ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಭಾರತದ ಸಿನಿಮಾಗಳಿವು..

| Updated By: ರಾಜೇಶ್ ದುಗ್ಗುಮನೆ

Updated on: Aug 23, 2023 | 2:02 PM

‘ಜೈಲರ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಬಾಚಿಕೊಂಡರೆ, ‘ಗದರ್ 2' ಭಾರತದ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ಗಡಿ ದಾಟುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ ಟಾಪ್ 10 ಸಿನಿಮಾಗಳಿವು.

ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಭಾರತದ ಸಿನಿಮಾಗಳಿವು..
ಭರ್ಜರಿ ಬಿಸ್ನೆಸ್ ಮಾಡಿದ ಸಿನಿಮಾಗಳು
Follow us on

ಪ್ರತಿ ವರ್ಷ ಹಲವು ಸಿನಿಮಾಗಳು ರಿಲೀಸ್ ಆಗುತ್ತವೆ. ಆ ಪೈಕಿ ಗೆಲ್ಲುವುದು ಕೆಲವೇ ಕೆಲವು ಚಿತ್ರಗಳು. ಇನ್ನು ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡುವ ಚಿತ್ರಗಳು ಅಲ್ಲೊಂದು ಇಲ್ಲೊಂದು ಸಿಗುತ್ತವೆ. ಸದ್ಯ  ಭಾರತದ ಗಲ್ಲಾಪೆಟ್ಟಿಗೆಯಲ್ಲಿ ರಜನಿಕಾಂತ್ ನಟನೆಯ ‘ಜೈಲರ್’ ಹಾಗೂ ಸನ್ನಿ ಡಿಯೋಲ್ ನಟನೆಯ ‘ಗದರ್ 2‘ ಚಿತ್ರಗಳು ಭರ್ಜರಿ ಸದ್ದು ಮಾಡುತ್ತಿವೆ. ‘ಜೈಲರ್’ ಸಿನಿಮಾ (Jailer Movie) ವಿಶ್ವ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಬಾಚಿಕೊಂಡರೆ, ‘ಗದರ್ 2′ (Gadar 2) ಭಾರತದ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ಗಡಿ ದಾಟುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ ಟಾಪ್ 10 ಸಿನಿಮಾಗಳಿವು.

‘ದಂಗಲ್’

ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಅವರಿಗೆ ಇತ್ತೀಚೆಗೆ ಹಿಟ್ ಸಿನಿಮಾಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಅವರು ನಟನೆಯಿಂದ ಒಂದು ಬ್ರೇಕ್ ಪಡೆದಿದ್ದಾರೆ. ಆದರೆ, ಅವರು ಮಾಡಿರೋ ದಾಖಲೆಯನ್ನು ಮುರಿಯಲು ಯಾವ ಸಿನಿಮಾಗಳಿಂದಲೂ ಸಾಧ್ಯವಾಗುತ್ತಿಲ್ಲ. ‘ದಂಗಲ್’ ಚಿತ್ರ ವಿಶ್ವ ಮಟ್ಟದಲ್ಲಿ ಸದ್ದು ಮಾಡಿರುವ ಸಿನಿಮಾ. ವಿಶ್ವದಾದ್ಯಂತ ಈ ಚಿತ್ರ 2,024 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮೊದಲ ಸ್ಥಾನದಲ್ಲಿದೆ.

‘ಬಾಹುಬಲಿ 2’

ರಾಜಮೌಳಿ ನಿರ್ದೇಶನದ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತವೆ. ಅವರ ವೃತ್ತಿ ಜೀವನದಲ್ಲಿ ‘ಬಾಹುಬಲಿ 2’ ಚಿತ್ರ ವಿಶೇಷ ಎನಿಸಿಕೊಂಡಿದೆ. ಪ್ರಭಾಸ್, ತಮನ್ನಾ, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ ಮೊದಲಾದವರು ನಟಿಸಿದ ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಪ್ರಪಂಚದಾದ್ಯಂತ ಈ ಚಿತ್ರ 1,810 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ.

‘ಕೆಜಿಎಫ್: ಚಾಪ್ಟರ್​ 2’

ಕನ್ನಡ ಚಿತ್ರರಂಗದ ಪಾಲಿಗೆ ‘ಕೆಜಿಎಫ್ 2’ ಸಖತ್ ವಿಶೇಷ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಯಶ್ ಅವರು ರಾಕಿ ಆಗಿ ಮಿಂಚಿದರು. ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಲ್ಪನೆಯಲ್ಲಿ ಈ ಚಿತ್ರ ಮೂಡಿ ಬಂತು. ಈ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 1,250 ಕೋಟಿ ರೂಪಾಯಿ ಗಳಿಸಿದೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ‘ಕೆಜಿಎಫ್ 2’ಗೆ ಇದೆ.

‘ಆರ್​ಆರ್​ಆರ್​’

ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ‘ಆರ್​ಆರ್​ಆರ್​’ ಸಿನಿಮಾ ಮತ್ತೊಂದು ಮಾಸ್ಟರ್​ಪೀಸ್. ಬ್ರಿಟಿಷರ ವಿರುದ್ಧ ಹೋರಾಡಿದ ಇಬ್ಬರು ವ್ಯಕ್ತಿಗಳ ಬಗ್ಗೆ ಕಾಲ್ಪನಿಕ ಕಥೆ ಹೆಣೆದು ಸಿನಿಮಾ ಮಾಡಿದರು ರಾಜಮೌಳಿ. ಈ ಚಿತ್ರದ ‘ನಾಟು.. ನಾಟು..’ ಹಾಡು ಆಸ್ಕರ್ ಗೆದ್ದಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1200 ಕೋಟಿ ರೂಪಾಯಿ ಸಂಗ್ರಹಿಸಿದೆ. ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿದೆ. 2022ರ ಮಾರ್ಚ್​ನಲ್ಲಿ ಸಿನಿಮಾ ರಿಲೀಸ್ ಆಯಿತು.

ಪಠಾಣ್

ಬ್ಯಾಕ್​ ಟು ಬ್ಯಾಕ್ ಸೋಲು ಕಂಡಿದ್ದ ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡರು. ‘ಪಠಾಣ್​’ ಸುನಾಮಿಗೆ ಬಾಕ್ಸ್ ಆಫೀಸ್ ನಡುಗಿತು. ಈ ಮಲ್ಟಿ ಸ್ಟಾರರ್ ಚಿತ್ರ ವಿಶ್ವಾದ್ಯಂತ 1050 ಕೋಟಿಗಳಷ್ಟು ಗಳಿಕೆ ಮಾಡಿದೆ. ಶಾರುಖ್ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದು.

‘ಬಜರಂಗಿ ಭಾಯಿಜಾನ್’

ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದ ಕಾಲವೊಂದಿತ್ತು. ಆ ಸಾಲಿನಲ್ಲಿ ‘ಬಜರಂಗಿ ಭಾಯಿಜಾನ್’ ಸಿನಿಮಾ ಇದೆ ಈ ಸಿನಿಮಾ ಅನೇಕರನ್ನು ಭಾವುಕರನ್ನಾಗಿಸಿತ್ತು. 2015ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅವರ ಚಿತ್ರವು ವಿಶ್ವಾದ್ಯಂತ ಸುಮಾರು 970 ಕೋಟಿ ರೂ ಗಳಿಸಿದೆ.

ಸೀಕ್ರೆಟ್ ಸೂಪರ್​ಸ್ಟಾರ್

7ನೇ ಸ್ಥಾನದಲ್ಲಿಯೂ ಆಮಿರ್ ಖಾನ್ ಅವರ ಪ್ರಾಬಲ್ಯ ಇದೆ. ‘ಸೀಕ್ರೆಟ್ ಸೂಪರ್​ಸ್ಟಾರ್ ಸಿನಿಮಾ 2017ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 967 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾ ಚೀನಾದಲ್ಲಿ ಭರ್ಜರಿ ಗಳಿಕೆ ಮಾಡಿತು.

ಪಿಕೆ

2014ರಲ್ಲಿ ಆಮಿರ್ ಖಾನ್ ಅಭಿನಯದ ‘ಪಿಕೆ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಆಮಿರ್ ಖಾನ್ ಅಲ್ಲದೆ, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್, ಸಂಜಯ್ ದತ್ ಮತ್ತು ಬೊಮನ್ ಇರಾನಿ ನಟಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 854 ಕೋಟಿ ರೂಪಾಯಿ ಗಳಿಸಿದೆ. ರಾಜ್​ಕುಮಾರ್ ಹಿರಾನಿ ನಿರ್ದೇಶನ ಗಮನ ಸೆಳೆದಿತ್ತು.

ಇದನ್ನೂ ಓದಿ: ‘500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ ಗದರ್​ 2’: ಭವಿಷ್ಯ ನುಡಿದ ಬಾಕ್ಸ್​ ಆಫೀಸ್​ ತಜ್ಞರು

2.0

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘2.0’ ಚಿತ್ರ ಒಂಭತ್ತನೇ ಸ್ಥಾನದಲ್ಲಿದೆ. ಇದು ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 800 ಕೋಟಿ ರೂಪಾಯಿ ಬಾಚಿಕೊಂಡಿದೆ.

ಬಾಹುಬಲಿ: ದಿ ಬಿಗಿನಿಂಗ್

ಪ್ರಭಾಸ್ ಅವರ ‘ಬಾಹುಬಲಿ’ ಚಿತ್ರ 10 ನೇ ಸ್ಥಾನದಲ್ಲಿದೆ. ಈ ಚಿತ್ರ ಮಾಡಿದ ಮ್ಯಾಜಿಕ್ ದೊಡ್ಡದು. ರಾಜಮೌಳಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರ 650 ಕೋಟಿ ರೂಪಾಯಿ ಗಳಿಕೆ ಮಾಡಿತ್ತು

‘ಗದರ್ 2’ ಚಿತ್ರಕ್ಕೆ ಸಿಗಬಹುದು ಸ್ಥಾನ

ಸನ್ನಿ ಡಿಯೋಲ್ ಅಭಿನಯದ ‘ಗದರ್ 2’ ಚಿತ್ರದ ಹವಾ ಎಲ್ಲೆಡೆ ಕಂಡುಬರುತ್ತಿದೆ. ಈ ಚಿತ್ರ ನಿರಂತರವಾಗಿ ಬಿಸ್ನೆಸ್ ಮಾಡುತ್ತಿದೆ. ಸನ್ನಿ ಮತ್ತು ಅಮೀಷಾ ಪಟೇಲ್​ ಚಿತ್ರ ಹಿಂದಿಯಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ