‘ಇದು ಅಗೌರವ, ಅಜಾಗರೂಕತೆ’: ಆಕ್ರೋಶ ಹೊರಹಾಕಿದ ಹೇಮಾಮಾಲಿನಿ

Dharmendra condition: ಬಾಲಿವುಡ್​ನ ದಿಗ್ಗಜ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮೇಂದ್ರ ನಿಧನದ ಸುದ್ದಿ ಪ್ರಸಾರವಾಗಿದ್ದವು. ಇದು, ಧರ್ಮೇಂದ್ರ ಅವರ ಕುಟುಂಬಕ್ಕೆ ತೀವ್ರ ಬೇಸರ ತರಿಸಿದ್ದು, ಇದೀಗ ಅವರ ಪತ್ನಿ, ನಟಿ, ಸಂಸದೆ ಹೇಮಾಮಾಲಿನಿ ಟ್ವೀಟ್ ಮಾಡಿದ್ದಾರೆ.

‘ಇದು ಅಗೌರವ, ಅಜಾಗರೂಕತೆ’: ಆಕ್ರೋಶ ಹೊರಹಾಕಿದ ಹೇಮಾಮಾಲಿನಿ
Dharmendra Hema Milini

Updated on: Nov 11, 2025 | 10:33 AM

ಬಾಲಿವುಡ್​ನ (Bollywood) ದಿಗ್ಗಜ ನಟ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವ ಧರ್ಮೇಂದ್ರ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದರೆ ಕೆಲ ಮಾಧ್ಯಮಗಳು ಧರ್ಮೆಂದ್ರ ನಿಧನ ಹೊಂದಿದ್ದಾರೆ ಎಂದು ಕೆಲ ಸಮಯದ ಮುಂಚೆಯೇ ವರದಿ ಪ್ರಸಾರ ಮಾಡಿದ್ದವು, ಇದನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಅಭಿಮಾನಿಗಳು ಶೋಕ ಸಂದೇಶ ಹಂಚಿಕೊಳ್ಳಲು ಆರಂಭಿಸಿದ್ದರು. ಆದರೆ ಈ ವಿಷಯ ಧರ್ಮೇಂದ್ರ ಕುಟುಂಬದವರಿಗೆ ತೀವ್ರ ನೋವುಂಟು ಮಾಡಿದೆ. ವಿಶೇಷವಾಗಿ ನಟಿ, ಸಂಸದೆ ಹೇಮಾಮಾಲಿನಿ ಅವರಂತೂ ಮಾಧ್ಯಮಗಳು, ಹಾಗೂ ಸುಳ್ಳು ಸುದ್ದಿ ಹರಡುತ್ತಿರುವವರ ಮೇಲೆ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

‘ಈ ರೀತಿ ನಡೆಯುತ್ತಿರುವುದು ಕ್ಷಮಿಸಲಾಗದು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬಕ್ಕೆ ಮತ್ತು ಅದರ ಗೌಪ್ಯತೆಯ ಅಗತ್ಯಕ್ಕೆ ಸರಿಯಾದ ಗೌರವವನ್ನು ನೀಡಿ’ ಎಂದು ಹೇಮಾ ಮಾಲಿನಿ ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್​ನ ಕೆಲವು ಮಂದಿ ಸಹ ಧರ್ಮೇಂದ್ರ ಅವರ ಅಗಲಿಕೆ ಬಗ್ಗೆ ಟ್ವೀಟ್ ಮಾಡಿದ್ದರು. ಜಾವೇದ್ ಅಖ್ತರ್ ಸೇರಿದಂತೆ ಇನ್ನೂ ಕೆಲವು ಧರ್ಮೇಂದ್ರ ಅಗಲಿಕೆಗೆ ಸಂತಾಪ ಸಂದೇಶಗಳನ್ನು ಟ್ವಿಟ್ಟರ್​​ನಲ್ಲಿ ಪ್ರಕಟಿಸಿದ್ದರು. ಆದರೆ ಧರ್ಮೇಂದ್ರ ಇನ್ನೂ ಕಾಲವಾಗಿಲ್ಲ. ಹೇಮಾಮಾಲಿನಿ ಮಾಡಿರುವ ಟ್ವೀಟ್​ನ ಅನ್ವಯ ಅವರಿನ್ನೂ ಬದುಕಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಸನ್ನಿ ಡಿಯೋಲ್

ಧರ್ಮೇಂದ್ರ ಅವರು ಮುಂಬೈನ ಪ್ರತಿಷ್ಠಿತ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಇಶಾ ಡಿಯೋಲ್, ಅಹಾನಾ ಡಿಯೋಲ್ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪತ್ನಿ, ನಟಿ ಹೇಮಾ ಮಾಲಿನಿ ಸಹ ಆಸ್ಪತ್ರೆಗೆ ಆಗಮಿಸಿದ್ದಾರೆ. ನಟಿ ಇಶಾ ಡಿಯೋಲ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ತಂದೆಯ ಆರೋಗ್ಯದ ಬಗ್ಗೆ ಬರೆದುಕೊಂಡಿದ್ದು, ನನ್ನ ತಂದೆ ಆರೋಗ್ಯವಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಅಂದಹಾಗೆ ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿದ್ದು, ನಿನ್ನೆಯಷ್ಟೆ ಅವರು ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ