‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ?’: ಶಾರುಖ್​ ಖಾನ್​ ಕೇಳಿದ ಈ ಪ್ರಶ್ನೆಗೆ 30 ದಿನದಲ್ಲಿ ಸಿಗಲಿದೆ ಉತ್ತರ

Shah Rukh Khan New Movie: ಈವರೆಗೂ ಅನೇಕ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಶಾರುಖ್​ ಖಾನ್​ ಅವರು ಜನರನ್ನು ರಂಜಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ನೆಗೆಟಿವ್​ ಶೇಡ್​ ಇದ್ದ ಉದಾಹರಣೆಯೂ ಇದೆ.

‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ?’: ಶಾರುಖ್​ ಖಾನ್​ ಕೇಳಿದ ಈ ಪ್ರಶ್ನೆಗೆ 30 ದಿನದಲ್ಲಿ ಸಿಗಲಿದೆ ಉತ್ತರ
ಶಾರುಖ್​ ಖಾನ್​

Updated on: Aug 07, 2023 | 8:46 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ಪ್ರಶ್ನೆ ಕೇಳಿದ್ದಾರೆ. ‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ?’ ಎಂಬ ಪ್ರಶ್ನೆಯನ್ನು ಅವರು ಅಭಿಮಾನಿಗಳ ಎದುರು ಇಟ್ಟಿದ್ದಾರೆ. ಹಾಗಂತ ಇದು ಅವರ ವೈಯಕ್ತಿಕ ಜೀವನಕ್ಕೆ ಅಥವಾ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಬದಲಿಗೆ, ಸಿನಿಮಾಗೆ ಸಂಬಂಧಿಸಿದ್ದು. ಹೌದು, ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ (Jawan Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಅವರಿಗೆ ಡಿಫರೆಂಟ್​ ಗೆಟಪ್​ಗಳಿವೆ. ಈವರೆಗೂ ಅನೇಕ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಶಾರುಖ್​ ಖಾನ್​ ಅವರು ಜನರನ್ನು ರಂಜಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ನೆಗೆಟಿವ್​ ಶೇಡ್​ ಇದ್ದ ಉದಾಹರಣೆಯೂ ಇದೆ. ಈಗ ಅವರು ‘ಜವಾನ್​’ (Jawan) ಸಿನಿಮಾದಲ್ಲೂ ನೆಗೆಟಿವ್​ ರೋಲ್​ ಮಾಡಿದ್ದಾರಾ ಎಂಬ ಅನುಮಾನ ಮೂಡುವ ರೀತಿಯಲ್ಲಿ ಈ ಪೋಸ್ಟ್​ ಮಾಡಿದ್ದಾರೆ.

‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರು ಬೋಳು ತಲೆಯ ಗೆಟಪ್​ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರಿವ್ಯೂ ವಿಡಿಯೋದಲ್ಲಿ ಆ ಲುಕ್​ ಬಹಿರಂಗ ಆಗಿತ್ತು. ಈಗ ಅದೇ ಗೆಟಪ್​ನ ಇನ್ನೊಂದು ಪೋಸ್ಟರ್​ ಅನ್ನು ಶಾರುಖ್​ ಖಾನ್​ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ? ತಿಳಿದುಕೊಳ್ಳಲು ಇನ್ನು 30 ದಿನ ಇದೆ, ರೆಡಿನಾ’ ಎಂದು ಶಾರುಖ್​ ಖಾನ್​ ಅವರ ಬರೆದುಕೊಂಡಿದ್ದಾರೆ.

ಶಾರುಖ್​ ಖಾನ್​ ಒಡೆತನದ ‘ರೆಡ್​ ಚಿಲ್ಲೀಸ್ ಎಂಟರ್​ಟೇನ್ಮೆಂಟ್​​’ ಮೂಲಕ ‘ಜವಾನ್’ ಸಿನಿಮಾ ನಿರ್ಮಾಣ ಆಗಿದೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರವನ್ನು ಮಾಡಲಾಗಿದೆ. ಕಲಾವಿದರ ಸಂಭಾವನೆಗಾಗಿ ನೂರಾರು ಕೋಟಿ ರೂಪಾಯಿ ಸುರಿಯಲಾಗಿದೆ. ಶಾರುಖ್​ ಖಾನ್ ಜೊತೆ ವಿಜಯ್​ ಸೇತುಪತಿ, ನಯನಾತಾರಾ, ಸಾನ್ಯಾ ಮಲ್ಹೋತ್ರಾ, ದೀಪಿಕಾ ಪಡುಕೋಣೆ ಮುಂತಾದವರು ಅಭಿನಯಿಸಿದ್ದಾರೆ. ಈ ಎಲ್ಲ ಕಲಾವಿದರಿಗೂ ಬಹುಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಜೋರಾಯ್ತು ‘ಜವಾನ್​’ ಚಿತ್ರದ ಹವಾ; ಕೆಲವೇ ನಿಮಿಷಗಳಲ್ಲಿ ಮಿಲಿಯನ್​ ದಾಟಿದ ‘ಜಿಂದಾ ಬಂದಾ’ ಹಾಡಿನ ವೀಕ್ಷಣೆ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಅವರು ‘ಜವಾನ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗಾಗಲೇ ಕಾಲಿವುಡ್​ನಲ್ಲಿ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ‘ಜವಾನ್​’ ಮೂಲಕ ಬಾಲಿವುಡ್​ನಲ್ಲೂ ಅವರು ಮೋಡಿ ಮಾಡುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳದ್ದು. ಸೆಪ್ಟೆಂಬರ್ 7ರಂದು ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ‘ಪಠಾಣ್​’ ಚಿತ್ರದ ರೀತಿಯೇ ‘ಜವಾನ್​’ ಕೂಡ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us