IIFA 2023: ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದ ಹೃತಿಕ್​ ರೋಷನ್​-ಆಲಿಯಾ ಭಟ್​; ಈ ಬಾರಿ ಐಫಾ ಗೆದ್ದವರ ಪೂರ್ತಿ ಲಿಸ್ಟ್​ ಇಲ್ಲಿದೆ..

|

Updated on: May 28, 2023 | 11:51 AM

IIFA Awards 2023 winners Full List: ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗಳು ಈ ಸಿನಿಮಾದ ಪಾಲಾಗಿವೆ.

IIFA 2023: ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದ ಹೃತಿಕ್​ ರೋಷನ್​-ಆಲಿಯಾ ಭಟ್​; ಈ ಬಾರಿ ಐಫಾ ಗೆದ್ದವರ ಪೂರ್ತಿ ಲಿಸ್ಟ್​ ಇಲ್ಲಿದೆ..
ಆಲಿಯಾ ಭಟ್​, ಹೃತಿಕ್​ ರೋಷನ್​
Follow us on

ಅಬುಧಾಬಿಯಲ್ಲಿ ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಖ್ಯಾತ ನಟ ಹೃತಿಕ್​ ರೋಷನ್​ (Hrithik Roshan) ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ. ಹಿಂದಿಯ ‘ವಿಕ್ರಂ ವೇದ’ ಸಿನಿಮಾದಲ್ಲಿನ ಅವರ ನಟನೆಗೆ ಈ ಪ್ರಶಸ್ತಿ ನೀಡಲಾಗಿದೆ. ಹಾಗೆಯೇ, ನಟಿ ಆಲಿಯಾ ಭಟ್​ (Alia Bhatt) ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ಐಫಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ಅಭಿಮಾನಿಗಳು, ಆಪ್ತರು ಮತ್ತು ಅನೇಕ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಬಹಳ ಅದ್ದೂರಿಯಾಗಿ ಈ ಸಮಾರಂಭ ನಡೆದಿದೆ. ಸಲ್ಮಾನ್​ ಖಾನ್​, ಕಮಲ್​ ಹಾಸನ್​, ವಿಕ್ಕಿ ಕೌಶಲ್​, ಇಶಾ ಗುಪ್ತಾ, ವರುಣ್​ ಧವನ್​, ಎ.ಆರ್​. ರೆಹಮಾನ್​, ಕೃತಿ ಸನೋನ್​, ಶ್ರೀಯಾ ಶರಣ್​, ನೋರಾ ಫತೇಹಿ, ಮೌನಿ ರಾಯ್​, ಜಾಕ್ವೆಲಿನ್​ ಫರ್ನಾಂಡಿಸ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು 2023ನೇ ಸಾಲಿನ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಮೆರುಗು ಹೆಚ್ಚಿಸಿದ್ದಾರೆ.

ಆಲಿಯಾ ಭಟ್​ ಪರವಾಗಿ ನಿರ್ಮಾಪಕ ಜಯಂತಿ ಲಾಲ್​ ಗಡಾ ಅವರು ಐಫಾ ಪ್ರಶಸ್ತಿ ಸ್ವೀಕರಿಸಿದರು. ಕಾರಣಾಂತರಗಳಿಂದ ಆಲಿಯಾ ಅವರು ಐಫಾ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ‘ಜುಗ್​ ಜುಗ್​ ಜಿಯೋ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅನಿಲ್​ ಕಪೂರ್ ಅವರು ಅತ್ಯುತ್ತಮ ‘ಪೋಷಕ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿನ ಅಭೂತಪೂರ್ವ ಸಾಧನೆಗಾಗಿ ಕಮಲ್​ ಹಾಸನ್​ ಅವರಿಗೆ ಐಫಾ ಪ್ರಶಸ್ತಿ ನೀಡಲಾಗಿದೆ. ಎಲ್ಲರೂ ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿದ್ದಾರೆ. ಕಮಲ್​ ಹಾಸನ್​ ಅವರಿಗೆ ಎ.ಆರ್​. ರೆಹಮಾನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2023ನೇ ಸಾಲಿನ ಐಫಾ ಪ್ರಶಸ್ತಿ ಪಡೆದವರ ಪಟ್ಟಿ:

ಅತ್ಯುತ್ತಮ ನಟ: ಹೃತಿಕ್​ ರೋಷನ್​ (ವಿಕ್ರಂ ವೇದ)

ಅತ್ಯುತ್ತಮ ನಟಿ: ಆಲಿಯಾ ಭಟ್​ (ಗಂಗೂಬಾಯಿ ಕಾಠಿಯಾವಾಡಿ)

ಅತ್ಯುತ್ತಮ ಪೋಷಕ ನಟ: ಅನಿಲ್​ ಕಪೂರ್​ (ಜುಗ್​ ಜುಗ್​ ಜಿಯೋ)

ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್​ (ಬ್ರಹ್ಮಾಸ್ತ್ರ)

ಅತ್ಯುತ್ತಮ ಗಾಯಕ: ಅರಿಜಿತ್​ ಸಿಂಗ್​ (ಕೇಸರಿಯಾ..)

ಅತ್ಯುತ್ತಮ ಪೋಷಕ ನಟಿ: ಮೌನಿ ರಾಯ್​ (ಬ್ರಹ್ಮಾಸ್ತ್ರ)

ಅತ್ಯುತ್ತಮ ಹೊಸ ನಟ: ಬಬಿಲ್​ ಖಾನ್​ (ಕಲಾ)

ಅತ್ಯುತ್ತಮ ಹೊಸ ನಟ: ಶಾಂತನು ಮಹೇಶ್ವರಿ (ಗಂಗೂಬಾಯಿ ಕಾಠಿಯಾವಾಡಿ)

ಅತ್ಯುತ್ತಮ ಸಿನಿಮಾ: ದೃಶ್ಯಂ 2

ಅತ್ಯುತ್ತಮ ನಿರ್ದೇಶನ: ಆರ್​. ಮಾಧವನ್​ (ರಾಕೆಟ್ರಿ ದಿ ನಂಬಿ ಎಫೆಕ್ಟ್​)

ಅತ್ಯುತ್ತಮ ಸಂಗೀತ ನಿರ್ದೇಶಕ: ಪ್ರೀತಮ್​ (ಬ್ರಹ್ಮಾಸ್ತ್ರ)

ಅತ್ಯುತ್ತಮ ಸಾಹಿತ್ಯ: ಅಮಿತಾಭ್​ ಭಟ್ಟಾಚಾರ್ಯ (ಕೇಸರಿಯಾ..)

 

ಇದನ್ನೂ ಓದಿ: Vicky Kaushal: ‘ಆ ವಿಚಾರ ಮಾತಾಡೋದ್ರಲ್ಲಿ ಅರ್ಥವೇ ಇಲ್ಲ’: ಸಲ್ಮಾನ್​ ಖಾನ್​ ಬಾಡಿ ಗಾರ್ಡ್​ ವರ್ತನೆ ಬಗ್ಗೆ ವಿಕ್ಕಿ ಕೌಶಲ್​ ಪ್ರತಿಕ್ರಿಯೆ

ತಾಂತ್ರಿಕ ವಿಭಾಗದಲ್ಲಿ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗಳು ಈ ಸಿನಿಮಾದ ಪಾಲಾಗಿವೆ. ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ‘ವಿಕ್ರಂ ವೇದ’ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಸಂಕಲನ ಪ್ರಶಸ್ತಿ ‘ದೃಶ್ಯಂ 2’ ಚಿತ್ರಕ್ಕೆ ಒಲಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:14 am, Sun, 28 May 23