯಾರಿಗೆ ಗೊತ್ತಿಲ್ಲ. ಈ ಸಿನಿಮಾಕ್ಕಾಗಿ ಗುಲ್ಜಾರ್ ಬರೆದಿರುವ ಹಾಡುಗಳು ಎಂದಿಗೂ ಮರೆಯಲಾಗದವು. ಈ ಸಿನಿಮಾತ ‘ಸತರಂಗಿ ರೇ’ ಹಾಡನ್ನು ಗಮನಿಸಿದರೆ ಪ್ರೀತಿಯ ಹಲವು ಭಾವಗಳ ಬಗ್ಗೆ ಅದ್ಭುತವಾಗಿ ಗುಲ್ಜಾರ್ ಬರೆದಿದ್ದಾರೆ. ಸಿನಿಮಾದ ಎಲ್ಲ ಹಾಡುಗಳನ್ನು ಬರೆದಿರುವುದು ಗುಲ್ಜಾರ್ ಅವರೇ.

ದಿಲ್ ತೊ ಬಚ್ಚಾ ಹೇ ಜೀ

2010ರಲ್ಲಿ ಬಿಡುಗಡೆ ಆದ ‘ಇಷ್ಕಿಯಾ’ ಸಿನಿಮಾದ ‘ದಿಲ್ ತೊ ಬಚ್ಚಾ ಹೇ ಜೀ’ ದಶಕದ ಹಾಡಾಗಿತ್ತು. ವಯೋವೃದ್ಧನೊಬ್ಬನ ಪ್ರೇಮವನ್ನು ಪದಗಳಲ್ಲಿ ಅದ್ಭುತವಾಗಿ ಹಿಡಿದಿಟ್ಟಿದ್ದರು ಗುಲ್ಜಾರ್. ಅಷ್ಟೇ ಚೆನ್ನಾಗಿ ಹಾಡನ್ನು ಚಿತ್ರೀಕರಿಸಲಾಗಿದೆ ಸಹ.

ಬೀಡಿ ಜಲೈಲೆ

ಷೇಕ್ಸ್​ಪಿಯರ್​ನ ಕಾದಂಬರಿ ಆಧರಿಸಿ ನಿರ್ಮಾಣ ಮಾಡಲಾದ ‘ಓಂಕಾರ’ ಸಿನಿಮಾದ ಎಲ್ಲ ಹಾಡುಗಳನ್ನು ಗುಲ್ಜಾರ್ ಅವರೇ ಬರೆದಿದ್ದಾರೆ. ಆ ಸಿನಿಮಾದಲ್ಲಿ ಎಲ್ಲ ರೀತಿಯ ಹಾಡುಗಳು ಇದ್ದವು ಎಲ್ಲವೂ ಸೂಪರ್ ಹಿಟ್. ‘ಬೀಡಿ ಜಲೈಲೆ’ ಎಂಬ ಐಟಂ ಹಾಡಿತ್ತು, ಆ ಹಾಡಿಗೂ ಸಾಹಿತ್ಯದ ಟಚ್ ಕೊಟ್ಟಿದ್ದರು ಗುಲ್ಜಾರ್.

ಸ್ಲಂ ಡಾಗ್ ಮಿಲೆನಿಯರ್

ಹಾಲಿವುಡ್ ಸಿನಿಮಾ ‘ಸ್ಲಂ ಡಾಗ್ ಮಿಲೆನಿಯರ್’ ನ ‘ಜಯ ಹೋ’ ಹಾಡನ್ನು ಬರೆದಿದ್ದು ಗುಲ್ಜಾರ್. ಆಸ್ಕರ್ ಗೆದ್ದ ‘ಸ್ಲಂ ಡಾಗ್ ಮಿಲೆನಿಯರ್’ ಸಿನಿಮಾಕ್ಕೆ ‘ಜೈ ಹೋ’ ಹಾಡು ವಿಶೇಷ ಕಸುವು ತುಂಬಿತ್ತು. ಈ ಹಾಡಿಗಾಗಿ ಗುಲ್ಜಾರ್ ಅವರಿಗೆ ಆಸ್ಕರ್ ನೀಡಲಾಯ್ತು. ಗ್ರಾಮಿ ಪ್ರಶಸ್ತಿಯೂ ಸಹ ಲಭಿಸಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ