ಲೈಗರ್ ಹೀನಾಯ ಸೋಲಿನ ಬಳಿಕ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಪುರಿ ಜಗನ್ನಾಥ್
Puri Jagannath: ಲೈಗರ್ ಸಿನಿಮಾದ ಹೀನಾಯ ಸೋಲಿನ ಬಳಿಕ ನಿರ್ದೇಶಕ ಪುರಿ ಜಗನ್ನಾಥ್ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಮಾಡಿದ್ದಾರೆ.
ಪುರಿ ಜಗನ್ನಾಥ್ (Puri Jagannath) ದಕ್ಷಿಣದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಕನ್ನಡದಲ್ಲಿಯೂ ಕೆಲವು ಸಿನಿಮಾ ಮಾಡಿರುವ ಪುರಿ ಜಗನ್ನಾಥ್ ತೆಲುಗಿನ ಚಿತ್ರರಂಗದಲ್ಲಿ ಹೆಚ್ಚಿನ ಸಕ್ಸಸ್ ರೇಟ್ ಹೊಂದಿರುವವರಲ್ಲಿ ಪ್ರಮುಖರು. ಸಾಮಾನ್ಯ ಎನಿಸಬಹುದಾದ ಕತೆಗೆ ತಮ್ಮದೇ ಆದ ಭಿನ್ನ ಟಚ್ ನೀಡಿ ಅದ್ಭುತವಾಗಿ ಪ್ರಸ್ತುತಪಡಿಸುವ ಪುರಿಗೆ ಅವರದ್ದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ಆದರೆ ಪುರಿ ಜಗನ್ನಾಥ್ರ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದ ಲೈಗರ್ (Liger) ಹೀನಾಯ ಸೋಲು ಕಂಡಿತ್ತು. ಆದರೆ ಆ ಸೋಲಿನ ದೂಳು ಕೊಡವಿಕೊಂಡಿರುವ ಪುರಿ ಇದೀಗ ಹೊಸದೊಂದು ಸಿನಿಮಾ ಘೋಷಿಸಿದ್ದಾರೆ.
ಪುರಿ ಜಗನ್ನಾಥ್, ತೆಲುಗಿನ ಸ್ಟಾರ್ ನಟ ರಾಮ್ ಪೋತಿನೇನಿ ಜೊತೆ ಕೈಜೋಡಿಸಿದ್ದು, ಈ ಹಿಂದೆ ಈ ಇಬ್ಬರ ಕೈ ಹಿಡಿದಿದ್ದ ‘ಇಸ್ಮಾರ್ಟ್ ಶಂಕರ್’ ಸಿನಿಮಾವನ್ನೇ ಮುಂದುವರೆದ ಭಾಗವನ್ನು ಕಟ್ಟಿಕೊಡಲಿದ್ದಾರೆ. ಈ ಸಿನಿಮಾಕ್ಕೆ ಡಬಲ್ ಇಸ್ಮಾರ್ಟ್ ಎಂದು ಹೆಸರಿಟ್ಟಿದ್ದಾರೆ. ‘ಇಸ್ಮಾರ್ಟ್ ಶಂಕರ್’ ಸಿನಿಮಾವು 2019 ರಲ್ಲಿ ಬಿಡುಗಡೆ ಆಗಿತ್ತು, ಪೋಕರಿ ರೌಡಿಯೊಬ್ಬನ ಮೆದುಳೊಳಕ್ಕೆ ಪೊಲೀಸ್ ಅಧಿಕಾರಿಯೊಬ್ಬನ ನೆನಪುಗಳನ್ನು ವರ್ಗಾಯಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾದಲ್ಲಿ ರಾಮ್ ಪೋತಿನೇನಿ ಜೊತೆಗೆ ನಭಾ ನಟೇಶ್, ನಿಧಿ ಅಗರ್ವಾಲ್ ನಟಿಸಿದ್ದರು.
ರಾಮ್ ಪೋತಿನೇನಿ ಹುಟ್ಟುಹಬ್ಬದ ನಾಳೆಯಿದ್ದು ಇದೇ ಸಂದರ್ಭಕ್ಕಾಗಿ ಸಿನಿಮಾ ಘೋಷಣೆ ಮಾಡಲಾಗಿದೆ. ಸಿನಿಮಾದ ಸಣ್ಣ ಟೀಸರ್ ಒಂದನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಹೈದರಾಬಾದ್ ಚಾರ್ಮಿನಾರ್ ಹಿನ್ನೆಲೆಯಲ್ಲಿ ಶಿವಲಿಂಗ್ ಹಾಗೂ ತ್ರಿಶೂಲವನ್ನು ತೋರಿಸಲಾಗಿದೆ. ಸಿನಿಮಾದ ಬಿಡುಗಡೆ ದಿನವನ್ನು ಸಹ ಈಗಲೇ ಘೋಷಿಸಲಾಗಿದ್ದು ಸಿನಿಮಾವು ಮುಂದಿನ ವರ್ಷ ಮಹಾಶಿವರಾತ್ರಿಗೆ ಅಂದರೆ ಮಾರ್ಚ್ 14, 2024ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರಾಮ್ ಪೋತಿನೇನಿ ಜೊತೆಗೆ ಇನ್ನು ಯಾರ ಯಾರು ಇರಲಿದ್ದಾರೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.
ಇದನ್ನೂ ಓದಿ:‘ಲೈಗರ್’ ಸೋಲಿನ ಬಳಿಕ ಹೀನಾಯ ಪರಿಸ್ಥಿತಿ ತಲುಪಿದ ಪುರಿ ಜಗನ್ನಾಥ್; ಹುಡುಕಿದರೂ ಸಿಗ್ತಿಲ್ಲ ಹೀರೋಗಳು
ಪುರಿ ಜಗನ್ನಾಥ್ ನಿರ್ದೇಶನ ಮಾಡಿ ವಿಜಯ್ ದೇವರಕೊಂಡ, ಬಾಲಿವುಡ್ನ ಅನನ್ಯಾ ಪಾಂಡೆ ನಟಿಸಿದ್ದ ‘ಲೈಗರ್’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಮೇಲೆ ಬಹಳ ದೊಡ್ಡ ನಿರೀಕ್ಷೆಗಳಿದ್ದವು ಆದರೆ ಲೈಗರ್ ಸಿನಿಮಾ ಅಟ್ಟರ್ ಫ್ಲಾಪ್ ಆಯಿತು. ಹಾಕಿದ್ದ ಬಂಡವಾಳದ ಅರ್ಧದಷ್ಟು ಸಹ ಮರಳಲಿಲ್ಲ. ಸಿನಿಮಾ ಫ್ಲಾಪ್ ಆದ ಬೆನ್ನಲ್ಲೆ ಪುರಿ ಜಗನ್ನಾಥ್ ವಿರುದ್ಧ ವಿತರಕರು ತಿರುಗಿ ಬಿದ್ದರು, ತಮ್ಮ ಕೆಲವು ಆಸ್ತಿಗಳನ್ನು ಮಾರಾಟ ಮಾಡಿ ವಿತರಕರಿಗೆ ಪುರಿ ಜಗನ್ನಾಥ್ ಹಣ ಮರಳಿಸಿದರು. ವಿಜಯ್ ದೇವರಕೊಂಡ ಸಹ ಸಿನಿಮಾದ ಫ್ಲಾಪ್ನಿಂದ ತೀವ್ರ ಬೇಸರಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದರು. ಲೈಗರ್ ಸಿನಿಮಾ ಫ್ಲಾಪ್ ಆದ ಬಳಿಕ ಕೆಲವು ಗೆಳೆಯರು ದೂರಾದರು ಎಂದು ಪುರಿ ಜಗನ್ನಾಥ್, ನಟ ಚಿರಂಜೀವಿ ಅವರೊಟ್ಟಿಗಿನ ಆನ್ಲೈನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ