ಸ್ವಾತಂತ್ರ್ಯ ದಿನದಂದು ಬಿಡುಗಡೆ ಆಗಿ ಇತಿಹಾಸ ಬರೆದ ‘ಶೋಲೆ’ ಸಿನಿಮಾದ ಬಗ್ಗೆ ಆಸಕ್ತಿಕರ ಸಂಗತಿಗಳು

Sholay: 48 ವರ್ಷಗಳ ಹಿಂದೆ ಇದೇ ದಿನ (ಆಗಸ್ಟ್ 15) ಬಿಡುಗಡೆ ಆಗಿದ್ದ ಶೋಲೆ ಸಿನಿಮಾದ ಬಗ್ಗೆ ಹಲವರಿಗೆ ತಿಳಿಯದ ಅಪರೂಪದ ವಿಷಯಗಳು ಇಲ್ಲಿವೆ.

ಸ್ವಾತಂತ್ರ್ಯ ದಿನದಂದು ಬಿಡುಗಡೆ ಆಗಿ ಇತಿಹಾಸ ಬರೆದ ಶೋಲೆ ಸಿನಿಮಾದ ಬಗ್ಗೆ ಆಸಕ್ತಿಕರ ಸಂಗತಿಗಳು
ಶೋಲೆ

Updated on: Aug 15, 2023 | 9:58 PM

ಭಾರತದ ಈವರೆಗಿನ 100 ಅತ್ಯುತ್ತಮ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಶೋಲೆ‘ (Sholay) ಸಿನಿಮಾಕ್ಕೆ ಆರಂಭದಲ್ಲಿಯೇ ಸ್ಥಾನ ಸಿಗುತ್ತದೆ. ಶೋಲೆ ಸಿನಿಮಾ ಮಾಡಿದ್ದ ಕಮಾಲ್ ಅನ್ನು ಬಾಲಿವುಡ್​ನ ಹಿರಿತಲೆಗಳು ಇಂದಿಗೂ ಮರೆತಿಲ್ಲ. ಭಾರತದ ಸಿನಿಮಾ ಇತಿಹಾಸದಲ್ಲಿ ಮರೆಯಲಾಗದ ಸಿನಿಮಾ ಎನಿಸಿಕೊಂಡಿರುವ ‘ಶೋಲೆ’ ಬಿಡುಗಡೆ ಆಗಿ ಇಂದಿಗೆ (ಆಗಸ್ಟ್ 15) 48 ವರ್ಷಗಳಾದವು. ಹಲವು ಅಳಿಸಲಾಗದ ದಾಖಲೆಗಳನ್ನು ಬರೆದ ಈ ಸಿನಿಮಾದ ಬಗೆಗಿನ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.

  • ‘ಶೋಲೆ’ ಸಿನಿಮಾದ ಕಾಲ್ಪನಿಕ ಗ್ರಾಮ ರಾಮಘಡ್​ನ ನಿರ್ಮಾಣ ಸಿನಿಮಾದ ಚಿತ್ರೀಕರಣ ನಡೆದಿದ್ದು ಕರ್ನಾಟಕದ ರಾಮನಗರದಲ್ಲಿ. ಗಬ್ಬರ್ ಸಿಂಗ್​ನ ದೃಶ್ಯಗಳ ಚಿತ್ರೀಕರಣ ನಡೆದ ಬೆಟ್ಟವನ್ನು ಇಂದಿಗೂ ಶೋಲೆ ಬೆಟ್ಟ ಎಂದೇ ಕರೆಯಲಾಗುತ್ತದೆ.
  • ‘ಶೋಲೆ’ ಸಿನಿಮಾದ ಕ್ಲೈಮ್ಯಾಕ್ಸ್ ಬೇರೆ ರೀತಿಯಲ್ಲಿಯೇ ಚಿತ್ರೀಕರಣವಾಗಿತ್ತು. ಮೂಲ ಸಿನಿಮಾದಲ್ಲಿ ಠಾಕೂರ್, ಗಬ್ಬರ್ ಸಿಂಗ್ ಅನ್ನು ಕೊಲ್ಲುವಂತೆ ಚಿತ್ರೀಕರಿಸಲಾಗಿತ್ತು, ಆದರೆ ಸೆನ್ಸಾರ್ ಬೋರ್ಡ್​ನವರ ಸಲಹೆ ಮೇರೆಗೆ ಮತ್ತೊಮ್ಮೆ ಕ್ಲೈಮ್ಯಾಕ್ಸ್ ಚಿತ್ರೀಕರಿಸಿ ಗಬ್ಬರ್ ಸಿಂಗ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ದೃಶ್ಯ ಬದಲಾಯಿಸಲಾಯ್ತು.
  • ‘ಶೋಲೆ’ ಸಿನಿಮಾದ ಚಿತ್ರೀಕರಣ 2 ವರ್ಷ ನಡೆಯಿತು. ಹಲವು ಕಾರಣಗಳಿಗೆ ಸಿನಿಮಾದ ಚಿತ್ರೀಕರಣ ತಡವಾಯ್ತು. ಅದರಲ್ಲಿ ಬಜೆಟ್ ಸಮಸ್ಯೆಯೂ ಒಂದಾಗಿತ್ತು, ಆದರೆ ಬಿಡುಗಡೆ ಆದ ಬಳಿಕ ಯಾವ ಸಿನಿಮಾ ಸಹ ಕಾಣದಂಥಹಾ ಬಾಕ್ಸ್ ಆಫೀಸ್ ಗೆಲುವು ಕಂಡಿತು ಸಿನಿಮಾ.
  • ‘ಶೋಲೆ’ ಸಿನಿಮಾದ ಗಬ್ಬರ್ ಸಿಂಗ್ ಪಾತ್ರಕ್ಕೆ ಬೇರೆ ನಟನ ಆಯ್ಕೆ ಆಗಿತ್ತು, ಸಿನಿಮಾದ ಚಿತ್ರಕತೆ ಬರೆದಿದ್ದ ಜಾವೇದ್ ಹಾಗೂ ಸಲ್ಮಾನ್ ಖಾನ್​ರ ತಂದೆ ಸಲೀಂ ಅವರಿಗೆ ಅಜ್ಮದ್ ಖಾನ್ ಧ್ವನಿ ಇಷ್ಟವಾಗಿರಲಿಲ್ಲ. ಆದರೆ ನಿರ್ದೇಶಕ ರಮೇಶ್ ಸಿಪ್ಪಿ ನಿರ್ಧಾರದಂತೆ ಅಮ್ಜದ್ ಖಾನ್​ಗೆ ಆ ಪಾತ್ರ ದೊರಕಿತು, ಆಮೇಲಿನದ್ದು ಇತಿಹಾಸ.
  • 70 ಎಂಎಂನಲ್ಲಿ ಚಿತ್ರೀಕರಣ ಮಾಡಿದ ಭಾರತದ ಮೊದಲ ಸಿನಿಮಾ ‘ಶೋಲೆ’. 25 ವಾರಗಳ ಸತತ ಪ್ರದರ್ಶನ ಕಂಡ ಭಾರತದ ಮೊದಲ ಸಿನಿಮಾ ಸಹ ‘ಶೋಲೆ’. ಈ ಸಿನಿಮಾ ನೋಡಲು ಪಾಕಿಸ್ತಾನದಿಂದ ರೈಲಿನಲ್ಲಿ ಜನ ಬರುತ್ತಿದ್ದರು. ಒಂದೇ ಚಿತ್ರಮಂದಿರದಲ್ಲಿ ಸತತ ಐದು ವರ್ಷ ಓಡಿದ ಸಿನಿಮಾ ಸಹ ‘ಶೋಲೆ’.
  • 1950 ರಲ್ಲಿ ಗ್ವಾಲಿಯರ್​ನಲ್ಲಿ ಗಬ್ಬರ್ ಸಿಂಗ್ ಹೆಸರಿನ ನಿಜವಾದ ಡಾಕು ಇದ್ದ. ಆತ ಪೊಲೀಸರ ಕಿವಿ, ಮೂಗು ಕತ್ತರಿಸುತ್ತಿದ್ದನಂತೆ. ಆತನ ಹೆಸರನ್ನೇ ‘ಶೋಲೆ’ ಸಿನಿಮಾದ ವಿಲನ್​ಗೆ ಇಡಲಾಯ್ತು. ಸಿನಿಮಾದ ಕತೆ ಬರೆದ ಸಲೀಂ ಹಾಗೂ ಜಾವೇದ್ ತಮ್ಮ ನಿಜ ಜೀವನದ ಗೆಳೆಯರ ಹೆಸರುಗಳನ್ನೇ ಸಿನಿಮಾದ ಹಲವು ಪಾತ್ರಗಳಿಗೆ ಇಟ್ಟಿದ್ದಾರೆ.
  • ಹಲವು ಅಂತರಾಷ್ಟ್ರೀಯ ಗೌರವಗಳಿಗೆ ಪಾತ್ರವಾಯ್ತು ‘ಶೋಲೆ’, ಮಿಲೇನಿಯಮ್​ನ ಅತ್ಯುತ್ತಮ ಸಿನಿಮಾಗಳು ಎಂಬ ಬಿಬಿಸಿ ತಯಾರಿಸಿದ ಪಟ್ಟಿಯಲ್ಲಿಯೂ ಸ್ಥಾನ ಪಡೆಯಿತು, ಹಲವು ದಾಖಲೆಗಳನ್ನು ಬರೆದ ಈ ಸಿನಿಮಾಕ್ಕೆ ಸಿಕ್ಕಿದ್ದು ಕೇವಲ ಒಂದೇ ಒಂದು ಫಿಲಂಫೇರ್ ಪ್ರಶಸ್ತಿ.
  • ಸಿನಿಮಾ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ