
ವಿದೇಶದಲ್ಲಿ ಸೂಪರ್ ಹೀರೋ ಸಿನಿಮಾಗಳು ಅನೇಕ. ‘ಸೂಪರ್ ಮ್ಯಾನ್’, ‘ಐರನ್ ಮ್ಯಾನ್’, ‘ಬ್ಯಾಟ್ಮ್ಯಾನ್’, ‘ಹಲ್ಕ್’, ‘ಕ್ಯಾಪ್ಟನ್ ಅಮೆರಿಕ’, ‘ಸ್ಪೈಡರ್ಮ್ಯಾನ್’ ಇನ್ನೂ ಅನೇಕ ಸೂಪರ್ ಹೀರೋಗಳು ಹಾಲಿವುಡ್ನಲ್ಲಿದ್ದಾರೆ. ಭಾರತದಲ್ಲಿ ಸೂಪರ್ ಹೀರೋ ಸಿನಿಮಾಗಳು ಕಡಿಮೆಯೇ. 2006 ರಲ್ಲಿ ಬಿಡುಗಡೆ ಆದ ‘ಕ್ರಿಶ್’ ಸಿನಿಮಾ ಭಾರತದ ಮೊದಲ ಅಧಿಕೃತ ಸೂಪರ್ ಹೀರೋ ಎನ್ನಬಹುದು. ಅದಕ್ಕೂ ಮುಂಚೆ ಕೆಲ ಸಿನಿಮಾಗಳು ಬಿಡುಗಡೆ ಆಗಿದ್ದವರಾದರೂ ತಾಂತ್ರಿಕವಾಗಿ ಗಟ್ಟಿಯಾಗಿದ್ದ ಮೊದಲ ಸೂಪರ್ ಹೀರೋ ಸಿನಿಮಾ ‘ಕ್ರಿಶ್’ ಆಗಿತ್ತು. ‘ಕ್ರಿಶ್’ ಈಗ ಭಾರತದ ಜನಪ್ರಿಯ ಸೂಪರ್ ಹೀರೋ ಸಿನಿಮಾ ಆಗಿದ್ದು, ಇದೀಗ ಸಿನಿಮಾದ ನಾಲ್ಕನೇ ಆವೃತ್ತಿ ತೆರೆಗೆ ಬರಲು ವೇದಿಕೆ ಸಜ್ಜುಗೊಳ್ಳುತ್ತಿದೆ.
ಹೃತಿಕ್ ರೋಷನ್ ‘ಕ್ರಿಶ್’ ಪಾತ್ರದಲ್ಲಿ ಮಿಂಚುತ್ತಾ ಬಂದಿದ್ದಾರೆ. ಈ ವರೆಗೆ ಮೂರು ಕ್ರಿಶ್ ಸಿನಿಮಾಗಳು ತೆರೆಗೆ ಬಂದಿದ್ದು, ಮೂರೂ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಆದರೆ ಇದೇ ಮೊದಲ ಬಾರಿಗೆ ‘ಕ್ರಿಶ್ 4’ ಸಿನಿಮಾ ಅನ್ನು ಹೃತಿಕ್ ರೋಷನ್ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ ಸಹ. ಈ ಹಿಂದಿನ ‘ಕ್ರಿಶ್’ ಸಿನಿಮಾಗಳನ್ನು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಆದರೆ ವಯಸ್ಸಿನ ಕಾರಣಕ್ಕೆ ಅವರು ಈ ಬಾರಿ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಕೇಶ್ ರೋಷನ್ ಅವರು ‘ಕ್ರಿಶ್ 4’ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ‘ಕ್ರಿಶ್ 4’ ಸಿನಿಮಾದ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ. ಸಿನಿಮಾದ ನಿಖರವಾದ ಬಜೆಟ್ ಎಷ್ಟಾಗಬಹುದು ಎಂಬ ಐಡಿಯಾ ನಮಗೆ ಈಗ ಸಿಕ್ಕಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಬಹಳ ಇದೆ. ಹಾಗಾಗಿ ನಾವು ಚಿತ್ರೀಕರಣ ಪ್ರಾರಂಭ ಮಾಡಲು ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದೇವೆ. ಪ್ರೀ ಪ್ರೊಡಕ್ಷನ್ ಸಂಪೂರ್ಣವಾದ ಬಳಿಕವಷ್ಟೆ ನಾವು ಚಿತ್ರೀಕರಣ ಶುರು ಮಾಡಲಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ:ಗರ್ಲ್ಫ್ರೆಂಡ್ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್
‘ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಂದಿನ ವರ್ಷ ಮುಗಿಯಲಿದೆ. ನಾವು ಜೂನ್ ಅಥವಾ ಜುಲೈ ತಿಂಗಳಲ್ಲಿ ‘ಕ್ರಿಶ್ 4’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಚಿತ್ರೀಕರಣ ಬೇಗನೆ ಮುಗಿಯಲಿದೆಯಾದರೂ ಮತ್ತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಇದರಿಂದಾಗಿ ಸಿನಿಮಾದ ಬಿಡುಗಡೆ ಬಹುಷಃ 2027ರ ಅಂತ್ಯಕ್ಕೆ ಅಥವಾ 2028ರ ಆರಂಭದಲ್ಲಿ ಆಗುವ ನಿರೀಕ್ಷೆ ಇದೆ. ಸಿನಿಮಾದ ಅಧಿಕೃತ ಘೋಷಣೆಯನ್ನು ನಾವು ಶೀಘ್ರವೇ ಮಾಡಲಿದ್ದೇವೆ’ ಎಂದಿದ್ದಾರೆ ರಾಕೇಶ್.
ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಜೂ ಎನ್ಟಿಆರ್ ಸಹ ಜೊತೆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ‘ವಾರ್ 2’ ಸಿನಿಮಾದ ಬಳಿಕ ಹೃತಿಕ್ ರೋಷನ್ ಕೈಯಲ್ಲಿ ಈಗ ಮತ್ತೊಂದು ಆಕ್ಷನ್ ಸಿನಿಮಾ ಇದೆ. ಆ ಸಿನಿಮಾದ ಚಿತ್ರೀಕರಣದ ಬಳಿಕವಷ್ಟೆ ಹೃತಿಕ್ ಅವರು ‘ಕ್ರಿಶ್ 4’ ಸಿನಿಮಾ ಕೈಗೆತ್ತುಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Tue, 9 September 25