ನಟಿ ಕಂಗನಾ ರಣಾವತ್ (Kangana Ranaut) ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಂಗನಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಧರ್ಮದ ವಿಚಾರವನ್ನು ಎಳೆದು ತರೋದು ಕಾಮನ್. ಅದೇ ರೀತಿ ಕಂಗನಾ ಅವರು ಧರ್ಮದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಅವರು ಹಿಂದೂ ರಾಷ್ಟ್ರದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಕುಲುವಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಕಂಗನಾ, ‘1947 ರಲ್ಲಿ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ರಚಿಸಲಾಯಿತು. ಹಾಗಾದರೆ ಆ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಿಲ್ಲ’ ಎಂದು ಪ್ರಶ್ನೆ ಮಾಡಿದ್ದಾರೆ.
‘ನಮ್ಮ ಪೂರ್ವಜರು ಮೊಘಲರ ಗುಲಾಮಗಿರಿ, ನಂತರ ಬ್ರಿಟಿಷರ ಗುಲಾಮಗಿರಿ ಮತ್ತು ನಂತರ ಕಾಂಗ್ರೆಸ್‌ನ ದುರಾಡಳಿತವನ್ನು ನೋಡಿದ್ದಾರೆ. ಆದರೆ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ. ಚಿಂತನೆಯ ಸ್ವಾತಂತ್ರ್ಯ, ಸನಾತನ ಸ್ವಾತಂತ್ರ್ಯ, ನಮ್ಮ ಧರ್ಮವನ್ನು ಸ್ವೀಕರಿಸುವ ಸ್ವಾತಂತ್ರ್ಯ, ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಸ್ವಾತಂತ್ರ್ಯ ನಮಗೆ ಸಿಕ್ಕಿದೆ. 1947ರಲ್ಲಿ ಪಾಕಿಸ್ತಾನವನ್ನು ತನ್ನ ಧರ್ಮದ ಆಧಾರದ ಮೇಲೆ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಿದಾಗ, ಭಾರತವನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಿಲ್ಲ? ನಾವು ಅದನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ’ ಎಂದಿದ್ದಾರೆ ಕಂಗನಾ.
ಸದ್ಯ ಕಂಗನಾ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ‘ಚುನಾವಣಾ ಸಂದರ್ಭದಲ್ಲಿ ಕಂಗನಾ ಈ ರೀತಿಯ ಹೆಳಿಕೆ ನೀಡುತ್ತಾರೆ. ಆದರೆ, ಹಿಂದೂ ರಾಷ್ಟ್ರ ಎಂದು ಅವರು ಘೋಷಿಸುವುದಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಹಿಂದೆ ಕೂಡ ಕಂಗನಾ ಇದೇ ರೀತಿಯ ಹೇಳಿಕೆ ನೀಡಿದ್ದರು. ನವೆಂಬರ್ 2021ರಲ್ಲಿ, ‘ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲಿ ಅಲ್ಲ, 2014ರಲ್ಲಿ’ ಎಂದು ಹೇಳಿದ್ದರು. ಆ ಹೇಳಿಕೆಯಿಂದ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ಅವರ ಎದುರು ಕಂಗನಾ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರಕ್ಕೆ ಜೂನ್ 1ರಂದು ಮತದಾನ ನಡೆಯಲಿದೆ. ಚುನಾವಣಾ ಪ್ರಚಾರದ ವೇಳೆ ಇಬ್ಬರೂ ಪರಸ್ಪರ ಟೀಕೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ‘ಇಂಡಸ್ಟ್ರಿಯಲ್ಲಿ ಅಮಿತಾಭ್ ಬಳಿಕ ಅತಿ ಹೆಚ್ಚು ಗೌರವಿಸಲ್ಪಟ್ಟ ನಟಿ ನಾನು’; ಕಂಗನಾ ರಣಾವತ್
ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಂಗನಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ರ‍್ಯಾಲಿ ವೇಳೆ ಕಂಗನಾ ದೊಡ್ಡ ತಪ್ಪು ಮಾಡಿದ್ದಾರೆ. ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರ ಹೆಸರನ್ನು ತೆಗೆದುಕೊಳ್ಳುವ ಬದಲು, ಅವರು ತಮ್ಮ ಪಕ್ಷದಿಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೆಸರನ್ನು ತಪ್ಪಾಗಿ ತೆಗೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:21 pm, Mon, 13 May 24