‘ಲೈಗರ್‘ (Liger) ಸಿನಿಮಾದ ಸಹ ನಿರ್ಮಾಣ ಮಾಡಿ ಭರ್ಜರಿಯಾಗಿ ಕೈ ಸುಟ್ಟುಕೊಂಟಿದ್ದ ನಟ, ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ಗೆ (Karan Johar) ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ತುಸು ಕೈ ಹಿಡಿದಿದೆ. ಆಲಿಯಾ ಭಟ್, ರಣ್ವೀರ್ ಸಿಂಗ್ ಅನ್ನು ಲೀಡ್ ನಟರನ್ನಾಗಿ ಹಾಕಿ ಸ್ವತಃ ತಾವೇ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶಿಸಿದ್ದರು. ತಮ್ಮ ಮಾಮೂಲಿ ಸ್ಟೈಲ್ನಲ್ಲಿ ಅದ್ಧೂರಿಯಾಗಿ, ಕುಟುಂಬದ ಸುತ್ತ ಸಾಗುವ ಪ್ರೇಮ ಕತೆಯನ್ನು ಕರಣ್ ಜೋಹರ್ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದರು. ಆದರೆ ತಾವು ಸಿನಿಮಾದಲ್ಲಿ ಬೇರೆ ನಿರ್ದೇಶಕರ ಸಿನಿಮಾಗಳಿಂದ ದೃಶ್ಯಗಳನ್ನು, ಐಡಿಯಾಗಳನ್ನು ಕಾಪಿ ಮಾಡಿರುವುದಾಗಿ ಸ್ವತಃ ಕರಣ್ ಒಪ್ಪಿಕೊಂಡಿದ್ದಾರೆ.
‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾವು ಎರಡು ಭಿನ್ನ ಕುಟುಂಬದ, ಹಿನ್ನೆಲೆಯುಳ್ಳ ಯುವಕ-ಯುವತಿ ಪ್ರೀತಿಸಿ, ಮದುವೆಗೆ ಕುಟುಂಬದವರನ್ನು ಒಪ್ಪಿಸಲು ಯುವಕ, ಯುವತಿಯ ಮನೆಗೆ ಯುವತಿ, ಯುವಕನ ಮನೆಗೆ ಹೋಗಿ ಕೆಲ ಕಾಲ ತಂಗಿ ಅವರೊಟ್ಟಿಗೆ ಬಾಳಿ ಅವರೊಂದಿಗೆ ಹೊಂದಿಕೆ ಸಾಧಿಸಿ ಆ ನಂತರ ಮದುವೆಗೆ ಒಪ್ಪಿಗೆ ಪಡೆವ ಕತೆಯನ್ನು ಒಳಗೊಂಡಿದೆ. ಅದ್ಧೂರಿ ಸೆಟ್ನಲ್ಲಿ ಬಹುತಾರಾಗಣದಲ್ಲಿ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿದ್ದಾರೆ.
ಸಿನಿಮಾ ಕುರಿತು ನೀಡಿರುವ ಸಂದರ್ಶನವೊಂರಲ್ಲಿ ಮಾತನಾಡಿರುವ ಕರಣ್ ಜೋಹರ್, ‘ನನ್ನ ಸಿನಿಮಾ ಕಾಪಿ ಎಂಬುದು ನೋಡಿದ ಹಲವರಿಗೆ ಗೊತ್ತಾಗಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಯಶ್ ರಾಜ್ರ ಸಿನಿಮಾದಿಂದ ಹಾಡು ಕಾಪಿ ಮಾಡಿದ್ದೇನೆ. ಹಾಗೆಯೇ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಿಂದ ಸೆಟ್ಗಳ ಐಡಿಯಾ, ಸೀನ್ ಸೆಟಪ್ಗಳನ್ನು ಕಾಪಿ ಮಾಡಿದ್ದೇನೆ” ಎಂದಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿಯವರ ಸಿನಿಮಾಗಳ ಮಾದರಿಯಲ್ಲಿಯೇ ಕಲರ್ ಥೀಮ್ ವುಳ್ಳ ಅದ್ಧೂರಿ ಸೆಟ್, ಅದ್ಧೂರಿ ನೃತ್ಯಗಳನ್ನು ಸಿನಿಮಾದಲ್ಲಿ ಕರಣ್ ಜೋಹರ್ ತೋರಿಸಿದ್ದಾರೆ. ಅದರಲ್ಲಿಯೂ ದುರ್ಗಾ ಮಾತೆಯ ಪೂಜೆಯ ಹಾಡು, ಅದಕ್ಕೆ ಹಾಕಲಾಗಿರುವ ಸೆಟ್, ಸಂಜಯ್ ಲೀಲಾ ಬನ್ಸಾಲಿಯವರ ಯಥಾವತ್ತು ನಕಲು. ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾ ನೋಡಿದ ಹಲವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಎತ್ತಿದ್ದರು. ಇದೀಗ ಕರಣ್ ಜೋಹರ್, ಸ್ವತಃ ತಾವು ಸೀನ್ಗಳನ್ನು, ಐಡಿಯಾಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ.
‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಿತ್ತು. ಈ ಸಿನಿಮಾವು ವಿಶ್ವದಾದ್ಯಂತ ಸುಮಾರು 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ರಣ್ವೀರ್, ಆಲಿಯಾ ಹೊರತಾಗಿ ಜಯಾ ಬಚ್ಚನ್, ಶಬಾನಾ ಆಜ್ಮಿ, ಧರ್ಮೇಂದ್ರ, ನೀನಾ ಗುಪ್ತಾ ಇನ್ನೂ ಹಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ