Vijay Deverakonda: ‘ಲೈಗರ್’ ಚಿತ್ರಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾದ ನಟ ವಿಜಯ್ ದೇವರಕೊಂಡ
'ಲೈಗರ್' ಚಿತ್ರಕ್ಕೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಬುಧವಾರ (ನ.30) ಹಾಜರಾಗಿದ್ದಾರೆ.
ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ಇತ್ತೀಚೆಗೆ ‘ಲೈಗರ್’ (Liger) ಸಿನಿಮಾದ ಮೂಲಕ ತೆರೆಗೆ ಎಂಟ್ರಿ ನೀಡಿದ್ದರು. ನಿರ್ದೇಶಕ ಪುರಿ ಜಗನ್ನಾಥ್ ‘ಲೈಗರ್’ ಚಿತ್ರವನ್ನು ಅದ್ದೂರಿ ಮತ್ತು ಬಹುಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಿದ್ದರು. ಪುರಿ ಜಗನ್ನಾಥ್, ನಟಿ ಮತ್ತು ನಿರ್ಮಾಪಕಿಯಾದ ಚಾರ್ಮಿ ಕೌರ್ ಮತ್ತು ಕರಣ್ ಜೋಹರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಆದರೂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣುವಲ್ಲಿ ವಿಫಲವಾಯಿತು. ‘ಲೈಗರ್’ ಸಿನಿಮಾಗೆ ಇಷ್ಟೊಂದು ಹಣ ಹೂಡಲು ಹೇಗೆ ಸಾಧ್ಯವಾಯ್ತು ಎಂಬ ಹಲವು ಅನುಮಾನಗಳು ಈ ಹಿಂದೆ ಮೂಡಿದ್ದವು. ಹಲವು ಕಂಪನಿಗಳು ‘ಲೈಗರ್’ (Liger) ಮೇಲೆ ಹಣ ಹೂಡಿದ್ದವು ಹಾಗೂ ವಿದೇಶಿ ಮೂಲದಿಂದಲೂ ಹಣ ಬಂದಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದರ ಬೆನ್ನಲೇ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಇಡಿ ವಿಚಾರಣೆಯನ್ನು ಎದುರಿಸಿದ್ದರು. ಈಗ ನಟ ವಿಜಯ್ ದೇವರಕೊಂಡ ಸರದಿಯಿದ್ದು, ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಬುಧವಾರ (ನ.30) ಹಾಜರಾಗಿದ್ದಾರೆ.
‘ಲೈಗರ್’ ಚಿತ್ರಕ್ಕೆ ಭಾರಿ ಬಂಡವಾಳ ಹೂಡಿಕೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಉಲ್ಲಂಘನೆಗೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ನಟ ವಿಜಯ್ ದೇವರಕೊಂಡ ವಿಚಾರಣೆಗೆ ಹಾಜರಾಗಿದ್ದಾರೆ. ಮೂಲಗಳ ಪ್ರಕಾರ ಜಾರಿ ನಿರ್ದೇಶನಾಲಯವು ಚಿತ್ರಕ್ಕೆ ಹೂಡಿಕೆ ಮಾಡಿದ ಕಂಪನಿಗಳ, ವಿಜಯ್ ದೇವರಕೊಂಡ ಪಡೆದ ಸಂಭಾವನೆ ಮತ್ತು ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಸೇರಿದಂತೆ ಇತರೆ ನಟ, ನಟಿಯರಿಗೆ ನೀಡಲಾದ ಸಂಭಾವನೆ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ED ವಿಚಾರಣೆ ಎದುರಿಸಿದ ಪುರಿ ಜಗನ್ನಾಥ್, ಚಾರ್ಮಿ ಕೌರ್; ‘ಲೈಗರ್’ ಬಂಡವಾಳದ ಮೇಲೆ ಅನುಮಾನ
ಆಗಸ್ಟ್ 25ರಂದು ‘ಲೈಗರ್’ ಸಿನಿಮಾ ತೆರೆ ಕಂಡಿತ್ತು. ಇದು ವಿಜಯ್ ದೇವರಕೊಂಡ ಅವರ ಮೊದಲ ಹಿಂದಿ ಸಿನಿಮಾ ಕೂಡ ಆಗಿದೆ. ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ‘ಲೈಗರ್’ ಎಡವಿತು. ಪರಿಣಾಮವಾಗಿ ಬಾಕ್ಸ್ ಆಫೀಸ್ನಲ್ಲೂ ಮುಗ್ಗರಿಸಿತು.
ಇದನ್ನೂ ಓದಿ: Liger: ‘ಲೈಗರ್ ಸಿನಿಮಾ ಬ್ಲಾಕ್ ಬಸ್ಟರ್’: ರಿಲೀಸ್ಗೂ ಮುನ್ನ ಘೋಷಿಸಿದ ವಿಜಯ್ ದೇವರಕೊಂಡ
‘ಲೈಗರ್’ ಸಿನಿಮಾದ ಹಣಕಾಸು ವ್ಯವಹಾರದಿಂದಾಗಿ ಪುರಿ ಜಗನ್ನಾಥ್ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಚಿತ್ರದ ವಿತರಕರ ಜೊತೆಗೆ ಪುರಿ ಕಿರಿಕ್ ಮಾಡಿಕೊಂಡಿದ್ದರು. ಸಿನಿಮಾ ಸೋತ ಬಳಿಕ ತಮಗೆ ಹಣ ವಾಪಸ್ ನೀಡಬೇಕು ಎಂದು ಕೆಲವು ವಿತರಕರು ಧಮ್ಕಿ ಹಾಕಿದ್ದರು. ಅಂಥವರಿಗೆ ಪುರಿ ಜಗನ್ನಾಥ್ ಖಡಕ್ ಆಗಿ ಉತ್ತರ ನೀಡಿದ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿತ್ತು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.