ಬುರ್ಖಾ ಧರಿಸಿ ಕಾಣಿಸಿಕೊಂಡ ನಟಿ ಸಂಜನಾ, ಏನು ವಿಶೇಷತೆ?
Sanjana Galrani: ನಟಿ ಸಂಜನಾ ಗಲ್ರಾನಿ ಬುರ್ಖಾ ಧರಿಸಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಶೇಷ ಕಾರಣಕ್ಕಾಗಿ ಅವರು ಬುರ್ಖಾ ಧರಿಸಿ ವಿಡಿಯೋ ಮಾಡಿದ್ದಾರೆ.
ನಟಿ ಸಂಜನಾ ಗಲ್ರಾನಿ (Sanjana Galrani) ಸಿನಿಮಾ ರಂಗದಿಂದ ದೂರವಾಗಿದ್ದಾರೆ. ಡ್ರಗ್ಸ್ ಪ್ರಕರಣ ಇನ್ನಿತರೆ ವಿವಾದಗಳಲ್ಲಿ ಹೆಸರು ಕೇಳಿ ಬಂದು ಬಂಧನಕ್ಕೂ ಒಳಗಾಗಿದ್ದ ಸಂಜನಾ, ಅಜೀಜ್ ಹೆಸರಿನ ವೈದ್ಯರನ್ನು ವಿವಾಹವಾಗಿ ಇದೀಗ ಮಗುವೊಂದರ ತಾಯಿಯಾಗಿ ತಮ್ಮ ಪಾಡಿಗೆ ತಾವು ಸಂಸಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಸಂಜನಾ ಗಲ್ರಾನಿ ಯೂಟ್ಯೂಬ್ ಚಾನೆಲ್ ಒಂದನ್ನು ಸಹ ತೆರೆದಿದ್ದು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಅಪರೂಪಕ್ಕೆ ಬುರ್ಖಾ ತೊಟ್ಟು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಸಂಜನಾ ಬುರ್ಖಾ ತೊಟ್ಟಿರುವುದು ತಾವು ಹೋಗುತ್ತಿರುವ ಪ್ರವಾಸಕ್ಕಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಸಂಜನಾ, ”ನಾನು ಆಧ್ಯಾತ್ಮಿಕ ಪಯಣಕ್ಕೆ ಹೊರಟಿದ್ದೇನೆ, ನಾನು ನನ್ನ ಪರಿವಾರದೊಟ್ಟಿಗೆ ಮೆಕ್ಕ ಹಾಗೂ ಮದಿನಾಗಳ ವೀಕ್ಷಣೆಗೆ ತೆರಳುತ್ತಿದ್ದು ಅದೇ ಕಾರಣಕ್ಕೆ ಬುರ್ಖಾ ಧರಿಸಿದ್ದೇನೆ. ಎರಡು ವಾರಗಳ ಕಾಲ ನಾನು ಈ ಪಯಣದಲ್ಲಿ ಪಾಲ್ಗೊಳ್ಳಲಿದ್ದು ಟ್ರಾವೆಲ್ ವ್ಲಾಗ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿದ್ದೇನೆ. ಈ ನನ್ನ ಪಯಣಕ್ಕೆ ನಿಮ್ಮ ಆಶೀರ್ವಾದ ಇರಲಿ” ಎಂದಿದ್ದಾರೆ.
ಈ ವಿಡಿಯೋ ಜೊತೆಗೆ ಉದ್ದನೆಯ ಪೋಸ್ಟ್ ಅನ್ನು ಸಹ ಸಂಜನಾ ಗಲ್ರಾನಿ ಹಂಚಿಕೊಂಡಿದ್ದು ”ಮೂರು ವರ್ಷಗಳ ಹಿಂದೆ ನಾನು ಸಂಕಷ್ಟದಲ್ಲಿದ್ದಾಗ ಬೇಡಿಕೊಂಡಿದ್ದೆ, ನಾನು ವಿದೆಶಕ್ಕೆಂದು ಹೋಗುವುದಾದರೆ ಅದು ನಿನ್ನ ಮನೆಗೆ ಅದೂ ನನ್ನ ಪತಿಯೊಟ್ಟಿಗೆ ಆಗಿರುತ್ತದೆ ಎಂದುಕೊಂಡಿದ್ದೆ ಹಾಗಾಗಿ ಈಗ ಈ ಆಧ್ಯಾತ್ಮಿಕ ಪ್ರಯಾಣ ಮಾಡುತ್ತಿದ್ದೇನೆ ಎಂದಿದ್ದಾರೆ. ಮುಂದುವರೆದು, ”ನಾನು ಜಾತ್ಯಾತೀತಳಾಗಿದ್ದು ನನ್ನ ಆಯ್ಕೆಯ ಬಗ್ಗೆ ಬೇರೊಬ್ಬರು ವಿಮರ್ಶಿಸುವುದನ್ನು ವಿರೋಧಿಸುತ್ತೇನೆ. ನನ್ನ ಬದುಕನ್ನು ನನಗೆ ಬೇಕಾದಂತೆ ಬದುಕುವ ಅವಕಾಶ ನನಗೆ ಇದೆ. ನಾನು ಹಿಂದು ಧರ್ಮದಲ್ಲಿ ಹುಟ್ಟಿದಾಕೆ, ಕಲಿತಿದ್ದು ಕ್ರಿಶ್ಚಿಯನ್ ಧರ್ಮದಲ್ಲಿ ಈಗ ಮುಸ್ಲಿಂ ವ್ಯಕ್ತಿ ಅಜೀಜ್ ಪಾಶಾ ಅವರನ್ನು ವಿವಾಹವಾಗಿದ್ದೇನೆ. ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ” ಎಂದಿದ್ದಾರೆ.
ನಾನು ಜಾತ್ಯತೀತ ವ್ಯಕ್ತಿಯಾಗಿರುವಾಗ, ಜಾತ್ಯತೀತವಲ್ಲದ ಜನರು ನನ್ನ ಬಗ್ಗೆ ವಿಮರ್ಶೆ ಮಾಡುವುದನ್ನು ನಾನು ಇಷ್ಟಪಡುವುದಿಲ್ಲ. ಯಾರೂ ಸಹ ನನ್ನನ್ನಾಗಲಿ ಅಥವಾ ನನ್ನ ಪರಿವಾರವನ್ನಾಗಲಿ ಕೆಟ್ಟದಾಗಿ ನೋಡುವುದನ್ನು ಇಷ್ಟಪಡುವುದಿಲ್ಲ. ನಾನು ತುಂಬಾ ಸೂಕ್ಷ್ಮ ಮತ್ತು ಖಾಸಗಿತನ ಬಯಸುವ ವ್ಯಕ್ತಿ” ಎಂದಿದ್ದಾರೆ.
ಇದನ್ನೂ ಓದಿ:ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್ ಕಳಿಸಿದ ಆರೋಪ; ಪೊಲೀಸರ ಬಂಧನದಲ್ಲಿ ಆ್ಯಡಂ ಬಿದ್ದಪ್ಪ
ಇದೇ ಮೊದಲ ಬಾರಿಗೆ ತಾವು ಹೀಗೆ ಮೆಕ್ಕಾ ಹಾಗೂ ಮದಿನಾಕ್ಕೆ ಹೋಗುತ್ತಿರುವುದಾಗಿ ಸಂಜನಾ ಬರೆದುಕೊಂಡಿದ್ದು ಪತಿ ವೈದ್ಯ ಅಜೀಜ್ ಪಾಶಾ ಮಗ ಅಲಾರಿಕ್ ಪಾಶಾ ಹಾಗೂ ಇತರೆ ಕೆಲವು ಸಂಬಂಧಿಗಳೊಟ್ಟಿಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಯಮಿತವಾಗಿ ವಿಡಿಯೋಗಳನ್ನು ಸಂಜನಾ ಗಲ್ರಾನಿ ಹಂಚಿಕೊಳ್ಳುತ್ತಿರುತ್ತಾರೆ ಆದರೆ ಬುರ್ಖಾ ಧರಿಸಿ ವಿಡಿಯೋ ಮಾಡಿರುವುದು ಇದೇ ಮೊದಲು. ಸಂಜನಾರ ಈ ವಿಡಿಯೋಕ್ಕೆ ಹಲವರು ನಿಂದನಾತ್ಮಕ ಕಮೆಂಟ್ಗಳನ್ನು ಮಾಡಿದ್ದಾರೆ. ಕೆಲವರು ಸಂಜನಾ ಪಯಣಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Sun, 14 May 23