‘ಕ್ರಿಶ್ 4’ ಸಿನಿಮಾ ವಿಳಂಬ, ಬಜೆಟ್ ಸೇರಿದಂತೆ ಹಲವು ಸಮಸ್ಯೆ

Krrish 4: ಹೃತಿಕ್ ರೋಷನ್ ನಟನೆಯ ‘ಕ್ರಿಶ್’ ಸಿನಿಮಾ ಭಾರತ ಚಿತ್ರರಂಗದ ಯಶಸ್ವಿ ಸೂಪರ್ ಹೀರೋ ಸಿನಿಮಾ. ‘ಕ್ರಿಶ್’ ಬಳಿಕ ಕೆಲವು ಸೂಪರ್ ಹೀರೋ ಸಿನಿಮಾಗಳು ಬಂದವಾದರೂ ‘ಕ್ರಿಶ್’ನಷ್ಟು ಯಾವುದೂ ಯಶಸ್ಸು ಗಳಿಸಲಿಲ್ಲ. ‘ಕ್ರಿಶ್ 4’ ನಿರ್ಮಾಣ ಆಗುತ್ತದೆ ಎಂದು ಕೆಲ ವರ್ಷಗಳಿಂದಲೂ ಹೇಳಲಾಗುತ್ತಿದೆ. ಆದರೆ ಈಗ ಬರುತ್ತಿರುವ ಸುದ್ದಿಯಂತೆ ‘ಕ್ರಿಶ್ 4’ ಸಿನಿಮಾಕ್ಕೆ ಹಲವು ಅಡೆ-ತಡೆಗಳು ಎದುರಾಗಿವೆ.

‘ಕ್ರಿಶ್ 4’ ಸಿನಿಮಾ ವಿಳಂಬ, ಬಜೆಟ್ ಸೇರಿದಂತೆ ಹಲವು ಸಮಸ್ಯೆ
Krrish

Updated on: Mar 16, 2025 | 7:48 AM

ಹೃತಿಕ್ ರೋಷನ್ ನಟನೆಯ ‘ಕ್ರಿಶ್’ ಸಿನಿಮಾ ಭಾರತ ಸಿನಿಮಾದ ಮೊದಲ ಮತ್ತು ಯಶಸ್ವಿ ಸೂಪರ್ ಹೀರೋ. ಅಸಲಿಗೆ ಶಕ್ತಿಮಾನ್ ಪಾತ್ರ ಭಾರತದ ಮೊದಲ ಸೂಪರ್ ಹೀರೋ ಆಗಿದ್ದರೂ ಅದು ಟಿವಿಗೆ ಮಾತ್ರವೇ ಸೀಮಿತವಾಗಿತ್ತು. ‘ಕ್ರಿಶ್’ ಸಿನಿಮಾ ‘ಕೋಯಿ ಮಿಲ್ ಗಯಾ’ ಸಿನಿಮಾದ ಮುಂದುವರೆದ ಭಾಗವಾಗಿ ಭಾರಿ ಜನಪ್ರಿಯತೆ ಗಳಿಸಿತು. ಈ ವರೆಗೆ ಮೂರು ಕ್ರಿಶ್ ಸಿನಿಮಾಗಳು ಬಿಡುಗಡೆ ಆಗಿವೆ. ‘ಕ್ರಿಶ್ 4’ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಕಳೆದ ಒಂದೆರಡು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಆದರೆ ಈ ವರೆಗೆ ‘ಕ್ರಿಶ್ 4’ ಸಿನಿಮಾ ಪ್ರಾರಂಭವಾಗಿಲ್ಲ. ‘ಕ್ರಿಶ್ 4’ ಸಿನಿಮಾಕ್ಕೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ.

ಈ ಹಿಂದಿನ ಕ್ರಿಶ್ ಸಿನಿಮಾಗಳು ಸುಮಾರು 100 ಕೋಟಿಗೂ ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ಆದರೆ ‘ಕ್ರಿಶ್ 3’ ಸಿನಿಮಾ ಬಿಡುಗಡೆ ಆಗಿ 12 ವರ್ಷಗಳಾಗಿದ್ದು, ಈಗ ಪ್ರೊಡಕ್ಷನ್ ಕಾಸ್ಟ್ ಬಹಳ ಹೆಚ್ಚಾಗಿದೆ. ಅಲ್ಲದೆ ಈ ಹತ್ತು ವರ್ಷಗಳಲ್ಲಿ ಮಾರ್ವೆಲ್, ಡಿಸಿ ಅವರುಗಳು ವಿಎಫ್​ಎಕ್ಸ್​ ಅನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ವಿಎಫ್​ಎಕ್ಸ್ ಮೂಲಕ ಅಸಾಧ್ಯವನ್ನೆಲ್ಲ ಸಾಧ್ಯವಾಗಿಸಿಬಿಟ್ಟಿದ್ದಾರೆ. ಹೀಗಿರುವಾಗ ಈಗ ‘ಕ್ರಿಶ್ 4’ ಸಿನಿಮಾ ನಿರ್ಮಾಣ ಮಾಡಿದರೆ ಜನ ಅದನ್ನು ಮಾರ್ವೆಲ್​ನ ಸೂಪರ್ ಹೀರೋ ಸಿನಿಮಾಗಳೊಟ್ಟಿಗೆ ಹೋಲಿಸಿ ನೋಡುತ್ತಾರೆ. ಹಾಗಾಗಿ ‘ಕ್ರಿಶ್ 4’ ಅನ್ನು ಭಾರಿ ಅದ್ಧೂರಿಯಾಗಿಯೇ ನಿರ್ಮಿಸಬೇಕಿದೆ.

ಸಿನಿಮಾದ ಈಗಿನ ಬಜೆಟ್ ಸುಮಾರು 700 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದ್ದು, ಇಷ್ಟು ದೊಡ್ಡ ಬಜೆಟ್ ಹಾಕಲು ನಿರ್ಮಾಣ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಅಲ್ಲದೆ ಈ ಮೊದಲಿನ ‘ಕ್ರಿಶ್’ ಸಿನಿಮಾಗಳನ್ನು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಆದರೆ ‘ಕ್ರಿಶ್ 4’ ಸಿನಿಮಾದ ಜವಾಬ್ದಾರಿಯನ್ನು ನಿರ್ದೇಶಕ ಸಿದ್ಧಾರ್ಥ್​ ಆನಂದ್​ಗೆ ಹೃತಿಕ್ ರೋಷನ್ ನೀಡಿದ್ದಾರಂತೆ. ನಿರ್ಮಾಪಕರು ಸಹ ಬೇರೆಯವರೇ ಇರಲಿದ್ದು, ಇದು ಸಹ ನಿರ್ಮಾಪಕರ ಪಾಲಿಗೆ ಒಂದು ಚಿಂತೆಯ ವಿಷಯವಾಗಿದೆ.

ಇದನ್ನೂ ಓದಿ:Jr.ಎನ್​ಟಿಆರ್​ ಜೊತೆ ಡ್ಯಾನ್ಸ್ ಮಾಡುವಾಗ ಎಡವಿದ ಹೃತಿಕ್ ರೋಷನ್; ಸಂಭವಿಸಿತು ಅವಘಡ

ಕೆಲ ವಾರಗಳ ಹಿಂದೆ ಬಾಲಿವುಡ್​ನ ಮ್ಯಾಗಜೀನ್​ಗೆ ಸಂದರ್ಶನ ನೀಡಿದ್ದ ರಾಕೇಶ್ ರೋಷನ್, ತಾವು ‘ಕ್ರಿಶ್ 4’ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದು ಖಾತ್ರಿ ಪಡಿಸಿದ್ದಾರೆ. ‘ಕ್ರಿಶ್ 4’ ಮಾತ್ರವೇ ಅಲ್ಲ, ತಾವು ಇನ್ನುಮುಂದೆ ಯಾವ ಸಿನಿಮಾವನ್ನೂ ಸಹ ನಿರ್ಮಾಣ ಮಾಡುವುದಿಲ್ಲ ಎಂದಿದ್ದಾರೆ. ಜೊತೆಗೆ ‘ಕ್ರಿಶ್ 4’ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿವೆ ಎಂದು ಸಹ ಹೇಳಿದ್ದಾರೆ.

ಸಿದ್ಧಾರ್ಥ್ ಆನಂದ್ ಪ್ರಸ್ತುತ ‘ವಾರ್ 2’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಬಳಿಕ ಶಾರುಖ್ ಖಾನ್ ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗಳ ಬಳಿಕವಷ್ಟೆ ಅವರು ‘ಕ್ರಿಶ್ 4’ ಸಿನಿಮಾದ ಕಡೆಗೆ ಗಮನ ಹರಿಸಬೇಕಾಗಿದೆ. ಹಾಗಾಗಿ ‘ಕ್ರಿಶ್ 4’ ಇನ್ನೂ ಕನಿಷ್ಟ ಎರಡು ವರ್ಷ ತಡವಾಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ