
ಕಂಗನಾ ರನೌತ್ ಬಾಲಿವುಡ್ನ (Bollywood) ಪ್ರತಿಭಾವಂತ ನಟಿ. ಈಗ ಬಿಜೆಪಿ ಪಕ್ಷದಿಂದ ಗೆದ್ದು ಸಂಸದೆಯೂ ಆಗಿದ್ದಾರೆ. ಕಂಗನಾ ಅದ್ಭುತ ನಟಿಯೇನೋ ಹೌದು ಆದರೆ ಆಗಾಗ್ಗೆ ಅವರು ನೀಡುವ ಹೇಳಿಕೆಗಳು ವಿವಾದಗಳಾಗುತ್ತವೆ. ಕೆಲವೊಮ್ಮೆ ತಮ್ಮ ಹೇಳಿಕೆಗಳಿಂದ ನಗೆಪಾಟಲಿಗೂ ಸಹ ಗುರಿಯಾಗಿರುವುದುಂಟು. ಚುನಾವಣೆ ಸಮಯದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಾ, ‘ಬಾಲಿವುಡ್ನಲ್ಲಿ ಅಮಿತಾಬ್ ಬಚ್ಚನ್ ಹೊರತಾಗಿ ಇನ್ಯಾರಿಗಾದರೂ ಹೆಚ್ಚು ಗೌರವ ಸಿಗುತ್ತದೆ ಎಂದರೆ ಅದು ನನಗೆ ಮಾತ್ರ’ ಎಂದಿದ್ದರು. ಕಂಗನಾರ ಈ ಹೇಳಿಕೆ ಟ್ರೋಲ್ ಆಗಿತ್ತು. ಇದೀಗ ಕಂಗನಾ, ಶಾರುಖ್ ಖಾನ್ ಬಗ್ಗೆ ನೀಡಿರುವ ಹೇಳಿಕೆಯೂ ಸಹ ಸುದ್ದಿ ಆಗಿದೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ಕಂಗನಾ ರನೌತ್ ತಮ್ಮನ್ನು ಶಾರುಖ್ ಖಾನ್ ಜೊತೆಗೆ ಹೋಲಿಕೆ ಮಾಡಿಕೊಂಡಿದ್ದಾರೆ. ‘ನಾನು ಹೇಗೆ ಇಷ್ಟು ಯಶಸ್ಸು ಗಳಿಸಿದೆ. ಬಹುಷಃ ಹಳ್ಳಿಯೊಂದರಿಂದ ಬಂದು ಇಷ್ಟು ದೊಡ್ಡ ಯಶಸ್ಸು ಗಳಿಸಿದವರು ಬಾಲಿವುಡ್ನಲ್ಲಿ ಯಾರೂ ಇಲ್ಲ. ಶಾರುಖ್ ಖಾನ್ ಅವರು ಡೆಲ್ಲಿಯಿಂದ ಬಂದವರು, ಅವರು ಕಾನ್ವೆಂಟ್ ಶಿಕ್ಷಣ ಪಡೆದು ಬಂದವರು. ಆದರೆ ನಾನು ಹಳ್ಳಿಯಿಂದ ಬಂದವಳು. ನನ್ನ ಹಳ್ಳಿಯ ಹೆಸರು ಸಹ ಎಷ್ಟೋ ಜನರಿಗೆ ಗೊತ್ತಿಲ್ಲ’ ಎಂದಿದ್ದಾರೆ ಕಂಗನಾ ರನೌತ್.
‘ಸಣ್ಣ ಹಳ್ಳಿ ಬಾಮ್ಲಾದಿಂದ ಬಂದು ನಾನು ಇಷ್ಟು ದೊಡ್ಡ ಸಾಧನೆ ಮಾಡಿದ್ದೇನೆ. ಬಹುಷಃ ಕೆಲವರಿಗೆ ನನ್ನ ಮಾತುಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲವೇನೋ. ಆದರೆ ನನ್ನ ಮಾತುಗಳು ಯಾವಾಗಲೂ ನೇರ. ನಾನು ಬಹಳ ಪ್ರಮಾಣಿಕವಾಗಿ ಉತ್ತರಿಸುತ್ತೇನೆ. ನನ್ನ ಬಗ್ಗೆ ನಾನು ಸಹ ಬಹಳ ಪ್ರಾಮಾಣಿಕವಾಗಿರುತ್ತೇನೆ’ ಎಂದಿದ್ದಾರೆ ನಟಿ ಕಂಗನಾ ರನೌತ್.
ಇದನ್ನೂ ಓದಿ:ಹಿರಿಯ ನಟರಿಗೆ ಶಾರುಖ್ ಖಾನ್ ಎಷ್ಟು ಗೌರವ ಕೊಡ್ತಾರೆ ನೋಡಿ
ಅಂದಹಾಗೆ ಕಂಗನಾ ರನೌತ್ ಹಿಮಾಚಲ ಪ್ರದೇಶದ ಬಾಮ್ಲಾ ಹೆಸರಿನ ಸಣ್ಣ ಪಟ್ಟಣದವರು. ಕಂಗನಾ ರನೌತ್ ಅವರ ತಂದೆ ಉದ್ಯಮಿ, ತಾಯಿ ಶಿಕ್ಷಕಿ ಆಗಿದ್ದರು. ಕಂಗನಾರ ತಾತ ಐಎಎಸ್ ಅಧಿಕಾರಿ ಆಗಿದ್ದರು. ಅವರ ಮುತ್ತಾತ ಶಾಸಕರಾಗಿದ್ದರು. ಕಂಗನಾ ಅವರ ಕುಟುಂಬ ಜಮೀನ್ದಾರ್ ಕುಟುಂಬವಾಗಿತ್ತು. ಬಾಮ್ಲಾನಲ್ಲಿ ಹವೇಲಿ ಎಂದು ಕರೆಯಲಾಗುವ ದೊಡ್ಡ ಮನೆಯಲ್ಲಿ ಅವರು ವಾಸಿಸುತ್ತಿದ್ದರು. ಆದರೆ ನಟಿಯಾಗಬೇಕೆಂದು ಹದಿಹರೆಯದಲ್ಲೇ ಮನೆ ಬಿಟ್ಟು ಮುಂಬೈಗೆ ಬಂದ ಕಂಗನಾ, ಸಾಕಷ್ಟು ಕಷ್ಟಗಳನ್ನು ಎದುರಿಸಿ ನಟಿಯಾಗಿ ಗೆದ್ದರು.
ಇನ್ನು ಶಾರುಖ್ ಖಾನ್ ದೆಹಲಿಯವರು. ಅವರ ತಾತ ಸರ್ಕಾರಿ ಎಂಜಿನಿಯರ್ ಆಗಿದ್ದರು. ಅವರು ಕರ್ನಾಟಕದಲ್ಲಿಯೂ ಕೆಲಸ ಮಾಡಿದ್ದರು. ಶಾರುಖ್ ಖಾನ್ ಅವರ ತಂದೆ ಹೋಟೆಲ್ ಉದ್ಯಮ ಹೊಂದಿದ್ದರು. ಅದಕ್ಕೂ ಮುನ್ನ ಅವರು ದೆಹಲಿಯ ಎನ್ಎಸ್ಡಿ (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ದ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ತಂದೆ 1981ರಲ್ಲೇ ನಿಧನ ಹೊಂದಿದರು. ಶಾರುಖ್ ಖಾನ್ 1991 ರಲ್ಲಿ ಧಾರಾವಾಹಿಯಲ್ಲಿ ನಟರಾದರು. ಬಳಿಕ ನಡೆದಿದ್ದೆಲ್ಲ ಇತಿಹಾಸ. ಈಗ ಭಾರತದ ಮಾತ್ರವಲ್ಲ, ಏಷ್ಯಾದ ನಂಬರ್ 1 ಸ್ಟಾರ್ ಶಾರುಖ್ ಖಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ