ಅಕ್ಷರಕ್ಕೆ ಭಾವನೆ ತುಂಬಿದ ಮಾಂತ್ರಿಕ ಗುಲ್ಜಾರ್​ಗೆ ಜ್ಞಾನಪೀಠ ಪ್ರಶಸ್ತಿ

Gulzar: ಹಿಂದಿ ಚಿತ್ರರಂಗದ ಮೇರು ಚಿತ್ರಸಾಹಿತಿ, ಭಾರತದ ಪ್ರಸ್ತುತ ಅತ್ಯುತ್ತಮ ಉರ್ದು ಕವಿ ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಗುಲ್ಜಾರ್ ಸಾಗಿ ಬಂದ ಹಾದಿ ಎಂಥಹುದು ಗೊತ್ತೆ?

ಅಕ್ಷರಕ್ಕೆ ಭಾವನೆ ತುಂಬಿದ ಮಾಂತ್ರಿಕ ಗುಲ್ಜಾರ್​ಗೆ ಜ್ಞಾನಪೀಠ ಪ್ರಶಸ್ತಿ
Follow us
ಮಂಜುನಾಥ ಸಿ.
|

Updated on:Feb 17, 2024 | 7:21 PM

ಕೇಂದ್ರ ಸರ್ಕಾರವು (Central Government) ಇಂದು ಖ್ಯಾತ ಚಿತ್ರಸಾಹಿತಿ ಗುಲ್ಜಾರ್ ಹಾಗೂ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ. ಒಬ್ಬರು ಸಂಸ್ಕೃತ ವಿದ್ವಾಂಸರಾದರೆ ಮತ್ತೊಬ್ಬರು ಭಾರತದ ಈಗಿನ ಅತ್ಯುತ್ತಮ ಉರ್ದು ಕವಿ. ಬಾಲಿವುಡ್ ಸಿನಿಮಾ ಸಾಹಿತ್ಯವನ್ನು ತಮ್ಮ ಲೇಖನಿ ಮೂಲಕ ಎತ್ತರಕ್ಕೆ ಒಯ್ದವರಲ್ಲಿ ಪ್ರಮುಖರು ಗುಲ್ಜಾರ್. ದಶಕಗಳಿಂದಲೂ ಹಿಂದಿ ಸಿನಿಮಾ ಸಾಹಿತ್ಯದ ಜೊತೆ-ಜೊತೆಗೆ ಉರ್ದು ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಲೇ ಬಂದಿದ್ದಾರೆ ಗುಲ್ಜಾರ್. ಕೇವಲ ಲೇಖಕರಾಗಿ ಮಾತ್ರವೇ ತಮ್ಮ ಅನುಭವ, ಜ್ಞಾನವನ್ನು ಪಸರಿಸದೆ ನಿರ್ದೇಶಕರಾಗಿ, ಚಿತ್ರಕತೆ ಬರಹಗಾರರಾಗಿ, ಟಿವಿ ನಿರ್ದೇಶಕರಾಗಿ, ಡಾಕ್ಯುಮೆಂಟರಿ ನಿರ್ದೇಶಕರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು ಗುಲ್ಜಾರ್.

ಗುಲ್ಜಾರ್ ಮೂಲ ಹೆಸರು ಸಂಪೂರ್ಣ ಸಿಂಗ್. ಜನಿಸಿದ್ದು 1938ರಲ್ಲಿ, ಈಗಿನ ಪಾಕಿಸ್ತಾನಕ್ಕೆ ಸೇರಿರುವ ಪ್ರಾಂತ್ಯದಲ್ಲಿ. ಸ್ವಾತಂತ್ರ್ಯಾನಂತರ ಓದು ತ್ಯಜಿಸಿ ಬಾಂಬೆಗೆ ಬಂದ ಗುಲ್ಜಾರ್ ಜೀವನ ಸಾಗಿಸಲು ಹಲವು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು. ಕಾರು ರಿಪೇರಿ, ಅಪಘಾತವಾದ ಕಾರಿಗೆ ಬಣ್ಣ ಹಾಕುವ ಕೆಲಸ ಮಾಡುತ್ತಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಗುಲ್ಜಾರ್, ‘ನನಗೆ ಬಣ್ಣ ಹಾಕುವ ಕೆಲಸ ಬಹಳ ಇಷ್ಟವಾಗಿದ್ದಾಗಿತ್ತು. ಬಣ್ಣಗಳು ನನಗೆ ಖುಷಿ ಕೊಡುತ್ತಿದ್ದವು. ಆ ಕೆಲಸ ಮಾಡುತ್ತಲೇ ನಾನು ಓದು ಮುಂದುವರೆಸಿದೆ, ಬರಹಗಾರರ ಅಸೋಸಿಯೇಷನ್ ಸಹ ಸೇರಿಕೊಂಡೆ. ಅಲ್ಲಿಂದ ನನ್ನ ಜೀವನದ ದಿಕ್ಕು ಬದಲಾಯ್ತು’ ಎಂದಿದ್ದರು.

ಇದನ್ನೂ ಓದಿ:Jnanpith Award: ಖ್ಯಾತ ಉರ್ದು ಕವಿ ಗುಲ್ಜಾರ್, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯಗೆ ಜ್ಞಾನಪೀಠ ಪ್ರಶಸ್ತಿ

‘ಬರಹದಲ್ಲಿ ಭಾರಿ ಆಸಕ್ತಿಯಿದ್ದ ಅವರ ಗುಲ್ಜಾರ್ ದೀನ್ವಿ ಎಂಬ ಕಾವ್ಯನಾಮವನ್ನು ಅವರೇ ಇಟ್ಟುಕೊಂಡರಂತೆ. ಅದಾದ ಬಳಿಕ ಅದರಲ್ಲಿ ಗುಲ್ಜಾರ್ ಮಾತ್ರವನ್ನೇ ಉಳಿಸಿಕೊಂಡರು. ಪ್ರೋಗ್ರೆಸ್ಸಿವ್ ರೈಟರ್ಸ್ ಅಸೋಸಿಯೇಷನ್ ಸೇರಿಕೊಂಡ ಗುಲ್ಜಾರ್ ಅಲ್ಲಿ ಕೆಲವು ಜನಪ್ರಿಯ ಬರಹಗಾರ ಸಂಪರ್ಕಕ್ಕೆ ಬಂದರು. ಅಲ್ಲಿಂದಲೇ ಬರಹಗಾರರಾಗಿ ಬದುಕು ಶುರು ಮಾಡಿಕೊಂಡರು. 1960 ರಲ್ಲಿ ‘ಶ್ರೀಮಾನ್ ಸತ್ಯವಾದಿ’ ಸಿನಿಮಾಕ್ಕೆ ಚಿತ್ರಸಾಹಿತಿಯಾಗಿ ಕೆಲಸ ಮಾಡಿದರು. ಇದು ಅವರ ಮೊದಲ ಸಿನಿಮಾ ಆಗಿತ್ತು. ಈವರೆಗೆ ನೂರಾರು ಸಿನಿಮಾಗಳಿಗೆ ಸಾವಿರಾರು ಹಾಡುಗಳನ್ನು ಬರೆದಿದ್ದಾರೆ. ಸಂಗೀತ ಪ್ರಿಯರು, ಹಿಂದಿ ಸಿನಿಮಾ ಪ್ರಿಯರು ಎಂದೆಂದೂ ಮರೆಯದ ಹಾಡುಗಳನ್ನು ಗುಲ್ಜಾರ್ ನೀಡಿದ್ದಾರೆ.

ಚಿತ್ರಸಾಹಿತಿ ಮಾತ್ರವೇ ಅಲ್ಲದೆ ಹಲವು ಅತ್ಯುತ್ತಮ ಸಿನಿಮಾಗಳ ನಿರ್ದೇಶನವನ್ನೂ ಗುಲ್ಜಾರ್ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಚಿತ್ರಕತೆಯನ್ನು ಸಹ ಗುಲ್ಜಾರ್ ಬರೆದಿದ್ದಾರೆ. ಗುಲ್ಜಾರ್​ ಅವರ ಪ್ರತಿಭೆಗೆ ಅಗಣಿತ ಪ್ರಶಸ್ತಿಗಳು, ಗೌರವಗಳು ಅವರನ್ನು ಅರಸಿ ಬಂದಿವೆ. ‘ಸ್ಲಮ್ ಡಾಗ್ ಮಿಲೇನಿಯರ್’ ಸಿನಿಮಾದ ಹಾಡಿಗೆ ಆಸ್ಕರ್ ಪ್ರಶಸ್ತಿ ಧಕ್ಕಿದೆ. ಅದೇ ಸಿನಿಮಾದ ಹಾಡಿಗೆ ಗ್ರ್ಯಾಮಿ ಪ್ರಶಸ್ತಿಯೂ ಧಕ್ಕಿದೆ. 22 ಫಿಲಂಫೇರ್ ಪ್ರಶಸ್ತಿ ದೊರೆತಿದೆ. ಏಳು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಮಿರ್ಚಿ ಅವಾರ್ಡ್ಸ್, ಜೀ ಅವಾರ್ಡ್ಸ್, ಎಂಟಿವಿ ಅವಾರ್ಡ್ಸ್ ಗಳಂತೂ ಹಲವು ಬಾರಿ ದೊರೆತಿವೆ. ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೂ ಗುಲ್ಜಾರ್ ಭಾಜನರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳು ಸಹ ದೊರೆತಿವೆ. ಇದೀಗ ಕೇಂದ್ರ ಸರ್ಕಾರವು ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Sat, 17 February 24