ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣ: ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ

ಹಲವು ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ ಜೈಲು ಸೇರಿದ್ದಾನೆ. ಆತನ ಜೊತೆ ಆಪ್ತವಾಗಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮೇಲೂ ಆರೋಪ ಇದೆ. ಆದರೆ ಈಗ ಅವರು ಅಪ್ರೂವರ್ ಆಗಲು ತೀರ್ಮಾನಿಸಿದ್ದಾರೆ. ಇದರಿಂದ ಸುಕೇಶ್ ಚಂದ್ರಶೇಖರ್​ಗೆ ಸಂಕಷ್ಟ ಹೆಚ್ಚಲಿದೆ.

ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣ: ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ
Jacqueline Fernandez, Sukesh Chandrasekhar

Updated on: Apr 17, 2026 | 4:56 PM

ಬಹುಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈಗ ಈ ಪ್ರಕರಣದಲ್ಲಿ ಅಪ್ರೂವರ್ (Approver) ಆಗಲು ಇಚ್ಛಿಸಿದ್ದಾರೆ. ದೆಹಲಿ ನ್ಯಾಯಾಲಯದ ಮುಂದೆ ಅವರು ಈ ವಿಷಯ ತಿಳಿಸಿದ್ದಾರೆ. ಇದರಿಂದ ಪ್ರಕರಣದ ಗತಿಯೇ ಬದಲಾಗುವ ಸಾಧ್ಯತೆ ಇದೆ. ಜಾಕ್ವೆಲಿನ್ (Jacqueline Fernandez) ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ, ಮೊದಲು ಜಾರಿ ನಿರ್ದೇಶನಾಲಯಕ್ಕೆ (ED) ಈ ಬಗ್ಗೆ ಅಧಿಕೃತವಾಗಿ ವಿನಂತಿ ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಈಗ ಜೈಲಿನಲ್ಲಿದ್ದಾನೆ.

ನಿಯಮದ ಪ್ರಕಾರ, ತನಿಖಾ ಸಂಸ್ಥೆಯು ಮೊದಲು ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು. ನಂತರ ಅವರನ್ನು ಅಪ್ರೂವರ್ ಆಗಿ ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ. ಸುಕೇಶ್ ಚಂದ್ರಶೇಖರ್ ಕಡೆಯಿಂದ ಜಾಕ್ವೆಲಿನ್ ಸುಮಾರು 7 ಕೋಟಿ ರೂಪಾಯಿ ಮೌಲ್ಯದ ದುಬಾರಿ ಆಭರಣಗಳು, ಬಟ್ಟೆ ಮತ್ತು ವಾಹನಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪ ಇದೆ.

ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಬಂಧನವಾದ ನಂತರ ಜಾಕ್ವೆಲಿನ್ ಅವರು ತಮ್ಮ ಮೊಬೈಲ್‌ನಲ್ಲಿದ್ದ ಡೇಟಾವನ್ನು ಡಿಲೀಟ್ ಮಾಡಿದ್ದಾರೆ ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ಹೈ ಪ್ರೊಫೈಲ್ ವ್ಯಕ್ತಿಗಳಿಗೆ ವಂಚಿಸಿ ಸುಕೇಶ್ ಒಟ್ಟು 215 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದ ಎನ್ನಲಾಗಿದೆ.

‘ಸುಕೇಶ್ ಚಂದ್ರಶೇಖರ್ ಒಬ್ಬ ಉದ್ಯಮಿ ಎಂದು ನಂಬಿಸಿ ನನಗೆ ಮೋಸ ಮಾಡಿದ್ದಾನೆ. ಆತನ ಅಪರಾಧ ಹಿನ್ನೆಲೆಯ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ’ ಎಂದು ಜಾಕ್ವೆಲಿನ್ ಆರಂಭದಿಂದಲೂ ವಾದಿಸುತ್ತಿದ್ದಾರೆ. ಆದರೆ, ಇಡಿ ಮಾತ್ರ ಅವರನ್ನು ಈ ಪ್ರಕರಣದಲ್ಲಿ ಸಹ-ಆರೋಪಿ ಎಂದು ಹೆಸರಿಸಿದೆ. ಈಗ ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧರಿಸಿದ್ದಾರೆ.

ಉದನ್ನೂ ಓದಿ: ರಕ್ಕಮ್ಮನ ಖಾಸಗಿ ವಿಡಿಯೋ ಲೀಕ್​ ಮಾಡ್ತೀನಿ ಅಂತ ಬೆದರಿಕೆ ಹಾಕಿದ ಸುಕೇಶ್​ ಚಂದ್ರಶೇಖರ್​

ಜೈಲಿನಲ್ಲಿದ್ದರೂ ಸುಕೇಶ್ ಪದೇ ಪದೇ ಜಾಕ್ವೆಲಿನ್‌ಗೆ ಪ್ರೇಮ ಪತ್ರಗಳನ್ನು ಬರೆಯುವ ಮೂಲಕ ತಾನು ಆಕೆಯ ಬಾಯ್‌ಫ್ರೆಂಡ್ ಎಂದು ಹೇಳಿಕೊಳ್ಳುತ್ತಿದ್ದಾನೆ. ಕಳೆದ ವರ್ಷ ಜಾಕ್ವೆಲಿನ್ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈಗ ಜಾಕ್ವೆಲಿನ್ ಅವರೇ ಸಾಕ್ಷಿಯಾಗಲು ಮುಂದೆ ಬಂದಿರುವುದರಿಂದ ಸುಕೇಶ್‌ಗೆ ಸಂಕಷ್ಟ ತಂದೊಡ್ಡುವ ಲಕ್ಷಣಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us