ಜಾವೇದ್ ಅಖ್ತರ್, ಬಾಲಿವುಡ್ನ ದಿಗ್ಗಜ ಬರಹಗಾರ. ಬಾಲಿವುಡ್ಗೆ ಹಲವು ಅತ್ಯುತ್ತಮ ಸಿನಿಮಾ ಹಾಗೂ ಹಾಡುಗಳನ್ನು ಕೊಟ್ಟಿರುವ ಅಪ್ರತಿಮ ಬರಹಗಾರ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಜೊತೆ ಸೇರಿ ಇವರು ಸೃಷ್ಟಿಸಿರುವ ಅದ್ಭುತ ಕತೆ ಮತ್ತು ಹಾಡುಗಳು ಒಂದೆರಡಲ್ಲ. ಸಲೀಂ-ಜಾವೇದ್ ಜೋಡಿಯ ಹೆಸರು ಹೀರೋ ಹೆಸರಿಗಿಂತಲೂ ಮೊದಲ ಹಾಕುತ್ತಿದ್ದ ಕಾಲವಿತ್ತು. ಸಲೀಂ-ಜಾವೇದ್ ಕತೆ ಬರೆದಿದ್ದಾರೆಂದು ತಿಳಿದರೆ ಸಿನಿಮಾ ಓಡುತ್ತಿತ್ತು, ಅಮಿತಾಬ್ ಬಚ್ಚನ್ಗಿಂತಲೂ ಹೆಚ್ಚು ಸಂಭಾವನೆಯನ್ನು ಈ ಜೋಡಿ ಪಡೆಯುತ್ತಿತ್ತು. ಕನ್ನಡದಲ್ಲಿ ಎರಡು ಸಿನಿಮಾಗಳಿಗೆ ಇವರು ಕತೆ ಬರೆದಿದ್ದು, ಎರಡೂ ಸಿನಿಮಾಗಳು ಸಹ ಬ್ಲಾಕ್ ಬಸ್ಟರ್ ಆಗಿವೆ.
ಜಾವೇದ್ ಅಖ್ತರ್ ಚಿತ್ರಕತೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆಯುತ್ತಾರೆ. ಈಗಲೂ ಸಹ ಜಾವೇದ್ ಅಖ್ತರ್ ಬಾಲಿವುಡ್ನ ಬಲು ಬೇಡಿಕೆಯ ಚಿತ್ರ ಸಾಹಿತಿ. ಆದರೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿರುವಂತೆ ಕರಣ್ ಜೋಹರ್ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು ಕೇಳಿ, ಹೆಸರು ಇಷ್ಟವಾಗದೆ ಕರಣ್ ಜೋಹರ್ ಅನ್ನು ಬೈದು ಕಳಿಸಿದ್ದರಂತೆ. ಆದರೆ ಆ ನಂತರ ಅಯ್ಯೋ ಆ ಸಿನಿಮಾ ಬಿಡಬಾರದಿತ್ತು ಎಂದು ಕೊಂಡರಂತೆ.
70ರ ದಶಕದಿಂದಲೂ ಜಾವೇದ್ ಅಖ್ತರ್ ಬಾಲಿವುಡ್ನ ಅತ್ಯಂತ ಬೇಡಿಕೆಯ ಚಿತ್ರ ಸಾಹಿತಿ 80ರ ದಶಕದಿಂದ ಗೀತ ರಚನೆಯನ್ನೂ ಆರಂಭಿಸಿದ್ದರು. ಆಗಿನಿಂದಲೂ ಜಾವೇದ್ ಅಖ್ತರ್ ಬೇಡಿಕೆಯ ಗೀತ ರಚನೆಕಾರ. ಎಲ್ಲರೂ ತಮ್ಮ ಸಿನಿಮಾಕ್ಕೆ ಜಾವೇದ್ ಅಖ್ತರ್ ಹಾಡು ಬರೆಯಬೇಕೆಂದು ಕೋರಿಕೊಳ್ಳುತ್ತಿದ್ದರು. ಆದರೆ 90ರ ದಶಕದಲ್ಲಿ ಬಾಲಿವುಡ್ನಲ್ಲಿ ಕೆಟ್ಟ ಸಂಸ್ಕೃತಿಯೊಂದು ಆರಂಭವಾಯ್ತು. ಅಶ್ಲೀಲ ಹಾಡುಗಳನ್ನು, ಡಬಲ್ ಮೀನಿಂಗ್ ಹಾಡುಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳಲು ಆರಂಭಿಸಲಾಯ್ತು. ಇದು ಜಾವೇದ್ ಅಖ್ತರ್ಗೆ ಸ್ವಲ್ಪವೂ ಇಷ್ಟವಿರಲಿಲ್ಲ.
ಇದನ್ನೂ ಓದಿ:‘ಜಿಗ್ರಾ’ ಚಿತ್ರದಿಂದ ನಷ್ಟ ಅನುಭವಿಸಿದ ಕರಣ್ ಜೋಹರ್, ಆಲಿಯಾ?
ಅದೇ ಸಮಯದಲ್ಲಿ ಕರಣ್ ಜೋಹರ್ ತಮ್ಮ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಮೊದಲು ಕರಣ್, ಜಾವೇದ್ ಅವರ ಬಳಿ ಬಂದು ಹಾಡು ಬರೆಯಲು ಮನವಿ ಮಾಡಿದರು ಅಂತೆಯೇ ಸಿನಿಮಾದ ಮೊದಲ ಹಾಡಾಗ ‘ಕೋಯಿ ಮಿಲ್ ಗಯಾ, ಮೇತೊ ಖಿಲ್ ಗಯಾ’ ಹಾಡನ್ನು ಜಾವೇದ್ ಅಖ್ತರ್ ಬರೆದರು. ಆ ಹಾಡು ಬರೆದಾದ ಬಳಿಕ ಸಿನಿಮಾಕ್ಕೆ ‘ಕುಚ್ ಕುಚ್ ಹೋತಾ ಹೈ’ ಎಂದು ಹೆಸರಿಡಲಾಯ್ತು. ಸಿನಿಮಾದ ಹೆಸರು ಕೇಳಿದ ಜಾವೇದ್, ಇದ್ಯಾವುದೋ ಡಬಲ್ ಮಿನಿಂಗ್ ಹೆಸರು ಇಟ್ಟಿದ್ದಾರೆ, ಸಿನಿಮಾದಲ್ಲಿಯೂ ಸಹ ಅಶ್ಲೀಲ ರೊಮ್ಯಾಂಟಿಕ್ ಸೀನ್ಗಳನ್ನು ಇಟ್ಟಿರುತ್ತಾರೆ ಇದಕ್ಕೆ ನಾನು ಕೆಲಸ ಮಾಡುವುದು ಬೇಡ ಎಂದು ನಿರ್ಧರಿಸಿ, ಕರಣ್ ಜೋಹರ್ಗೆ ಕೆಟ್ಟ ಹೆಸರು ಸಿನಿಮಾಕ್ಕೆ ಇಟ್ಟಿದ್ದೀಯ ಎಂದು ಬೈದು ಕಳಿಸಿದರಂತೆ.
ಅಸಲಿಗೆ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ ಎಲ್ಲ ಹಾಡುಗಳನ್ನು ಜಾವೇದ್ ಅಖ್ತರ್ ಬರೆಯಬೇಕಿತ್ತು, ಆದರೆ ಜಾವೇದ್ ಅವರ ತಪ್ಪು ಕಲ್ಪನೆಯಿಂದ ಆ ಸಿನಿಮಾದ ಒಂದು ಹಾಡನ್ನಷ್ಟೆ ಬರೆಯುವಂತಾಯ್ತು. ಹಾಗಿದ್ದರೂ ಸಹ ಆ ಸಿನಿಮಾದ ಎಲ್ಲಾ ಹಾಡುಗಳು ಬ್ಲಾಕ್ ಬಸ್ಟರ್ ಆದವು. ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು. ಸಿನಿಮಾ ಉಳಿದ ಹಾಡುಗಳನ್ನು ಸಮೀರ್ ಬರೆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ