ಸೂಪರ್ ಹಿಟ್ ಆದ ಸಿನಿಮಾದಿಂದ ನಷ್ಟ ಅನುಭವಿಸಿದ್ದ ಕರಣ್ ಜೋಹರ್, ನಷ್ಟ ತುಂಬಿಕೊಂಡಿದ್ದು ಹೇಗೆ?

|

Updated on: May 02, 2023 | 3:09 PM

Karan Johar: ತಮ್ಮದೇ ನಿರ್ಮಾಣ ಹಾಗೂ ನಿರ್ದೇಶನದ ಸೂಪರ್ ಹಿಟ್ ಸಿನಿಮಾದಿಂದ ತಮಗೆ ನಷ್ಟವಾಗಿದ್ದರ ಬಗ್ಗೆ ಕರಣ್ ಜೋಹರ್ ಮಾತನಾಡಿದ್ದಾರೆ. ಯಾವುದು ಆ ಸಿನಿಮಾ?

ಸೂಪರ್ ಹಿಟ್ ಆದ ಸಿನಿಮಾದಿಂದ ನಷ್ಟ ಅನುಭವಿಸಿದ್ದ ಕರಣ್ ಜೋಹರ್, ನಷ್ಟ ತುಂಬಿಕೊಂಡಿದ್ದು ಹೇಗೆ?
ಕರಣ್ ಜೋಹರ್
Follow us on

ಸಿನಿಮಾ ಒಂದು ಹಿಟ್ ಆಗಿದೆ ಎಂದರೆ ಅದು ಪಕ್ಕಾ ದೊಡ್ಡ ಮೊತ್ತದ ಹಣ ಮಾಡಿರುತ್ತದೆ ಎಂದೇ ಅರ್ಥ. ಸೂಪರ್ ಹಿಟ್ ಆದ ಸಿನಿಮಾ ನಷ್ಟ ಅನುಭವಿಸಿದೆ ಎಂದರೆ ಯಾರೂ ನಂಬರು. ಆದರೆ ಚಿತ್ರರಂಗದಲ್ಲಿ ಹೀಗೆ ಆಗಿದ್ದು ಇದೆಯಂತೆ. ಸೂಪರ್ ಹಿಟ್ (Super Hit) ಎನಿಸಿಕೊಂಡ ಸಿನಿಮಾಗಳು ಸಹ ಬಾಕ್ಸ್ ಆಫೀಸ್​ನಲ್ಲಿ ಸೋತಿವೆ, ಫ್ಲಾಪ್ ಆದ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಲಾಭ ಮಾಡಿಕೊಟ್ಟಿವೆ. ಈ ಬಗ್ಗೆ ಮಾತನಾಡಿರುವ ಬಾಲಿವುಡ್​ನ ಜನಪ್ರಿಯ ನಿರ್ಮಾಪಕ (Producer), ನಿರ್ದೇಶಕ ಕರಣ್ ಜೋಹರ್ (Karan Johar), ತಾವೇ ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಸಿನಿಮಾ ಒಂದು ಸೂಪರ್ ಹಿಟ್ ಆದರೂ ದೊಡ್ಡ ಮೊತ್ತದ ಹಣ ಕಳೆದುಕೊಂಡ ಗುಟ್ಟು ರಟ್ಟು ಮಾಡಿದ್ದಾರೆ. ಆ ಸಿನಿಮಾದಿಂದ ಕಳೆದುಕೊಂಡ ಹಣವನ್ನು ಹೇಗೆ ಮರಳಿ ಗಳಿಸಿದ್ದು ಎಂಬುದನ್ನು ಸಹ ಅವರು ಹೇಳಿದ್ದಾರೆ.

2012 ರಲ್ಲಿ ಕರಣ್ ಜೋಹರ್ ‘ಸ್ಟುಡೆಂಟ್ ಆಫ್ ದಿ ಇಯರ್‘ (Student Of The Year) ಹೆಸರಿನ ಯೂಥ್​ಫುಲ್ ಸಿನಿಮಾ ಮಾಡಿದ್ದರು. ಇಂದು ಬಾಲಿವುಡ್​ನ ಸ್ಟಾರ್​ಗಳಾಗಿರುವ ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್ ಮೂವರಿಗೂ ಇದು ಮೊತ್ತ ಮೊದಲ ಸಿನಿಮಾ. ಈ ಸಿನಿಮಾವನ್ನು ಕರಣ್ ಒಡೆತನದ ಧರ್ಮಾ ಪ್ರೊಡಕ್ಷನ್ ನಿರ್ಮಾಣ ಮಾಡಿತ್ತು, ಶಾರುಖ್ ಖಾನ್​ರ ರೆಡ್ ಚಿಲ್ಲೀಸ್ ಸಹ ನಿರ್ಮಾಣ ಮಾಡಿತ್ತು. ಸಿನಿಮಾ ಬಿಡುಗಡೆ ಆದಾಗ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಮೂವರೂ ಮುಖ್ಯ ನಟರು ಸ್ಟಾರ್​ಗಳಾದರು, ಬಾಲಿವುಡ್​ ತುಂಬೆಲ್ಲ ಸಿನಿಮಾದ ಬಗ್ಗೆ ಮಾತುಗಳು, ಚಿತ್ರಮಂದಿರಗಳು ಕಾಲೇಜು ಯುವಕ-ಯುವತಿಯರಿಂದ ತುಂಬಿದ್ದವು ಹೀಗಿದ್ದರೂ ಸಹ ಸಿನಿಮಾದಿಂದ ನಷ್ಟವಾಯಿತಂತೆ.

ಸಿನಿಮಾ ಬ್ಯುಸಿನೆಸ್​ಗೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರಣ್ ಜೋಹರ್, ”ಆ ಸಿನಿಮಾ ಸೂಪರ್ ಹಿಟ್ ಆಯಿತು. ಸುಮಾರು 70 ಕೋಟಿ ಗಳಿಕೆ ಮಾಡಿತು ಹಾಗಿದ್ದರೂ ನನಗೆ ಸುಮಾರು 20-25 ಕೋಟಿ ನಷ್ಟವಾಯಿತು. ಅದಕ್ಕೆ ಕಾರಣ ಆ ಸಿನಿಮಾದ ಮೇಲೆ ನಾನು ದೊಡ್ಡ ಮೊತ್ತ ಖರ್ಚು ಮಾಡಿದ್ದೆ. ಆಲಿಯಾ, ಸಿದ್ಧಾರ್ಥ್ ಹಾಗೂ ವರುಣ್ ಸ್ಟಾರ್​ಗಳಾಗುತ್ತಾರೆ ಎಂದು ನಂಬಿಕೆ ಇತ್ತು, ಹಾಗಾಗಿ ದೊಡ್ಡ ಮೊತ್ತ ಖರ್ಚು ಮಾಡಿ ಸಿನಿಮಾ ಮಾಡಿದೆ. ಅವರನ್ನು ಅದ್ಧೂರಿಯಾಗಿ ಲಾಂಚ್ ಮಾಡುವ ಉದ್ದೇಶ ನನಗಿತ್ತು. ಹಾಗಾಗಿ ಸಿನಿಮಾ ಹಿಟ್ ಆದರೂ ಸಹ ಒಟ್ಟು ಬಂಡವಾಳಕ್ಕಿಂತಲೂ 15-20 ಕೋಟಿ ಕಡಿಮೆ ಹಣ ವಾಪಸ್ಸಾಗಿತ್ತು” ಎಂದಿದ್ದಾರೆ.

ಆದರೆ ಆ ನಷ್ಟವನ್ನು ಕರಣ್ ಮುಂದಿನ ಸಿನಿಮಾಗಳಲ್ಲಿ ತುಂಬಿಕೊಂಡರಂತೆ ಅದೂ ಹೇಗೆಂದರೆ, ಆಲಿಯಾ, ಸಿದ್ಧಾರ್ಥ್, ವರುಣ್ ಜೊತೆಗೆ ಮೊದಲೇ ತಲಾ ಮೂರು-ಮೂರು ಸಿನಿಮಾದ ಕಾಂಟ್ರಾಕ್ಟ್ ಮಾಡಿಕೊಂಡಿದ್ದರಂತೆ. ಹಾಗಾಗಿ ಮೊದಲ ಸಿನಿಮಾ ಫ್ಲಾಪ್ ಆದರೂ ಆ ನಂತರ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಮತ್ತೆ ಹಸಿ ತೋ ಪಸಿ, ವರುಣ್ ಧವನ್-ಆಲಿಯಾ ಭಟ್ ಜೊತೆಗೆ ಬದ್ರಿನಾಥ್ ಕಿ ದುಲ್ಹನಿಯಾ, ಆಲಿಯಾ ಜೊತೆಗೆ ಟು ಸ್ಟೇಟ್ಸ್, ಸಿನಿಮಾಗಳನ್ನು ಮಾಡಿ ಸ್ಟುಡೆಂಟ್ ಆಫ್ ದಿ ಇಯರ್ ಸಿನಿಮಾದಿಂದ ಆದ ನಷ್ಟವನ್ನು ತುಂಬಿಕೊಂಡರಂತೆ.

ಹಾಗೆಂದು ಎಲ್ಲ ಸಿನಿಮಾಗಳಿಗೂ ಹೀಗೆಯೇ ನಷ್ಟ ತುಂಬಿಕೊಂಡಿದ್ದಾರೆ ಎಂದೇನೂ ಇಲ್ಲ. ಕರಣ್ ಜೋಹರ್ ಬಹಳ ಭರವಸೆ ಇಟ್ಟಿದ್ದ ಕೆಲವು ಸಿನಿಮಾಗಳು ಭಯಂಕರವಾಗಿ ಸೋತಿವೆಯಂತೆ. ಸೈಫ್ ಅಲಿ ಖಾನ್, ಕರೀನಾ ನಟಿಸಿದ್ದ ಕುರ್ಬಾನ್, ದೊಡ್ಡ ತಾರಾಗಣ ಇದ್ದ ಕಳಂಕ್ ಇನ್ನು ಕೆಲವು ಸಿನಿಮಾಗಳು ಸೋತಾಗ ಕರಣ್​ಗೆ ಭಾರಿ ನೋವಾಗಿತ್ತಂತೆ. ಆದರೆ ಇನ್ನು ಕೆಲವು ಸಿನಿಮಾಗಳಿವೆ ಅವು ಸೋಲುತ್ತವೆಂದು ಮೊದಲೇ ಗೊತ್ತಾಗಿಬಿಟ್ಟಿರುತ್ತದೆಯಂತೆ ಕರಣ್​ಗೆ ಆದರೆ ನಿರ್ಮಾಪಕನಾಗಿ ಅದನ್ನು ಬಿಡುಗಡೆ ಮಾಡಲೇಬೇಕು, ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ಹಕ್ಕುಗಳು ಇನ್ನಿತರೆಗಳ ಮೂಲಕ ಹಾಕಿರುವ ಹಣವನ್ನು ವಾಪಸ್ ಮಾಡಿಕೊಳ್ಳಲೇ ಬೇಕು ಎಂದಿದ್ದಾರೆ ಕರಣ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ